ಭಾರತ ವಿಶ್ವಗುರು ಎಂಬುದು ಕೇವಲ ಭ್ರಮೆ: ಪ್ರೊ. ರಾಜೇಂದ್ರ ಚೆನ್ನಿ

KannadaprabhaNewsNetwork | Published : Apr 23, 2025 12:35 AM

ಸಾರಾಂಶ

ನಾವು ವಿಶ್ವಗುರು ಎಂಬ ಭ್ರಮೆಯನ್ನು ಮೂಡಿಸುವ ಕೆಲಸವಾಗುತ್ತಿದೆ. ಹಸಿವು, ನಿರುದ್ಯೋಗ ಹೆಚ್ಚುತ್ತಿರುವ ಭಾರತ ವಿಶ್ವಗುರು ಸ್ಥಾನದಲ್ಲಿ ನಿಲ್ಲಲು ಸಾಧ್ಯವಿಲ್ಲ ಎಂದು ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ, ಪ್ರಗತಿಪರ ಚಿಂತಕ ಪ್ರೊ.ರಾಜೇಂದ್ರ ಚೆನ್ನಿ ಹೇಳಿದ್ದಾರೆ.

- ತೀವ್ರ ಹಸಿವಿರುವ ರಾಷ್ಟ್ರಗಳ ಸೂಚ್ಯಂಕದಲ್ಲಿ ಭಾರತ 111ನೇ ಸ್ಥಾನ । ಜಿ.ರಾಮಕೃಷ್ಣ ರಚಿಸಿದ ಯುಗಪುರುಷ ಲೆನಿನ್ ಪುಸ್ತಕ ಬಿಡುಗಡೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಾವು ವಿಶ್ವಗುರು ಎಂಬ ಭ್ರಮೆಯನ್ನು ಮೂಡಿಸುವ ಕೆಲಸವಾಗುತ್ತಿದೆ. ಹಸಿವು, ನಿರುದ್ಯೋಗ ಹೆಚ್ಚುತ್ತಿರುವ ಭಾರತ ವಿಶ್ವಗುರು ಸ್ಥಾನದಲ್ಲಿ ನಿಲ್ಲಲು ಸಾಧ್ಯವಿಲ್ಲ ಎಂದು ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ, ಪ್ರಗತಿಪರ ಚಿಂತಕ ಪ್ರೊ.ರಾಜೇಂದ್ರ ಚೆನ್ನಿ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಭಾರತ ಕಮ್ಯುನಿಷ್ಟ್ ಪಕ್ಷದ ಶತಮಾನೋತ್ಸವ ಅಂಗವಾಗಿ ಹೊರತಂದ ಲೇಖಕ ಜಿ.ರಾಮಕೃಷ್ಣ ರಚಿಸಿದ ಯುಗಪುರುಷ ಲೆನಿನ್ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ವಿಶ್ವದ ಅತ್ಯಂತ ತೀವ್ರ ಹಸಿವಿರುವ ರಾಷ್ಟ್ರಗಳ ಸೂಚ್ಯಂಕದಲ್ಲಿ ಭಾರತ 111ನೇ ಸ್ಥಾನದಲ್ಲಿದೆ. ಉದ್ಯೋಗದ ಭರವಸೆ ಇಲ್ಲ. ಇದರ ಮಧ್ಯೆ ಕೆಲವೇ ವರ್ಷಗಳಲ್ಲಿ ಬಂಡವಾಳಶಾಹಿಗಳ ಆಸ್ತಿಪಾಸ್ತಿ ಶೇ.900 ಹೆಚ್ಚಾಗಿದೆ. ಇದೇ ವೇಳೆ ಬಡತನವೂ ಶೇ.900ಕ್ಕೆ ಇಳಿದಿದೆ. ಇದನ್ನು ಪ್ರಶ್ನಿಸಬಾರದು ಎನ್ನುವ ಸ್ಥಿತಿಯಲ್ಲಿ ನಾವಿದ್ದೇವೆ. ಹಾಗಾಗಿ, ಭಾರತ ವಿಶ್ವಗುರು ಎನ್ನುವುದು ನಿಜವಲ್ಲ. ಇದು ಕೇವಲ ಭ್ರಮೆಯಷ್ಟೇ ಎಂದು ಅಭಿಪ್ರಾಯಪಟ್ಟರು.

