ಕನ್ನಡಕ್ಕೆ ಸಹೋದರತ್ವ ಬೆಸೆವ ಶಕ್ತಿ ಇದೆ: ಸೋಸಲೆ

KannadaprabhaNewsNetwork | Published : Nov 28, 2024 12:31 AM

ಸಾರಾಂಶ

ರಾಮನಗರ: ಶಾಸನ ಹಾಗೂ ಸಾಹಿತ್ಯ ಆಧಾರದ ಮೇಲೆ ಸಾವಿರಾರು ವರ್ಷಗಳ ಚರಿತ್ರೆ ಹೊಂದಿರುವ ಕನ್ನಡ ಭಾಷೆಗೆ ಬಂಧುತ್ವ, ಸಹೋದರತ್ವ ಬೆಸೆಯುವ ಶಕ್ತಿ ಇದೆ ಎಂದು ಹಂಪಿ ಕನ್ನಡ ವಿಶ್ವವಿದಾಲಯದ ದೂರ ಶಿಕ್ಷಣ ನಿರ್ದೇಶನಾಲಯ ಚರಿತ್ರೆ ವಿಭಾಗದ ನಿರ್ದೇಶಕ ಡಾ.ಎನ್.ಚಿನ್ನಸ್ವಾಮಿ ಸೋಸಲೆ ಹೇಳಿದರು.

ರಾಮನಗರ: ಶಾಸನ ಹಾಗೂ ಸಾಹಿತ್ಯ ಆಧಾರದ ಮೇಲೆ ಸಾವಿರಾರು ವರ್ಷಗಳ ಚರಿತ್ರೆ ಹೊಂದಿರುವ ಕನ್ನಡ ಭಾಷೆಗೆ ಬಂಧುತ್ವ, ಸಹೋದರತ್ವ ಬೆಸೆಯುವ ಶಕ್ತಿ ಇದೆ ಎಂದು ಹಂಪಿ ಕನ್ನಡ ವಿಶ್ವವಿದಾಲಯದ ದೂರ ಶಿಕ್ಷಣ ನಿರ್ದೇಶನಾಲಯ ಚರಿತ್ರೆ ವಿಭಾಗದ ನಿರ್ದೇಶಕ ಡಾ.ಎನ್.ಚಿನ್ನಸ್ವಾಮಿ ಸೋಸಲೆ ಹೇಳಿದರು.

ನಗರದ ಗೌಸಿಯಾ ತಾಂತ್ರಿಕ ಮಹಾ ವಿದ್ಯಾಲಯದ ಆವರಣದಲ್ಲಿನ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಸೇರಿದಂತೆ ದ್ರಾವಿಡ ಭಾಷೆಗಳೆಲ್ಲವು ಬಂಧುತ್ವ ಬೆಸೆಯುವ ಹಾಗೂ ಭಾತೃತ್ವ ಕಂಡುಕೊಂಡ ಭಾಷೆಗಳಾಗಿವೆ ಎಂದರು.

ಕರ್ನಾಟಕ ಮತ್ತು ಕನ್ನಡಿಗ ಅಂದರೆ ಅದು ಜನ. ಜನರಿಲ್ಲದ ಭಾಷೆ, ಅದು ಭಾಷೆಯಾಗಲು ಸಾಧ್ಯವಿಲ್ಲ. ಜನರು ಮಾತನಾಡುವ ಭಾಷೆ ಅಳಿವಿನ ಭಾಷೆಯಾಗದೆ ಬದುಕಿನ, ಅನ್ನದ ಭಾಷೆಯಾಗಬೇಕು. ದೇಶದಲ್ಲಿ ಹತ್ತಾರು ಭಾಷೆಗಳಿವೆ. ಆದರೆ, 12 ಭಾಷೆಗಳಿಗೆ ಮಾತ್ರ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಅದರಲ್ಲಿ ಕನ್ನಡ ಭಾಷೆಯೂ ಸೇರಿದೆ.

ಕನ್ನಡ ಭಾಷೆಯಲ್ಲಿ ಪಾಳಿ, ಪ್ರಾಕೃತ, ಸಂಸ್ಕೃತ, ಉರ್ದು, ಇಂಗ್ಲೀಷ್ ಭಾಷೆಯ ಸಮ್ಮಿಲನ ಇದೆ. ಇಷ್ಟೆಲ್ಲ ಭಾಷೆಗಳ ದಾಳಿಯ ನಡುವೆಯೂ ಕನ್ನಡ ಭಾಷೆ ತನ್ನ ತನವನ್ನು ಉಳಿಸಿಕೊಂಡಿದೆ. ಕನ್ನಡ ಭಾಷೆ ದಾಳಿ ಅಥವಾ ಪ್ರವೇಶ ಮಾಡಿದ ಭಾಷೆ ಅಲ್ಲ. ಈ ನೆಲದ ಭಾಷೆಯಾಗಿರುವ ಕಾರಣಕ್ಕೆ ಶಾಸ್ತ್ರೀಯ ಸ್ಥಾನಮಾನದ ಗೌರವ ಸಂದಿದೆ ಎಂದು ಹೇಳಿದರು.

ಕನ್ನಡ ಕೇವಲ ಅಕ್ಷರ ಭಾಷೆಯಾಗಿದ್ದರೆ ಅದು ಗುರುಕುಲ, ಅಗ್ರಹಾರಗಳಲ್ಲಿ ಮಾತ್ರ ಉಳಿಯುತ್ತಿತ್ತು. ಆದರೆ, ಕನ್ನಡ ಭಾಷೆ ಜಾನಪದ, ತತ್ವಪದ, ನೀತಿಗಳು, ಐತಿಹ್ಯ, ಪುರಾಣಗಳಲ್ಲಿ ಉಳಿದುಕೊಂಡಿತ್ತಲ್ಲದೆ ಜನರಿಂದ ಜನರ ಬಾಯಿಗೆ ಪಸರಿಸಿ ಶಾಶ್ವತವಾಗಿ ಉಳಿದಿದೆ. ಕನ್ನಡ ಭಾಷೆಗೆ ಬಹುದೊಡ್ಡದಾದ ನಲ್ಮೆಯ ಸೊಗಡಿದೆ. ಆ ಸೊಗಡು ಎಲ್ಲರನ್ನು ಆತ್ಮೀಯವಾಗಿ ಬೆಸೆಯುತ್ತದೆಯೇ ಹೊರತು ದೂರ ತಳ್ಳುವುದಿಲ್ಲ ಎಂದು ಚಿನ್ನಸ್ವಾಮಿ ಸೋಸಲೆ ತಿಳಿಸಿದರು.

27ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಗೌಸಿಯಾ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಖ್ಯ ಅತಿಥಿಗಳು.

Share this article