ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಪೊಲೀಸ್ ಮತ್ತು ಕಂದಾಯ ಇಲಾಖೆ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಪ್-2024 ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುಶಾಲನಗರ ತಾಲೂಕು ಶಿಕ್ಷಣ ಇಲಾಖೆ ತಂಡ ಟ್ರೋಫಿ ಗೆದ್ದುಕೊಂಡಿದೆ.ಕುಶಾಲನಗರ ಡಿವೈಎಸ್‌ಪಿ ನೇತೃತ್ವದ ಪೊಲೀಸ್ ಇಲಾಖೆ ತಂಡ ರನ್ನರ್‌ಅಪ್ ಸ್ಥಾನ ಗಳಿಸಿದೆ.
ಕುಶಾಲನಗರ ಪೊಲೀಸ್, ಶಿಕ್ಷಣ, ಪುರಸಭೆ, ವಕೀಲರ ತಂಡ, ಕಂದಾಯ ಇಲಾಖೆ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಒಟ್ಟು ಆರು ತಂಡಗಳು ಸ್ವಾತಂತ್ರ್ಯೋತ್ಸವದ ಅಂಗವಾಗಿ ಕುಶಾಲನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಕ್ರಿಕೆಟ್ ಪಂದ್ಯಗಳನ್ನಾಡಿದರು.ಸಮಾರೋಪ ಸಮಾರಂಭದಲ್ಲಿ ಸೋಮವಾರಪೇಟೆ ಉಪವಿಭಾಗದ ಉಪ ಪೊಲೀಸ್ ಅಧ್ಯಕ್ಷ ಆರ್.ವಿ. ಗಂಗಾಧರಪ್ಪ ಮಾತನಾಡಿ, ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಡಾ ಸ್ಫೂರ್ತಿ ಗಳಿಸಬೇಕು. ಪಂದ್ಯಾಟದಲ್ಲಿ ಸೋಲು ಗೆಲುವು ಮುಖ್ಯವಲ್ಲ ಪಾಲ್ಗೊಳ್ಳುವುದು ಮುಖ್ಯ ಎಂದು ಹೇಳಿದರು.
ಕಂದಾಯ ಇಲಾಖೆಯ ತಂಡದ ನಾಯಕ ಹಾಗೂ ಕಂದಾಯ ಪರಿವೀಕ್ಷಕ ಎಚ್ಎಸ್ ಸಂತೋಷ್ ಮಾತನಾಡಿ, ಕೇವಲ ಎರಡು ದಿನಗಳ ಅಂತರದಲ್ಲಿ ಆರು ತಂಡಗಳನ್ನು ರಚನೆ ಮಾಡಿ ಪಂದ್ಯಾಟ ನಡೆಸಲಾಗಿದೆ. ಈ ಸಂದರ್ಭ ಕೈಜೋಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ತಾಲೂಕು ಕಾರ್ಯನಿರತ ಪತ್ರಕರ್ತ ಸಂಘ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿದರು.
ಕುಶಾಲನಗರ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಪ್ರಕಾಶ್, ತಾಲೂಕು ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ ಅವರು ಪಂದ್ಯಾವಳಿ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.ಡಿವೈಎಸ್ಪಿ ಗಂಗಾಧರಪ್ಪ ಅವರ ನೇತೃತ್ವದ ಪೊಲೀಸ್ ತಂಡ, ಕಂದಾಯ ಪರಿವೀಕ್ಷಕ ಸಂತೋಷ್ ಅವರ ನೇತೃತ್ವದ ಕಂದಾಯ ಇಲಾಖೆ ತಂಡ, ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ನೇತೃತ್ವದ ಪುರಸಭಾ ತಂಡ, ಪ್ರತಾಪ್ ನೇತೃತ್ವದ ಶಿಕ್ಷಕರ ತಂಡ, ವಕೀಲರಾದ ಕೆ.ಪಿ. ಶರತ್ ನೇತೃತ್ವದ ವಕೀಲರ ತಂಡ, ಕೆ.ಜೆ. ಶಿವರಾಜ್ ನೇತೃತ್ವದ ಪತ್ರಕರ್ತರ ತಂಡ ಪಾಲ್ಗೊಂಡಿದ್ದು, ಎಲ್ಲ ತಂಡಗಳಿಗೂ ಟ್ರೋಫಿ ವಿತರಿಸಲಾಯಿತು.