ದುಡಿಯುವ ಹಕ್ಕಿಗಾಗಿ, ಉದ್ಯೋಗ ಸೃಷ್ಠಿಗಾಗಿ ದೇಶದಲ್ಲಿ ಹೋರಾಟ, ಚಳವ‍ಳಿ ನಡೆಯುತ್ತಿಲ್ಲ. ಬದಲಿಗೆ ಮತಭ್ರಮಣೆ, ಮತಿಭ್ರಮಣೆಯಾಗಿ ಕೋಮುವಾದ ತಲೆಯಲ್ಲಿ ತುಂಬಿಕೊಂಡಿದ್ದೇವೆ. ಉದ್ಯೋಗ ಕೊಡುವಂತೆ ಯುವಜನರು ಕೇಳುತ್ತಿಲ್ಲ. ಬದಿಗೆ ಒಡೆಯಲು ಇನ್ನೊಂದು ಮಸೀತಿ ಕೊಡಿ ಎನ್ನುತ್ತಿದ್ದಾರೆ. ನಾವು ನಮ್ಮ ಬದುಕುವ ಹಕ್ಕು ಕೇಳಲು ರಸ್ತೆಗೆ ಇಳಿಯುವ ಬದಲು ಕೆಲಸಕ್ಕೆ ಬಾರದ ವಿಷಯಕ್ಕೆ ಇಡೀ ಸಮಾಜವನ್ನು ಭಗ್ನಗೊಳಿಸುವ ಕೆಲಸವಾಗುತ್ತಿದೆ ಎಂದು ದೂರಿದರು.

ಶ್ರಮವಿಲ್ಲದೇ ಅಧಿಕಾರ, ಸಂಪತ್ತನ್ನು ಕಸಿದುಕೊಂಡ ಬಂಡವಾಳಶಾಹಿಗಳ ವಿರುದ್ಧ ಲೆನಿನ್ ಚಿಂತನೆಯಂತೆ ಸಂಪತ್ತಿನ ಸಮಾನ ಹಂಚಿಕೆಗಾಗಿ ಶ್ರಮಿಕ ವರ್ಗ ಸಂಘಟಿತ ಹೋರಾಟ ನಡೆಸಬೇಕಿದೆ. ರಷ್ಯಾದಲ್ಲಿ ಸಮಾಜವಾದಿ ಸಿದ್ಧಾಂತ ರೂಪಿಸಿದ ಲೆನಿನ್‌ ಒಬ್ಬ ಶ್ರೇಷ್ಠ ಚಿಂತಕ. ಅವರ ಆಶಯದಂತೆ ಯುದ್ಧ ನಡೆಸುವುದು, ಬಡ, ರೈತ, ಕಾರ್ಮಿಕರ ಉದ್ದೇಶವಲ್ಲ. ಮದ್ದು ಗುಂಡುಗಳ ಮಾರುಕಟ್ಟೆಗಾಗಿ ನಡೆಸುವ ವಸಾಹತು ಶಾಹಿಗಳು, ಬಂಡವಾಳಶಾಹಿಗಳ ಕುತಂತ್ರವೇ ಯುದ್ಧವೆಂದು ಸಾರ್ವಕಾಲಿಕ ಸತ್ಯವಾಗಿದೆ. ಇಸ್ರೇಲ್, ಯುಕ್ರೇನ್‌ನಲ್ಲಿ ನಡೆದ ಯುದ್ಧಗಳಿಂದ 17 ಸಾವಿರ ಮಕ್ಕಳ ಕೊಲೆಗಳು ಸಾಕ್ಷಿಯಾಗಿವೆ ಎಂದು ತಿಳಿಸಿದರು.

