ಕನ್ನಡಪ್ರಭ ವಾರ್ತೆ ಮೈಸೂರುಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರ ಪಾಲಿಕೆ ಆಯೋಜಿಸಿದ್ದ ಹರ್ ಘರ್ ತಿರಂಗ ಯಾತ್ರೆಯಲ್ಲಿ ದಸರಾ ಆನೆಗಳು ಪಾಲ್ಗೊಂಡು ಸಂಭ್ರಮವನ್ನು ಇಮ್ಮಡಿಗೊಳಿಸಿದವು.ಸ್ವಚ್ಛ ನಗರದ ಆಶಯದೊಡನೆ ಆಯೋಜಿಸಿದ್ದ ಈ ಹರ್ ಘರ್‌ತಿರಂಗದಲ್ಲಿ ಆನೆಗಳು ತಮ್ಮ ಸೊಂಡಿಲ ಮೂಲಕ ತಿರಂಗವನ್ನಿಡಿದು ಸೊಂಡಲು ಎತ್ತಿ ನಮಿಸಿದವು. ಬಳಿಕ ಮಾವುತರು ತಿರಂಗವನ್ನು ಹಿಡಿದು ಆನೆಯ ಮೇಲೆ ಸಾಗಿದರು.ನಗರದ ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಮನೆ ಮನೆಯಲ್ಲೂ ತ್ರಿವರ್ಣ, ಮನೆ ಮನೆಯಲ್ಲೂ ಸ್ವಚ್ಛತೆ ಕಾರ್ಯಕ್ರಮ ಅಂಗವಾಗಿ ದಸರಾ ಗಜಪಡೆಗಳು ತಾಲೀಮಿನೊಡನೆ ಈ ವಿನೂತನ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡವು.ಗಜಪಡೆಯ ಕ್ಯಾಪ್ಟನ್ ಅಭಿಮನ್ಯು, ಪ್ರಶಾಂತ, ಏಕಲವ್ಯ, ಧನಂಜಯ, ಕಂಜನ್, ಕಾವೇರಿ, ಲಕ್ಷ್ಮೀ, ಮಹೇಂದ್ರ, ಭೀಮ ಆನೆಗಳು ಸೊಂಡಿಲಿನಲ್ಲಿ ತ್ರಿವರ್ಣ ಧ್ವಜ ಹಿಡಿದು, ಧ್ವಜ ಹಾರಿಸುತ್ತಾ, ಹೆಜ್ಜೆ ಹಾಕಿ ಸಾರ್ವಜನಿಕರಲ್ಲಿ ದೇಶಪ್ರೇಮದ ಸಂದೇಶ ಸಾರಿದವು.ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಿಂದ ಹೊರಟು ಕೆ.ಆರ್.ಆಸ್ಪತ್ರೆ ವೃತ್ತದವರೆಗೆ ಸಾಗಿ, ಮತ್ತೆ ಅರಮನೆಗೆ ವಾಪಸ್ ಆದವು. ಗಜಪಡೆಗಳೊಂದಿಗೆ ನಗರ ಪಾಲಿಕೆ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ತ್ರಿವರ್ಣ ಧ್ವಜದೊಂದಿಗೆ ಸಾರ್ವಜನಿಕರು ಪಾಲ್ಗೊಂಡಿದ್ದರು.ನಗರ ಪಾಲಿಕೆ ಸಿಬ್ಬಂದಿ, ಮನೆ ಮನೆಯಲ್ಲೂ ತ್ರಿವರ್ಣ, ಮನೆ ಮನೆಯಲ್ಲೂ ಸ್ವಚ್ಛತೆ ಎಂದು ಘೋಷಣೆ ಕೂಗುತ್ತ, ನಗರವನ್ನು ಸ್ವಚ್ಛವಾಗಿ ಇಡುವಂತೆ ಸಂದೇಶ ಸಾರಿ, ಸ್ವಚ್ಛತೆಗಾಗಿ ಸಾರ್ವಜನಿಕರು ಕೈ ಜೋಡಿಸಿ ಎಂದು ಜಾಗೃತಿ ಮೂಡಿಸಿದರು.ಈ ವೇಳೆ ಮಾತನಾಡಿದ ನಗರ ಪಾಲಿಕೆ ಆಯುಕ್ತ ತನ್ವೀರ್ ಶೇಕ್ ಆಸೀಫ್, 79ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಅಭಿಯಾನಕ್ಕೆ ಕರೆ ನೀಡಲಾಗಿದೆ. ಹೀಗಾಗಿ ಇಂದು ತ್ರಿವರ್ಣ ಧ್ವಜದ ಅಭಿಯಾನದ ಜತೆಗೆ ಸ್ವಚ್ಛತಾ ಅರಿವು ಅಭಿಯಾನ ಹಮ್ಮಿಕೊಳ್ಳಲಾಗಿದೆ. ದಸರಾ ಗಜಪಡೆಯೊಂದಿಗೆ ಪಾರಂಪರಿಕ ನಡಿಗೆಯ ಮೂಲಕ ಅಭಿಯಾನ ನಡೆಸಲಾಗಿದೆ. ಈ ಮೂಲಕ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ, ಮನೆ ಮನೆಯಲ್ಲೂ ಸ್ವಚ್ಛತೆ ಎಂಬ ಸಂದೇಶ ಸಾರುತ್ತ ಜನರು ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಮೈಸೂರಿನಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ಶೀಘ್ರದಲ್ಲೇ ಮುಚ್ಚಲಾಗುವುದು. ರಸ್ತೆಗಳನ್ನು ದುರಸ್ತಿ ಮಾಡಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದು, ಕಾರ್ಯಾದೇಶ ಕೂಡ ಆಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಆದಷ್ಟು ಬೇಗ ರಸ್ತೆ ದುರಸ್ತಿಪಡಿಸಲಾಗುವುದು. ಜತೆಗೆ 18 ಪಾರ್ಕ್ ಗಳ ಅಭಿವೃದ್ಧಿ ಮಾಡಲಾಗುತ್ತದೆ. ಕುಡಿಯುವ ನೀರು ಪೂರೈಕೆ, ಶೌಚಾಲಯ ನಿರ್ಮಾಣಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.