ಕನ್ನಡಪ್ರಭ ವಾರ್ತೆ ಮೈಸೂರು
ನಗರದ ವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಮುಖ್ಯ ಅತಿಥಿಯಾಗಿದ್ದ ರೋಟರಿ ಮೈಸೂರು ವೆಸ್ಟ್ ನ ಜಿ.ಕೆ. ಬಾಲಕೃಷ್ಣನ್ ಮಾತನಾಡಿ, ದೇಶದ ಏಕತೆಯನ್ನು ಸಾರುವ ಹೆಮ್ಮೆಯ ಧ್ವಜ ನಮ್ಮದು. ಸೈನಿಕರ ತ್ಯಾಗ, ಬಲಿದಾನದಿಂದ ನಮ್ಮ ದೇಶ ಬ್ರಿಟೀಷರ ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯವಾಗಿದೆ ಎಂದರು.
ದೇಶದಲ್ಲಿ ಜನಸಂಖ್ಯೆ ಹೆಚ್ಚಿದಂತೆ ಹಲವು ಸಂಘ, ಸಂಸ್ಥೆಗಳು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ಪೇಜಾವರ ಮಠವು ಕೂಡ ಒಂದು. ಕೇಸರಿ ಬಣ್ಣ ಧೈರ್ಯ, ಬಲಿದಾನ, ಪರಿತ್ಯಾಗವನ್ನು, ಬಿಳಿ ಬಣ್ಣವು ಶಾಂತಿ, ನಿತ್ಯಸತ್ಯ, ಪವಿತ್ರತೆಯನ್ನು, ಹಸಿರು ಬಣ್ಣ ಪ್ರಕೃತಿ ಮತ್ತು ನಮ್ಮೊಳಗಿನ ಸಂಬಂಧವನ್ನು ತಿಳಿಸುತ್ತದೆ ಎಂದು ತಿಳಿಸಿದರು.ಜೀವನದಲ್ಲಿ ಗೆಲುವಿನ ಹಾದಿ ಹಿಡಿಯಬೇಕಾದರೆ ಒಳ್ಳೆಯ ಕನಸು ಕಾಣಬೇಕು. ವ್ಯಕ್ತಿತ್ವ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ. ಆದ್ದರಿಂದ ಜೀವನದಲ್ಲಿ ಒಳ್ಳೆಯ ವ್ಯಕ್ತಿತ್ವ, ಕಠಿಣ ಪರಿಶ್ರಮ ಇದ್ದರೆ ಮಾತ್ರ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯ ಎಂದು ಅವರು ಹೇಳಿದರು.
ನಂಬಿಕೆ, ವಿಶ್ವಾಸ, ಬದ್ಧತೆ, ದೃಢತೆ, ಧೈರ್ಯ, ದೃಢ ನಿಶ್ಚಯ, ಅನುಕಂಪ, ಅರ್ಹತೆ, ಒಳ್ಳೆಯ ನಡತೆ ಜೀವನದಲ್ಲಿ ಅಳವಡಿಸಿಕೊಂಡರೆ ದೇಶ ಪ್ರೇಮದ ಜೊತೆಗೆ ಜೀವನ ಸುಗಮವಾಗಿ ನಡೆಸಬಹುದು ಎಂದು ತಿಳಿಸುವ ಮೂಲಕ ಮಕ್ಕಳಲ್ಲಿ ಪ್ರೇರಣೆ ತುಂಬಿದರು.ಪುಟ್ಟಪುಟ್ಟ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟು ನೆರೆದಿದ್ದ ಪ್ರೇಕ್ಷಕರನ್ನು ಮನರಂಜಿಸಿದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದವರ ನಮನಸೆಳೆಯಿತು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯ ವಿಠಲ ವಿದ್ಯಾ ಸಂಸ್ಥೆಗಳ ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್, ವಿಜಯ ವಿಠಲ ಸಂಯುಕ್ತ ಪಿಯು ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್, ಶಾಲೆಯ ಪ್ರಾಂಶುಪಾಲ ಎಸ್.ಎ. ವೀಣಾ, ಶಾಲೆಯ ವಿವಿಧ ಮುಖ್ಯಸ್ಥರು, ಮಕ್ಕಳು, ಪೋಷಕರು, ಶಿಕ್ಷಕರು ಇದ್ದರು.