ಹುಬ್ಬಳ್ಳಿಯಲ್ಲಿ ಸಡಗರ-ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

KannadaprabhaNewsNetwork |  
Published : Aug 16, 2025, 02:01 AM IST

ಸಾರಾಂಶ

ಈದ್ಗಾ ಮೈದಾನದಲ್ಲಿ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಧ್ವಜಾರೋಹಣ

ಹುಬ್ಬ‍ಳ್ಳಿ: ನಗರದೆಲ್ಲೆಡೆ 79ನೇ ಸ್ವಾತಂತ್ರ ದಿನಾಚರಣೆಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ತಾಲೂಕಾಡಳಿತ, ಈದ್ಗಾ ಮೈದಾನ, ಮಹಾನಗರ ಪಾಲಿಕೆ, ವಿವಿಧ ಪಕ್ಷಗಳ ಕಚೇರಿ, ಶಾಲೆ-ಕಾಲೇಜುಗಳು, ಸಂಘ-ಸಂಸ್ಥೆಗಳಲ್ಲಿ ಧ್ವಜಾರೋಹಣ ಮಾಡಿ ಧ್ವಜವಂದನೆ ಸಲ್ಲಿಸಲಾಯಿತು.

ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಹುಬ್ಬಳ್ಳಿ ನಗರ ತಾಲೂಕು ಸ್ವಾತಂತ್ರ್ಯೋತ್ಸವ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ 79ನೇ ಸ್ವಾತಂತ್ರ್ಯ ದಿನ ನಿಮಿತ್ತ ತಹಸೀಲ್ದಾರ್‌ ಮಹೇಶ ಗಸ್ತೆ ಧ್ವಜಾರೋಹಣ ಮಾಡಿದರು. ಈ ವೇಳೆ ಮಾತನಾಡಿದ ಅವರು, ಅನೇಕ ಹೋರಾಟಗಾರರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಇಂದು ನಾವು ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮದ ಫಲದಿಂದ ಜೀವನ ನಡೆಸುತ್ತಿದ್ದೇವೆ. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ.ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ತನ್ನದೇ ಛಾಪು ಮೂಡಿಸಿದೆ. 2047ರಲ್ಲಿ ದೇಶ ವಿಕಸಿತ ಭಾರತವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಪರ ಯೋಜನೆ ಜಾರಿಗೆ ತಂದಿದ್ದಾರೆ. ಅವರ ದೂರದೃಷ್ಟಿಯಿಂದ ದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕೋವಿಡ್ ಸಂದರ್ಭದಲ್ಲಿ ದೇಶದಲ್ಲೇ ಲಸಿಕೆ ಕಂಡು ಹಿಡಿದಿದ್ದು ನಮ್ಮ ಹಿರಿಮೆಯಾಗಿದೆ ಎಂದರು.

ಈ ವೇ‍ಳೆ ವಿವಿಧ ತಂಡಗಳು ಪಥ ಸಂಚಲನ ನಡೆಸಿದವು. ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದ ತಂಡಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿಪ ಸದಸ್ಯ ಪ್ರದೀಪ್ ಶೆಟ್ಟರ್, ಗ್ರೇಡ್ 2 ತಹಸೀಲ್ದಾರ್‌ ಶಿವಾನಂದ ಹೆಬ್ಬಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವನಿತಾ ಹಾಗೂ ಶಿವಾನಂದ ಗುಂಡರ ನಿರೂಪಿಸಿದರು.

ಪಾಲಿಕೆಯಲ್ಲಿ ಧ್ವಜಾರೋಹಣ

ಇಲ್ಲಿನ ಪಾಲಿಕೆ ಆವರಣದಲ್ಲಿ ಮೇಯರ್ ಜ್ಯೋತಿ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ನಾವೆಲ್ಲ ಸ್ಮರಿಸಬೇಕು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿ ನಮ್ಮ ಭಾಗದ ಅನೇಕರು ಪಾಲ್ಗೊಂಡು ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ್ದಾರೆ ಎಂದರು.

2025ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮಹಾನಗರ ರಾಜ್ಯದಲ್ಲಿ 2ನೇ ಸ್ಥಾನ ಪಡೆದಿದೆ. 2025-26ರ ಸಾಲಿನ ಮೊದಲ 50 ದಿನಗಳಲ್ಲಿ ₹100 ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ನಗರವನ್ನು ಮತ್ತಷ್ಟು ಸುಂದರವಾಗಿ ಮಾರ್ಪಡಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ತಿಳಿಸಿದರು.

ಈ ವೇಳೆ ಆಯುಕ್ತ ರುದ್ರೇಶ ಘಾಳಿ, ಉಪ ಆಯುಕ್ತ ವಿಜಯಕುಮಾರ್ ಆರ್., ವಿರೋಧ ಪಕ್ಷದ ನಾಯಕ್ ಇಮ್ರಾನ್ ಎಲಿಗಾರ, ಪಾಲಿಕೆ ಸದಸ್ಯರು, ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.

ಈದ್ಗಾ ಮೈದಾನದಲ್ಲಿ ಧ್ವಜಾರೋಹಣ

ನಗರದ ಚೆನ್ನಮ್ಮ ವೃತ್ತದ ಈದ್ಗಾ ಮೈದಾನದಲ್ಲಿ ಮಹಾನಗರ ಪಾಲಿಕೆ ವತಿಯಿಂದ ನಡೆದ ಧ್ವಜಾರೋಹಣವನ್ನು ಆಯುಕ್ತ ರುದ್ರೇಶ ಘಾಳಿ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಮಹಾನಗರದಲ್ಲಿ ₹ 152 ಕೋಟಿ ಅನುದಾನದಲ್ಲಿ ರಸ್ತೆ ಮತ್ತು ವೃತ್ತಗಳ ಅಭಿವೃದ್ಧಿ ಕೈಗೊಳ್ಳಲಾಗುವುದು. ಗೃಹಭಾಗ್ಯ ಯೋಜನೆಯಡಿ ಅಕ್ಚೋಬರ್‌ ವರೆಗೆ 320 ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗುವುದು. ಹುಬ್ಬಳ್ಳಿಯ ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ₹45 ಕೋಟಿ ವೆಚ್ಚದಲ್ಲಿ ಸಭಾಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ಜ್ಯೋತಿ ಪಾಟೀಲ, ಸದಸ್ಯ ರಾಜಣ್ಣ ಕೊರವಿ, ವಿರೋಧ ಪಕ್ಷದ ನಾಯಕ ಇಮ್ರಾನ್ ಎಲಿಗಾರ, ಶಿವು ಮೆಣಸಿನಕಾಯಿ, ಮೋಹನ ಹಿರೇಮನಿ ಸೇರಿದಂತೆ ಪಾಲಿಕೆ ಸದಸ್ಯರು, ಸಿಬ್ಬಂದಿ ಸಾರ್ವಜನಿಕರು ಉಪಸ್ಥಿತರಿದ್ದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