ಸಿಪಿಐ ಹಿರಿಯ ಮುಖಂಡ, ಹೊಸತು ಮಾಸ ಪತ್ರಿಕೆ ಸಂಪಾದಕ ಡಾ.ಸಿದ್ದನಗೌಡ ಪಾಟೀಲ ಮಾತನಾಡಿ, ಕಾಮ್ರೆಡ್ ಸುರೇಶ್, ಶೇಖರಪ್ಪ, ಪಂಪಾಪತಿ ನೇತೃತ್ವದಲ್ಲಿ ದಾವಣಗೆರೆ ಸುಂದರ ನಗರದ ತಳಪಾಯ ಹಾಕಿದರು. ಇಂತಹವರ ಶ್ರಮದಿಂದ ರಾಜಕೀಯ ಅಧಿಕಾರವನ್ನು ಕಾರ್ಮಿಕರು ಹಿಡಿದ ಇತಿಹಾಸವಿದೆ. ಇಂದು ದೇಶದಲ್ಲಿ ಜಾಗತೀಕರಣದ ಪರಿಣಾಮವಾಗಿ ಶಿಕ್ಷಣ, ರೈಲು, ವಿಮಾನ, ಟೆಲಿಫೋನ್ ಸೇರಿದಂತೆ ಸರ್ಕಾರಿ ಸ್ವಾಮ್ಯದ ಕಂಪನಿಗಳು ಖಾಸಗೀಕರಣಗೊಳ್ಳುತ್ತಿವೆ. ಕಾರ್ಪೊರೇಟ್ ಒಕ್ಕಲುತನ ಆರಂಭವಾಗಿದೆ ಎಂದರು.

ಲೇಖಕ ಜಿ.ರಾಮಕೃಷ್ಣ ಮಾತನಾಡಿ, ಋಗ್ವೇದದಲ್ಲಿ ಪಣಿಗಳೆಂದು ಕರೆಯಲ್ಪಡುತ್ತಿದ್ದ ಬುಡಕಟ್ಟು ಸಂಸ್ಕೃತಿಯವರು ಗೋವನ್ನೇ ಆಸ್ತಿಯಾಗಿಸಿಕೊಂಡು ಜೀವನೋಪಾಯ ನಡೆಸುತ್ತಿದ್ದರು. ಆಗ ಮನುವಾದಿಗಳು ಮೌಢ್ಯತೆ ಬಿಂಬಿಸಿ ಗೋವನ್ನು ಕಿತ್ತುಕೊಂಡರು. ಶೂದ್ರರನ್ನು ದೇಶದಲ್ಲಿ ಶಾಶ್ವತವಾಗಿ ಕಾರ್ಮಿಕರಾಗಿ ಬಿಂಬಿಸಿದರು. ವಾಸ್ತವವನ್ನು ಮುಚ್ಚಿಟ್ಟು ಮಿಥ್ಯಾಪ್ರಜ್ಞೆಯ ಸವಾರಿ ಮಾಡುವವರಿಗೆ ಉತ್ತರ ಕೊಡುವ ಅನಿವಾರ್ಯತೆಯಿದೆ. ದೇಶದಲ್ಲಿ ವೈಯಕ್ತಿಕ ಮೌಢ್ಯತೆ, ಆಚರಣೆಯನ್ನು ಸಾರ್ವಜನಿಕವಾಗಿ ಸಮಾಜಕ್ಕೆ ಹರಡುತ್ತಿರುವುದು ಆತಂಕಕಾರಿಯಾಗಿದೆ. ಸಮಾಜದ ಛಿದ್ರತೆಯನ್ನು ಅರಿತು ಕಾರ್ಮಿಕರು ವೈಚಾರಿಕತೆಯೊಂದಿಗೆ ಸಂಘಟಿತರಾಗಬೇಕಿದೆ ಎಂದು ತಿಳಿಸಿದರು.

