ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸಮಾಜದಲ್ಲಿನ ಬಡವರು, ನಿರ್ಗತಿಕರು, ಶೋಷಿತರಿಗೆ ಯಾವಾಗ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ದೊರಕುತ್ತದೋ ಆ ದಿನಗಳೇ ನಿಜವಾದ ಸ್ವಾತಂತ್ರ್ಯ ಎಂಬ ಪದಕ್ಕೆ ಅರ್ಥ ಕೊಡುತ್ತದೆ ಎಂದು ಹಿರಿಯ ವಕೀಲ ಎಚ್.ಸಿ. ನಾಗೇಶ್ ಹೇಳಿದರು.ಸೋಮವಾರಪೇಟೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತ ವತಿಯಿಂದ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರದ ಎಲ್ಲ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಗಳಿಗೆ ದೊರಕುವಂತಾಗಬೇಕು. ದೇಶವು ಪ್ರಗತಿಪಥದಲ್ಲಿ ಮುಂದುವರೆಯಬೇಕಾದರೆ ಇಂದಿನ ಮಕ್ಕಳು ಕೇವಲ ಶಿಕ್ಷಣವನ್ನು ಪಡೆದರೆ ಮಾತ್ರ ಸಾಲದು, ಪ್ರತಿಯೊಬ್ಬರೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಮಾತನಾಡಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸೇರಿದಂತೆ ಅಸಂಖ್ಯಾತ ಸಂಖ್ಯೆಯ ಅಧಿಕಾರಿಗಳು ಹಾಗೂ ಸೈನಿಕರನ್ನು ನೀಡುತ್ತಿರುವ ಕೊಡಗು ಜಿಲ್ಲೆಯಲ್ಲಿ ಸೇವೆ ಸಲ್ಲಿಸುವುದೇ ಹೆಮ್ಮೆಯ ವಿಚಾರ ಎಂದರು.
ತಾಲೂಕು ತಹಸೀಲ್ದಾರ್ ಹಾಗೂ ದಂಡಾಧಿಕಾರಿ ಶ್ರೀಧರ್ ಕಂಕನವಾಡಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಪೋಲೀಸ್, ಹೋಂಗಾರ್ಡ್, ಸ್ಕೌಟ್ಸ್ ವೃಂದದವರಿಂದ ಗೌರವ ರಕ್ಷೆ ಸ್ವೀಕರಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ವಿ.ಮಂಜೇಶ್, ಇನ್ಸ್‌ಪೆಕ್ಟರ್ ಮುದ್ದುಮಾದೇವ, ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ರಾಷ್ಟ್ರೀಯ ಹಬ್ಬಗಳ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ. ಎಸ್. ಗೀತಾ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ನಿವೃತ್ತ ನಾಯಕ್ ಬಿ.ಕೆ. ಶೇಷಪ್ಪ ಮತ್ತು ಎಂ. ಕೆ. ಸುಕುಮಾರ್, ಹಾಕಿ ಪಟು ಶಶಿತ್ ಗೌಡ, ಸಮಾಜ ಸೇವಕ ಪ್ರಾನ್ಸಿಸ್ ಡಿಸೋಜ, ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಪಿ. ಎಸ್. ನಾಗೇಶ್, ಪಟ್ಟಣ ಪಂಚಾಯಿತಿಯ ವಾಟರ್‍ಮೆನ್ ಮಂಜುನಾಥ, ಪೌರ ಕಾರ್ಮಿಕ ಸೆಲ್ವ ಕುಮಾರ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.