ಸರ್ಕಾರದ ವಿವಿಧ ಸೌಲಭ್ಯಕ್ಕಾಗಿ ಹೋರಾಟ
ಸರ್ಕಾರದ ವಿವಿಧ ಸೌಲಭ್ಯಕ್ಕಾಗಿ ನಗರಸಭೆಯಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರು, ವಿವಿಧ ಸ್ವಚ್ಛತಾ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರು ನಗರಸಭೆಯ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿಟಿಯು ಜಿಲ್ಲಾಧ್ಯಕ್ಷ ವಿಜಯ್ ದೊರೆರಾಜು ಅವರು, ಪೌರಕಾರ್ಮಿಕರಿಗೆ ಕಳೆದ 6-7 ತಿಂಗಳಿಂದ ವೇತನ ಬಾಕಿ ನೀಡಿಲ್ಲ. ಗೃಹಭಾಗ್ಯ ಯೋಜನೆಯಡಿ ಎಲ್ಲ ಸ್ವಚ್ಛತಾ ಕಾರ್ಮಿಕರಿಗೆ ವಸತಿ ನಿವೇಶನ ನೀಡುವುದು, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸುವುದು, ಪಿಎಫ್ ಮತ್ತು ಇಎಸ್‌ಐ ಸೌಲಭ್ಯ ಒದಗಿಸುವುದು, ಮೃತ ಪೌರಕಾರ್ಮಿಕರ ಕುಟಂಬದ ಸದಸ್ಯರಿಗೆ ಮಾನವೀಯತೆ ದೃಷ್ಟಿಯಿಂದ ಕೆಲಸ ನೀಡುವುದು ಸೇರಿದಂತೆ ಇತರ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ದೂರಿದರು.ಪೌರಕಾರ್ಮಿಕರ ಸೇವೆ ದಿನನಿತ್ಯ ಅಗತ್ಯಸೇವೆ ಎಂದು ಪರಿಗಣಿಸಿ, ನಗರಸಭೆಗೆ ಎಚ್ಚರಿಕೆಗಾಗಿ ಈಗಾಗಲೇ ಫೆಬ್ರವರಿ-1ರಿಂದ ಕಪ್ಪು ಪಟ್ಟಿ ಧರಿಸಿ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸಿದ್ದು, ಆದಾಗ್ಯೂ ಪೌರಕಾರ್ಮಿಕರ ಹಾಗೂ ವಿವಿಧ ಸ್ವಚ್ಛತಾ ಕಾರ್ಮಿಕರ ಬೇಡಿಕೆಗಳಿಗೆ ನಗರಸಭೆ ಸ್ಪಂದಿಸದೇ ಇರುವುದರಿಂದ ಈ ಅನಿರ್ದಿಷ್ಟಾವಧಿ ಧರಣಿ ಅನಿವಾರ್ಯವಾಗಿದೆ ಎಂದು ಹೇಳಿದರು.