ಕನ್ನಡಪ್ರಭ ವಾರ್ತೆ ನಾಪೋಕ್ಲು ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮದ ಬಕ್ಕ ದಲ್ಲಿರುವ ಶ್ರೀ ಕೃಷ್ಣ , ಸಂಕ್ರಾಂತಿ, ಸಾಗರ , ಸ್ವಾಗತ, ಅಂಬಿಕಾ ಹಾಗೂ ಗಜಾನನ ಯುವಕ ಮಂಡಳಿ ಮತ್ತು ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ ಸಹಯೋಗದಲ್ಲಿ ಶುಕ್ರವಾರ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹಲವಾರು ಮಹಾತ್ಮರು ಪ್ರಾಣ ತ್ಯಾಗ ಮಾಡಿದ್ದರೆ ಇಂದು ನಮ್ಮ ದೇಶದ ಬಾವುಟ ಹಾರಾಡುತ್ತಿರುವುದು ನಮ್ಮ ವೀರ ಯೋಧರ ಉಸಿರಿನಿಂದ. ನಾವು ಜಾತಿ ಮತ ವರ್ಣಭೇದ ವನ್ನು ಮರೆತು ಒಂದಾಗಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಮೂಲಕ ನಮ್ಮ ವೀರಯೋಧರಿಗೆ ಗೌರವ ಸಲ್ಲಿಸಬೇಕು. ಪುಟ್ಟ ಹಳ್ಳಿಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಟನಾ ಶಕ್ತಿಯನ್ನು ಹೆಚ್ಚಿಸಿ ನಮ್ಮ ದೇಶದ ಕೀರ್ತಿ ಪತಾಕೆಯನ್ನು ಹಾರಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷರಾದ ಕೊಡಪಾಲು ಗಣಪತಿ ಅವರು ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಮ್ಮ ಕೊಡಗಿನ ವೀರರಾದ ಗುಡ್ಡೆ ಮನೆ ಅಪ್ಪಯ್ಯ ಗೌಡ ಹಾಗೂ ಕೆದಂಬಾಡಿ ರಾಮಯ್ಯಗೌಡರನ್ನು ಸ್ಮರಿಸಿದರು.ಹಿರಿಯರಾದ ಬಾಡನ ನಂದಕುಮಾರ್ ಅವರು ಸ್ವಾತಂತ್ರ್ಯೋತ್ಸವದ ಕುರಿತು ಮಾತನಾಡಿದರು. ಈ ಸಂದರ್ಭ ಮಾಜಿ ಸೈನಿಕರಾದ ಹೊಸೋಕ್ಲು ಮೊಣ್ಣಪ್ಪ, ಬೆಟ್ಟಗೇರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಬೈತಡ್ಕ ದೇವಯ್ಯ, ಸದಸ್ಯರಾದ ಬಾಡನ ಲಿಖಿತ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಹೊಸೊಕ್ಲು ಲತಾ ಮೊಣ್ಣಪ್ಪ, ಅಂಗನವಾಡಿ ಕಾರ್ಯಕರ್ತೆ ಶೈಲಜಾ ಸ್ವಸಹಾಯ ಸಂಘಗಳ ಅಧ್ಯಕ್ಷರು. ಪದಾಧಿಕಾರಿಗಳು ಅಂಗನವಾಡಿ ಮಕ್ಕಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು. ಪುಟಾಣಿ ಮಕ್ಕಳು ದೇಶಭಕ್ತಿಗೀತೆ ಹಾಡಿದರು. ಪರಸ್ಪರ ಸಿಹಿ ಹಂಚಿ ಭಾವೈಕ್ಯತೆ ಮೆರೆದರು.