ಕನ್ನಡಪ್ರಭ ವಾರ್ತೆ ಕೋಲಾರಕಳೆದ ೨೩ ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಬೆಮೆಲ್ ಕಾರ್ಮಿಕರ ಜೊತೆ ಮಾತುಕತೆ ನಡೆಸದೇ ನಿರ್ಲಕ್ಷ್ಯ ವಹಿಸಿರುವ ಬೆಮೆಲ್ ಆಡಳಿತ ಮಂಡಳಿಯ ವರ್ತನೆಯನ್ನು ಖಂಡಿಸಿ, ತಕ್ಷಣ ಕಾರ್ಮಿಕರ ಜೊತೆ ಮಾತುಕತೆ ನಡೆಸಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ಸೂರ್ಯನಾರಾಯಣ ಮಾತನಾಡಿ, ಕೇಂದ್ರದ ಸರ್ಕಾರಿ ಒಡೆತನದ ಹೆಮ್ಮೆಯ ಬೆಮೆಲ್ ಕಾರ್ಖಾನೆಯಲ್ಲಿ ಪ್ರಸ್ತುತ ಕಾಯಂ ನೌಕರರ ಪ್ರಮಾಣ ಅತ್ಯಂತ ಕಡಿಮೆಯಾಗಿದ್ದು, ಗುತ್ತಿಗೆ ನೌಕರರೇ ಬೆಮೆಲ್‌ನ ಬಹುತೇಕ ಎಲ್ಲಾ ಉತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದರಿಂದ ಬೆಮೆಲ್ ಕಾರ್ಖಾನೆಯ ವ್ಯವಹಾರ ಮತ್ತು ಲಾಭವು ಪ್ರತಿ ವರ್ಷ ಹೆಚ್ಚಾಗುತ್ತಿದೆ. ಗುತ್ತಿಗೆ ನೌಕರರಿಗೆ ಅತ್ಯಂತ ಕಡಿಮೆ ವೇತನ ಮತ್ತು ಸೌಲಭ್ಯಗಳನ್ನು ನೀಡಿ ಸುಮಾರು ೩೦ ವರ್ಷಗಳಿಂದ ದುಡಿಸಿಕೊಳ್ಳಲಾಗುತ್ತಿದೆ. ನೂರಾರು ಗುತ್ತಿಗೆ ಕಾರ್ಮಿಕರು ೩೦ ವರ್ಷ ಸೇವೆ ಸಲ್ಲಿಸಿ, ನಿವೃತ್ತಿಯ ಸಂದರ್ಭದಲ್ಲಿ ಯಾವುದೇ ಪರಿಹಾರ ಇಲ್ಲದೇ ಬರಿಗೈಲಿ ಮನೆಗೆ ಕಳುಹಿಸುತ್ತಿರುವ ಕ್ರಮವು ಖಂಡನೀಯವಾಗಿದೆ ಎಂದು ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬೆಮೆಲ್ ಆಡಳಿತ ಮಂಡಳಿಯು ಕಾಯಂ ನೌಕರರ ನೇಮಕಾತಿಯ ಸಂದರ್ಭದಲ್ಲಿ ಸೇವಾ ಹಿರಿತನ ಮತ್ತು ನೈಪುಣ್ಯತೆ ಆಧಾರದ ಮೇಲೆ ಗುತ್ತಿಗೆ ನೌಕರರಿಗೆ ಕಲ್ಪಿಸಿದ್ದ ಅವಕಾಶವನ್ನು ಇತ್ತೀಚೆಗೆ ಕೈಬಿಡಲಾಗಿದೆ. ಈ ಕುರಿತು ಕಾರ್ಮಿಕ ಸಂಘವು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಬೆಮಲ್ ಗುತ್ತಿಗೆ ಕಾರ್ಮಿಕರ ಹಿರಿತನ ಮತ್ತು ನೈಪುಣ್ಯತೆಯನ್ನು ಪರಿಗಣಿಸಿ ಅವಕಾಶ ನೀಡುವಂತೆ ನೀಡಿರುವ ಆದೇಶವನ್ನು ಬೆಮೆಲ್ ಉಲ್ಲಂಘಿಸಿದೆ. ತಕ್ಷಣ ಬೆಮೆಲ್ ಆಡಳಿತ ಮಂಡಳಿಯು ಹೋರಾಟ ನಿರತ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಕಳೆದ ಒಂದು ವರ್ಷದಿಂದ ಗುತ್ತಿಗೆ ನೌಕರರು ಹಲವಾರು ರೀತಿ ಹೋರಾಟ ನಡೆಸುತ್ತಿದ್ದರೂ ಬೆಮೆಲ್ ಆಡಳಿತ ಮಂಡಳಿಯು ಬೇಡಿಕೆಗಳನ್ನು ಈಡೇರಿಸದೇ ಕಾಲಹರಣ ಮಾಡುತ್ತಿದೆ. ಬೆಮೆಲ್ ಕಾಯಂ ಕಾರ್ಮಿಕರ ನೇಮಕಾತಿಯಲ್ಲಿ ಜಿಲ್ಲೆಯ ಯುವಕರಿಗೆ ಆಧ್ಯತೆಯನ್ನು ನೀಡದೇ ಉತ್ತರ ಭಾರತದವರಿಗೆ ವಿಶೇಷ ಆಧ್ಯತೆ ನೀಡುತ್ತಿರುವುದು ಖಂಡನೀಯ. ಅತ್ಯಂತ ಕಡಿಮೆ ವೇತನ ಸಿಗುವ ಗುತ್ತಿಗೆ ಕೆಲಸವನ್ನು ಜಿಲ್ಲೆಯವರಿಗೆ ನೀಡುತ್ತಿದ್ದಾರೆ. ಈ ವರ್ತನೆಯನ್ನು ಬದಲಿಸಿಕೊಳ್ಳದಿದ್ದರೆ ಜಿಲ್ಲೆಯ ಜನ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿ, ದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ದಿನಗಳಿಂದ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿದೆ. ಜಿಲ್ಲೆಯ ಬೆಮೆಲ್ ಕಾರ್ಮಿಕರ ಹಿತ ಮುಖ್ಯವಾಗಿದ್ದು, ಕೆಜಿಎಫ್ ಶಾಸಕಿ ರೂಪಕಲಾ ಅವರೊಂದಿಗೆ ಮಾತನಾಡಿ ಸಿಎಂ ಸಿದ್ದರಾಮಯ್ಯ ಜೊತೆಗೆ ಸಭೆ ನಡೆಸಲು ಸಮಯ ನಿಗದಿ ಮಾಡಲಾಗುತ್ತದೆ. ಅಲ್ಲಿಯೂ ಪರಿಹಾರ ಸಿಗದೆ ಹೋದರೆ ಮುಂದೆ ಬೆಂಗಳೂರಿನ ಬೆಮೆಲ್ ಕಚೇರಿ ಮುಂದೆಯೇ ಪ್ರತಿಭಟನೆ ನಡೆಸೋಣ. ನಿಮ್ಮೊಂದಿಗೆ ಹೋರಾಟಕ್ಕೆ ನಾವು ಸದಾ ಸಿದ್ಧ ಎಂದರು.ಜಿಲ್ಲಾ ಮುಖಂಡರಾದ ವಿ.ಗೀತಾ, ಎ.ಆರ್.ಬಾಬು, ಪಿ.ತಂಗರಾಜ್, ಎಂ.ವಿಜಯಕೃಷ್ಣ, ಮುಖಂಡರಾದ ಟಿ.ಎಂ.ವೆಂಕಟೇಶ್, ಅಶೋಕ್, ಅಪ್ಪಯ್ಯಣ್ಣ, ವೀರಭದ್ರ, ಗಂಗಮ್ಮ, ಪುಣ್ಯಹಳ್ಳಿ ಶಂಕರ್, ಆನಂದರಾಜ್, ಜಯರಾಮನ್, ಆಶಾ, ಎಂ.ಭೀಮರಾಜ್ ಇದ್ದರು.