ನಾಲ್ಕನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಮುಷ್ಕರ

KannadaprabhaNewsNetwork | Published : Feb 14, 2025 12:34 AM

ಸಾರಾಂಶ

ಗ್ರಾಮ ಆಡಳಿತ ಅಧಿಕಾರಿಗಳು ಈ ಹಿಂದೆ ಕೈಗೊಂಡ ಮುಷ್ಕರದ ಯಾವುದೇ ಬೇಡಿಕೆ ರಾಜ್ಯ ಸರ್ಕಾರ ಈಡೇರಿಸದ ಕಾರಣ ರಾಜ್ಯಾದ್ಯಂತ ಮತ್ತೆ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರಕ್ಕೆ ಇಳಿದಿದ್ದು

ಲಕ್ಷ್ಮೇಶ್ವರ: ಗ್ರಾಮ ಆಡಳಿತ ಅಧಿಕಾರಿಗಳ ೨ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ರಾಜ್ಯಾದ್ಯಂತ ನಡೆಯುತ್ತಿದ್ದು, ಪಟ್ಟಣದ ತಹಸೀಲ್ದಾರ ಕಚೇರಿ ಎದುರು ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಮುಷ್ಕರ ೪ ನೇ ದಿನಕ್ಕೆ ಕಾಲಿಟ್ಟಿದ್ದು, ಗುರುವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಜಿ.ಡಿ. ಹವಳದ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಿ.ಎಸ್. ಹರ್ಲಾಪೂರ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳು ಈ ಹಿಂದೆ ಕೈಗೊಂಡ ಮುಷ್ಕರದ ಯಾವುದೇ ಬೇಡಿಕೆ ರಾಜ್ಯ ಸರ್ಕಾರ ಈಡೇರಿಸದ ಕಾರಣ ರಾಜ್ಯಾದ್ಯಂತ ಮತ್ತೆ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರಕ್ಕೆ ಇಳಿದಿದ್ದು, ಇದರಿಂದ ಸಾರ್ವಜನಿಕರ ಕೆಲಸಗಳ ಮೇಲೆ ಸಮಸ್ಯೆ ಉಂಟಾಗುತ್ತದೆ, ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯ ಬೇಕು, ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಗುಣಮಟ್ಟದ ಟೇಬಲ್ ಕುರ್ಚಿ, ಅಲ್ಮೆರಾ, ಮೊಬೈಲ್ ಸಿಯುಜಿ ಸಿಮ್ ಮತ್ತು ಡೇಟಾ, ಲ್ಯಾಪ್ ಟಾಪ್, ಪ್ರಿಂಟರ್ ಸ್ಕ್ಯಾನರ್, ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು, ಈ ಹೋರಾಟಕ್ಕೆ ನೈತಿಕವಾಗಿ ಧೈರ್ಯ ತುಂಬುವ ನಿಟ್ಟಿನಲ್ಲಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದೇವೆ ಎಂದು ಹೇಳಿದರು.

ನಂತರ ವಿವಿಧ ಸಂಘಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿ ತಹಸೀಲ್ದಾರ ವಾಸುದೇವ ಸ್ವಾಮಿ ಮನವಿ ಅರ್ಪಿಸಿದರು.

ಈ ವೇಳೆ ಸಂಘ ಪ್ರಧಾನ ಕಾರ್ಯದರ್ಶಿ ಎಂ.ಎ. ನದಾಫ, ಮಂಜುನಾಥ ವಾರದ ಹಾಗೂ ಪದಾಧಿಕಾರಿಗಳು, ಎನ್‌ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಎಫ್.ಎಸ್. ತಳವಾರ, ಆರ್.ಡಿ.ಪಿ.ಆರ್ ನೌಕರರ ಸಂಘದ ಅಧ್ಯಕ್ಷ ಕೃಷ್ಣಪ್ಪ ಧರ್ಮರ, ವಿಕಲಚೇತನ ನೌಕರರ ಸಂಘದ ಅಧ್ಯಕ್ಷ ಬಿ.ಎಂ.ಕುಂಬಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಂಜುನಾಥ ಚವ್ಹಾಣ, ಎಂ.ಬಿ ಹೂಗಾರ, ಎ.ಎಂ. ಅಕ್ಕಿ, ಶ್ರೀಕಾಂತ ಬಾಲೆಹೊಸೂರ, ಮಂಜುನಾಥ ಕೊಕ್ಕರಗುಂದಿ ಹಾಗೂ ಎಲ್ಲ ನಿರ್ದೇಶಕರು ಪದಾಧಿಕಾರಿಗಳು ಹಾಗೂ ಇಲಾಖೆಯ ನೌಕರ ಬಾಂಧವರು ಹಾಜರಿದ್ದು ಸಂಪೂರ್ಣ ಬೆಂಬಲ ಸೂಚಿಸಿದರು.

ಮುಷ್ಕರ ನಿರತ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ತಾಲೂಕಾಧ್ಯಕ್ಷ ಡಿ.ಎಸ್.ಕುಲಕರ್ಣಿ, ಉಪಾಧ್ಯಕ್ಷ ಎಚ್.ಕೃಷ್ಣಮೂರ್ತಿ, ಬಿ.ವೈ. ಮಲ್ಲಿಗವಾಡ, ಎನ್.ಬಿ.ಕನೋಜ, ಸುಬೇದಖಾನ ಪಠಾಣ, ಡಿ.ಎಲ್.ವಿಭೂತಿ, ಆರ್.ಎನ್. ನೆಗಳೂರ, ಫಾತೀಮಾ ಪತ್ತೆಖಾನ, ಸೌಮ್ಯ ಕೆ, ಕೆ.ಎನ್.ಪಾಟೀಲ್ ಮುಂತಾದವರಿದ್ದರು.

Share this article