೬೯ ಅಡಿ ರಸ್ತೆ ವಿಸ್ತರಣೆ ಆಗದಿದ್ದರೆ ಅನಿರ್ಧಿಷ್ಟಾವಧಿ ಹೋರಾಟ

KannadaprabhaNewsNetwork |  
Published : May 14, 2026, 12:30 AM IST
13 ಜೆ.ಜಿ.ಎಲ್.1) ಜಗಳೂರು ಪಟ್ಟಣದಲ್ಲಿ ರಸ್ತೆ ಅಗಲೀಕರಣ ವಿಳಂಬ ಖಂಡಿಸಿ ಎಸಿ ಸಂತೋಷ್ ಕುಮಾರ್‌ ಗೆ ವಿವಿಧ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ಜಗಳೂರು ಪಟ್ಟಣದ ವ್ಯಾಪ್ತಿಯಲ್ಲಿ ಹಾದುಹೋಗಿರುವ ಮಲ್ಪೆ-ಮೊಳಕಾಲ್ಕೂರು ರಾಜ್ಯ ಹೆದ್ದಾರಿ-೬೯ರ ವಿಸ್ತರಣೆ ಕಾಮಗಾರಿಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಾರ್ವಜನಿಕರಿಗೆ ನೀಡಿದ ವಾಗ್ದಾನವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿ ರಸ್ತೆ ಅಗಲೀಕರಣ ಹೋರಾಟ ಸಮಿತಿಯಿಂದ ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್‌ಕುಮಾರ್ ಮತ್ತು ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಜಗಳೂರು ಪಟ್ಟಣದಲ್ಲಿ ಮನವಿ ಸಲ್ಲಿಸಲಾಯಿತು.

- ಜಗಳೂರಲ್ಲಿ ರಸ್ತೆ ಅಗಲೀಕರಣ ಹೋರಾಟ ಸಮಿತಿ ಎಚ್ಚರಿಕೆ । ದಾವಣಗೆರೆ ಎಸಿ, ಸಹಸೀಲ್ದಾರ್‌ಗೆ ಮನವಿ

- - -

ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದ ವ್ಯಾಪ್ತಿಯಲ್ಲಿ ಹಾದುಹೋಗಿರುವ ಮಲ್ಪೆ-ಮೊಳಕಾಲ್ಕೂರು ರಾಜ್ಯ ಹೆದ್ದಾರಿ-೬೯ರ ವಿಸ್ತರಣೆ ಕಾಮಗಾರಿಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಾರ್ವಜನಿಕರಿಗೆ ನೀಡಿದ ವಾಗ್ದಾನವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿ ರಸ್ತೆ ಅಗಲೀಕರಣ ಹೋರಾಟ ಸಮಿತಿಯಿಂದ ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್‌ಕುಮಾರ್ ಮತ್ತು ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಜಗಳೂರು ಪಟ್ಟಣದಲ್ಲಿ ಮನವಿ ಸಲ್ಲಿಸಲಾಯಿತು.

ಹೋರಾಟಗಾರ ಹಾಗೂ ವಕೀಲ ಆರ್. ಓಬಳೇಶ್ ಈ ಸಂದರ್ಭ ಮಾತನಾಡಿ, ರಾಜ್ಯ ಹೆದ್ದಾರಿ ನಿಯಮದಂತೆ ರಸ್ತೆ ವಿಸ್ತರಣೆ ಆಗುತ್ತಿಲ್ಲ. ಕೆಲವು ಕಡೆ ಮಾತ್ರ 7 ಮೀಟರ್ ಕಾಂಕ್ರೀಟೀಕರಣ ಮಾಡಲಾಗಿದೆ. ಇನ್ನು ಕೆಲವು ಕಡೆ ರಸ್ತೆಯನ್ನು ಕಿತ್ತು ಕಚ್ಚಾ ರಸ್ತೆಯನ್ನಾಗಿ ಬಿಡಲಾಗಿದೆ. ಆಗಸ್ಟ್ ೨೦೨೫ರಲ್ಲಿ ನಡೆದ ಧರಣಿ ವೇಳೆ ಜಿಲ್ಲಾಧಿಕಾರಿ ಹಾಗೂ ಶಾಸಕರು ರಸ್ತೆಯನ್ನು ಮಧ್ಯ ಭಾಗದಿಂದ ಕಡ್ಡಾಯವಾಗಿ ೬೯ ಅಡಿ ವಿಸ್ತರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಅದನ್ನು ಮರೆತು ಕೇವಲ ೩೫ ಅಡಿಗೆ ಸೀಮಿತಗೊಳಿಸಿ ಚರಂಡಿ ನಿರ್ಮಿಸಲಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪಾರದರ್ಶಕತೆ ಕೊರತೆ:

