ಕೊಪ್ಪಳ: "ಇಂಡಿಯಾ " ಮೈತ್ರಿಕೂಟದೊಂದಿಗೆ ಲೋಕಸಭಾ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿದ್ದರೂ ರಾಜ್ಯದ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.ನಗರದ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೂರೂ ಪಕ್ಷಗಳಿಗೆ ಪರ್ಯಾಯ ರಾಜಕೀಯ ಶಕ್ತಿಯ ಅಗತ್ಯವಿದೆ. ಎಎಪಿ ರಾಜ್ಯದಲ್ಲಿ ಪರ್ಯಾಯ ಶಕ್ತಿಯಾಗಿ ಉದಯವಾಗಲಿದೆ ಎಂದರು.ಕಾಂಗ್ರೆಸ್ ನೇತೃತ್ವದ "ಇಂಡಿಯಾ " ಜತೆ ಹೊಂದಾಣಿಕೆ ಮಾಡಿಕೊಂಡಿರುವುದು ಕೇವಲ ಕೇಂದ್ರದಲ್ಲಿ ಸರ್ವಾಧಿಕಾರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಿತ್ತೊಗೆಯುವುದಕ್ಕಾಗಿಯೇ ಹೊರತು ಬೇರೆ ಉದ್ಧೇಶಕ್ಕಾಗಿ ಅಲ್ಲ. ಸಂವಿಧಾನಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಕೋಮುವಾದಿ ಪಕ್ಷವನ್ನು ದೂರವಿಡುವುದು ಹಾಗೂ ಆರೆಸ್ಸೆಸ್ ತತ್ವ, ಸಿದ್ಧಾಂತದ ಮೂಲಕ ಸಂವಿಧಾನಕ್ಕೆ ಧಕ್ಕೆ ತರುವ ಮೋದಿ ಆಡಳಿತ ಕೊನೆಗಾಣಿಸಲು ಮೈತ್ರಿಯಲ್ಲಿದ್ದೇವೆ ಎಂದರು.ಎಎಪಿ ಪಕ್ಷದ ದೆಹಲಿ ಸಿಎಂ ಕೇಜ್ರಿವಾಲರ ಯೋಜನೆಗಳನ್ನು ಕಾಂಗ್ರೆಸ್ ನಕಲು ಮಾಡಿದೆ. ಅದೇ ಮಾದರಿಯಲ್ಲಿ ಗ್ಯಾರಂಟಿಗಳನ್ನು ಘೋಷಿಸಿ ಜಯ ಸಾಧಿಸಿದೆ. ಇಷ್ಟು ವರ್ಷಗಳ ಕಾಲ ಆಳ್ವಿಕೆ ನಡೆಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಏಕೆ ಇಂಥ ಯೋಜನೆಗಳು ಹೊಳೆದಿರಲಿಲ್ಲ? ಎಂದು ಕಿಡಿಕಾರಿದರು.ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವುದಾಗಿ ಬೀಗುತ್ತಿರುವ ಕಾಂಗ್ರೆಸ್ ಸರ್ಕಾರ ಅದಕ್ಕೆ ಬೇಕಾದ ಹಣ ಹೊಂದಿಸಲು ಹೆಣಗಾಡುತ್ತಿದೆ. ದೆಹಲಿಯಲ್ಲಿ ಕೇಜ್ರಿ ವಾಲ ಅನೇಕ ಯೋಜನೆ ಜಾರಿ ಮಾಡಿದರೂ ಅಭಿವೃದ್ಧಿ ಸ್ಥಗಿತಗೊಳಿಸಿಲ್ಲ. ಆದರೆ, ರಾಜ್ಯ ಕಾಂಗ್ರೆಸ್ ಅಭಿವೃದ್ಧಿಯನ್ನೇ ಮರೆತಿದೆ ಎಂದು ದೂರಿದರು.ಎಸ್ಸಿ-ಎಸ್ಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿರುವುದು ದುರಂತವೇ ಸರಿ ಎಂದರು.