ಕನ್ನಡಪ್ರಭವಾರ್ತೆ ಪಾವಗಡ
ಕರ್ನಾಟಕ ಕಂಡ ಧೀಮಂತ ನಾಯಕ, ಪ್ರಗತಿಪರ ಚಿಂತಕ,ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮಂಗಳವಾರ ಬೆಂಗಳೂರಿನಲ್ಲಿ ವಿಧಿವಶರಾಗಿದ್ದು ಅವರ ನಿಧನ ಸುದ್ದಿ ಹರಡುತ್ತಿದ್ದಂತೆ ತಾಲೂಕಿನ ಕಾಂಗ್ರೆಸ್ ಹಾಗೂ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ವ್ಯಕ್ತಪಡಿಸಿದ್ದಾರೆ.ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿಧನದ ವಿಷಯ ಕೇಳಿ ಅತ್ಯಂತ ನೋವಾಯಿತು. ಎಸ್.ಎಂ. ಕೃಷ್ಣ ಅವರು ಸಿಎಂ ಆಗಿದ್ದ ವೇಳೆ ಅನೇಕ ಅಭಿವೃದ್ಧಿ ಕಾರ್ಯಗಳು ಕೈಗೊಂಡಿದ್ದು ಈ ರಾಜ್ಯಕ್ಕೆ ಅವರದ್ದೇ ಆದ ಕೂಡುಗೆ ನೀಡಿದ್ದಾರೆ. ಅವರ ಸೇವೆ ಅನುಪಮವಾದ್ದು,ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅವರು ಅಜಾತಶತ್ರುಗಳಾಗಿದ್ದರು. ಅವರ ಸೇವೆ ಮಾದರಿ,ಅತ್ಯುತ್ತಮ ಜನಪರ ನಾಯಕರಾಗಿದ್ದರೆಂದು ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ಶಾಸಕ ಎಚ್.ವಿ.ವೆಂಕಟೇಶ್ ಅವರ ಜೊತೆಗಿನ ಒಡನಾಡ ನೆನಪಿಸಿಕೊಂಡರು.
ತಾಲೂಕು ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ ಎಸ್.ಎಂ.ಕೃಷ್ಣ ಸರಳ ಸಜ್ಜನಿಕೆ ವ್ಯಕ್ತಿತ್ವವುಳ್ಳವರಾಗಿದ್ದರು.ಅವರ ಆದರ್ಶ ಹಾಗೂ ಅಭಿವೃದ್ಧಿ ಪರ ಚಿಂತನೆ ನಮಗೆಲ್ಲ ಪ್ರೇರಣೆ. ವಿಶೇಷವಾಗಿ ಅವರ ಸಿಎಂ ಆಗಿದ್ದ ಕಾಲದಲ್ಲಿ ಐಟಿ ಬಿಟಿ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಒತ್ತು ನೀಡಿದ್ದರು.ಇತರೇ ಅನೇಕ ಜನಪರ ಯೋಜನೆ ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲಬೇಕು. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.ರಾಜ್ಯ ಜೆಡಿಎಸ್ ಘಟಕದ ಉಪಾಧ್ಯಕ್ಷ ಎನ್.ತಿಮ್ಮಾರೆಡ್ಡಿ, ತಾಲೂಕು ಬಿಜೆಪಿ ಅಧ್ಯಕ್ಷ ಮಂಗಳವಾಡ ರಂಗಣ್ಣಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ಎ.ಈರಣ್ಣ,ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್, ಮುಖಂಡರಾದ ಗೋವಿಂದಬಾಬು ಹಾಗೂ ಇತರೆ ಅನೇಕ ಜನ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಸೇವೆ ಸ್ಮರಿಸಿದ್ದಾರೆ.