ಸಿಪಿಐ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ವಕೀಲ ನಾಗಭೂಷಣ್ ರಾವ್, ಎಐಕೆಎಸ್ ರಾಜ್ಯ ಕಾರ್ಯದರ್ಶಿ ಪಿ.ವಿ. ಲೋಕೇಶ, ನವಕರ್ನಾಟಕ ಪಬ್ಲಿಕೇಷನ್ ನಿರ್ದೇಶಕ ಯು.ಪ್ರೇಮಚಂದ್ರ, ಮುಖಂಡರಾದ ಆವರಗೆರೆ ಎಚ್.ಜಿ. ಉಮೇಶ, ಅಮ್ಜದ್, ಎಐವೈಎಫ್ ಎಚ್.ಎಂ ಸಂತೋಷ್, ಆವರಗೆರೆ ಚಂದ್ರು, ಗುಡಿಹಳ್ಳಿ ಹಾಲೇಶ, ಇಪ್ಟಾದ ಐರಣಿ ಚಂದ್ರು, ಅಂಜಿನಪ್ಪ ಲೋಕಿಕೆರೆ, ಷಣ್ಮುಖ ಸ್ವಾಮಿ, ಹೆಗ್ಗೇರಿ ರಂಗಪ್ಪ, ಮಾದಿಹಳ್ಳಿ ಮಂಜುನಾಥ, ಮಹಮ್ಮದ್ ಬಾಷಾ, ಬಾನಪ್ಪ, ಖಾದರ್ ಸೇರಿದಂತೆ ಮತ್ತಿತರರು ಇದ್ದರು.

- - -

(ಕೋಟ್‌) ಹರಿಹರ ಕಿರ್ಲೋಸ್ಕರ್, ದಾವಣಗೆರೆ ಕಾಟನ್ ಮಿಲ್‌ಗಳಿಂದ ಒಂದು ಕಾಲಘಟ್ಟದಲ್ಲಿ ಭಾರತದ ಮ್ಯಾಂಚಸ್ಟರ್ ಆಗಿತ್ತು. ಜಿಲ್ಲೆಯಲ್ಲಿ ಈಗ ಅಸಂಘಟಿತ ಕಾರ್ಮಿಕರ ಧ್ವನಿ ದಮನಗೊಂಡಿವೆ. ಆಧುನಿಕವಾಗಿ ಧರ್ಮ, ಜಾತಿ ಹೆಸರಲ್ಲಿ ಮತಿ ಭ್ರಮಣೆ, ಮತ ಭ್ರಮಣೆಯಿಂದ ಕೋಮುವಾದವನ್ನು ತಲೆಯಲ್ಲಿ ತುಂಬಿಕೊಂಡಿರುವ ಯುವಕರು ಸಮಾಜವನ್ನು ಭಗ್ನಗೊಳಿಸುವ ಹಂತದಲ್ಲಿ ಇರುವುದು ಅಪಾಯಕಾರಿ ಬೆಳವಣಿಗೆ.

- ಪ್ರೊ.ರಾಜೇಂದ್ರ ಚೆನ್ನಿ, ಪ್ರಗತಿಪರ ಚಿಂತಕ

- - -

-22ಕೆಡಿವಿಜಿ12:

ದಾವಣಗೆರೆಯಲ್ಲಿ ಮಂಗಳವಾರ ಭಾರತ ಕಮ್ಯುನಿಷ್ಟ್ ಪಕ್ಷದ ಶತಮಾನೋತ್ಸವ ಅಂಗವಾಗಿ ಹೊರ ತಂದ ಲೇಖಕ ಜಿ.ರಾಮಕೃಷ್ಣ ರಚಿಸಿದ ಯುಗಪುರುಷ ಲೆನಿನ್ ಪುಸ್ತಕ ಬಿಡುಗಡೆಗೊಳಿಸಲಾಯಿತು.

Share this article