ಬಡವರಿಗಾಗಿಯೇ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದು, ಅದಕ್ಕೆ ಬಳಕೆ ಮಾಡಿಕೊಂಡಿದ್ದೇವೆಂದು ಮೊಂಡುವಾದ ಮಂಡಿಸಿದರು. ರಾಜ್ಯದ 14 ಅಕಾಡೆಮಿ, 4 ಪ್ರಾಧಿಕಾರಗಳು ದಿಕ್ಕಿಲ್ಲದಂತಾಗಿವೆ. ಅವುಗಳಿಗೆ ಯಾರನ್ನೂ ನೇಮಕ ಮಾಡುತ್ತಿಲ್ಲ. ಅನುದಾನ ನಿಗದಿಯಾಗುತ್ತಿಲ್ಲ. ಕನ್ನಡ-ಸಂಸ್ಕೃತಿ ಇಲಾಖೆಯೂ ಅನುದಾನ ಇಲ್ಲದೆ ಸಮಸ್ಯೆ ಎದುರಿಸುತ್ತಿದೆ ಎಂದರು.ಚುನಾವಣೆ ಮೊದಲು ತಾವು ಕಾರ್ಮಿಕರ, ಬಡವರ, ರೈತರ ಪರ ಎಂದು ಪೋಸ್ ಕೊಟ್ಟ ಕಾಂಗ್ರೆಸ್ಸಿಗರು ಈಗ ರೈತರಿಗೆ ಕರೆಂಟ್ ಕೊಡದೇ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಅಧಿಕಾರ ದಾಹದಿಂದ ರಾಜ್ಯದಲ್ಲಿ 25 ಲೋಕಸಭಾ ಕ್ಷೇತ್ರ ಗೆಲ್ಲಲು ಸಂಪನ್ಮೂಲ ಸೇರಿಸಲು ಕಾಂಗ್ರೆಸ್ಸಿಗರು ಬ್ಯುಸಿಯಾಗಿದ್ದಾರೆ ಎಂದರು.ಮುಂಬರುವ ಲೋಕಸಭಾ ಚುನಾವಣೆಯಲ್ಲಿ "ಇಂಡಿಯಾ " ಮೈತ್ರಿಕೂಟ ಮೇಲುಗೈ ಸಾಧಿಸುವ ಲಕ್ಷಣಗಳಿವೆ. ಬಿಹಾರದ ನಿತೀಶಕುಮಾರ ಮಂಡಿಸಿದ ಜಾತಿಗಣತಿ ವರದಿ ದೇಶಾದ್ಯಂತ ಕ್ರಾಂತಿ ಎಬ್ಬಿಸಿದೆ. ಎಲ್ಲ ರಾಜ್ಯಗಳಲ್ಲಿ ಜಾತಿ ಜನಗಣತಿ ಬೇಡಿಕೆ ಬರುತ್ತಿದೆ. ಇದು ಬಿಜೆಪಿಗೆ ಮಾರಕವಾಗಲಿದೆ ಎಂದರು.ನಾನು ಪಕ್ಷ ಸಂಘಟನೆ ಮಾಡಲು ಅಷ್ಟು ಸಂಪನ್ಮೂಲ ಹೊಂದಿರುವ ವ್ಯಕ್ತಿ ಅಲ್ಲ. ಆದರೂ ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು, ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಹೀಗಾಗಿ, ಎಲ್ಲ ಜಿಲ್ಲೆಗಳನ್ನು ಸುತ್ತಾಡಿ, ಸಂವಾದದ ಮೂಲಕ ಪಕ್ಷ ಸಂಘಟನೆ ಮಾಡುತ್ತಿದ್ದೇವೆ ಎಂದರು.ಗವಿಮಠಕ್ಕೆ ಭೇಟಿ: ಮುಖ್ಯಮಂತ್ರಿ ಚಂದ್ರು ಬೆಳಗ್ಗೆ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಶ್ರೀಗಳ ದರ್ಶನ ಪಡೆದರು.ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರ್ಜುನ ಹಲಗಿ ಗೌಡರ, ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಹಿರೇಮಠ, ಜಿಲ್ಲಾಧ್ಯಕ್ಷ ಕನಕಪ್ಪ ಮಳಗಾವಿ ಇದ್ದರು.