ದ.ಸಂ.ಸ. ತಾಲೂಕು ಸಂಚಾಲಕ ಮಲೆಮಾಚಿಕೆರೆ ಸತೀಶ್ ಮಾತನಾಡಿ, ಗುತ್ತಿಗೆದಾರರು ಕಾಮಗಾರಿಗೆ ಬಿಡುಗಡೆಯಾದ ಅನುದಾನದ ವಿವರ ನೀಡಿಲ್ಲ. ಕಟ್ಟಡ ನೆಲಸಮಕ್ಕೆ ನೀಡುವ ಪರಿಹಾರದ ಬಗ್ಗೆಯೂ ಮಾಹಿತಿ ಇಲ್ಲ. ಕಾಮಗಾರಿ ಸ್ಥಳದಲ್ಲಿ ಯಾವುದೇ ಮಾಹಿತಿ ಫಲಕಗಳನ್ನೇ ಅಳವಡಿಸಿಲ್ಲ. ಅಧಿಕಾರಿಗಳು ಲಿಖಿತವಾಗಿ ಮಾಹಿತಿ ಕೇಳಿದರೂ ಸ್ಪಂದಿಸುತ್ತಿಲ್ಲ. ಕಾಮಗಾರಿಯ ಕಾಲಮಿತಿ ಮತ್ತು ಮೊತ್ತದ ಬಗ್ಗೆ ಸಾರ್ವಜನಿಕರಿಗೆ ಕತ್ತಲಲ್ಲಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನಿರ್ದಿಷ್ಟಾವಧಿ ಹೋರಾಟದ ಮುನ್ನೆಚ್ಚರಿಕೆ:

ಈ ಹಿಂದೆ ಭರವಸೆ ನೀಡಿದಂತೆ ಅಧಿಕಾರಿಗಳು ತಕ್ಷಣ ಸಭೆ ಕರೆದು, ೬೯ ಅಡಿವರೆಗೆ ರಸ್ತೆ ಅಗಲೀಕರಣದ ಬಗ್ಗೆ ಸ್ಪಷ್ಟನೆ ನೀಡಬೇಕು. ಜಗಳೂರಿನ ಸಮಗ್ರ ಅಭಿವೃದ್ಧಿಗೆ ಇದು ಅತ್ಯಗತ್ಯ. ಒಂದುವೇಳೆ ಬೇಡಿಕೆಗಳು ಈಡೇರದಿದ್ದರೆ ಬೀದಿಗಿಳಿದು ಅನಿರ್ದಿಷ್ಟಾವಧಿ ಹೋರಾಟ ಮಾಡುವುದು ಅನಿವಾರ್ಯ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರಾದ ಅಂಜಿನಪ್ಪ ಮತ್ತು ಧನ್ಯಕುಮಾರ್ ಎಚ್ಚರಿಸಿದರು.

ಮನವಿ ಸಲ್ಲಿಸುವ ವೇಳೆ ಹೋರಾಟ ಸಮಿತಿ ಅಧ್ಯಕ್ಷ ಓಬಯ್ಯ, ಗೌರಿಪುರ ಸತ್ಯಮೂರ್ತಿ, ಇಂದಿರಮ್ಮ, ವಕೀಲರಾದ ಕಿರಣ್ ಕುಮಾರ್, ಮಹಂತೇಶ್, ಕೆ.ವಿ. ರುದ್ರೇಶ್, ಮರೇನಹಳ್ಳಿ ಓಬಳೇಶ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

- - -

-13ಜೆ.ಜಿ.ಎಲ್.1:

ಜಗಳೂರು ಪಟ್ಟಣದಲ್ಲಿ ರಸ್ತೆ ಅಗಲೀಕರಣ ವಿಳಂಬ ಖಂಡಿಸಿ, 69 ಅಡಿವರೆಗೆ ರಸ್ತೆ ವಿಸ್ತರಣೆಗೆ ಒತ್ತಾಯಿಸಿ ಎಸಿ ಸಂತೋಷ್ ಕುಮಾರ್‌ ಅವರಿಗೆ ವಿವಿಧ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಲ ಕಾರ್ಮಿಕರ ಪತ್ತೆಗೆ ಕ್ರಮವಹಿಸಲು ನ್ಯಾಯಾಧೀಶರ ಸೂಚನೆ
ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ವಿಶ್ವ ಅಮ್ಮಂದಿರ ದಿನ