ಕುರುಗೋಡು:ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಮುಖ್ಯ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹೊಣೆಗಾರರನ್ನಾಗಿ ಮಾಡಿ ಕೂಡಲೇ ಅಮಾನತ್ತು ಮಾಡಬೇಕು ಎಂದು ಬಳ್ಳಾರಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಮಲ್ಲಿಕಾರ್ಜುನ ಒತ್ತಾಯಿಸಿದರು.
ಚುನಾವಣಾ ಆಯೋಗದ ತಪ್ಪು ನಿರ್ಧಾರವನ್ನು ವಿರೋಧಿಸಿ ಜಿಲ್ಲಾ ಇಂಡಿಯಾ ಮೈತ್ರಿ ಕೂಟದಿಂದ ಅ.6 ರಂದು ಬಳ್ಳಾರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ
ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಹೊರಗಿಟ್ಟು ಕೇಂದ್ರ ಸರ್ಕಾರ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ತನ್ನ ಕೈಗೊಂಬೆಯ ಮುಖ್ಯ ಚುನಾವಣಾ ಅಧಿಕಾರಿ ನೇಮಕ ಮಾಡಿದೆ. ಬಳಿಕ ಎಸ್ ಐ ಆರ್ ಮೂಲಕ ಅನೇಕರನ್ನು ಮತದಾರ ಪಟ್ಟಿಯಿಂದ ಕೈಬಿಟ್ಟು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಚುನಾವಣೆ ಗೆದ್ದಿದೆ. ಕೇಂದ್ರ ಸರ್ಕಾರದ ಕುತಂತ್ರ ಖಂಡಿಸಿ ಬಳ್ಳಾರಿಯ ಗಾಂಧಿ ಭವನದಲ್ಲಿ ಸಭೆ ಆಯೋಜಿಸಿದ್ದು, ರಾಯಲ್ ವೃತ್ತದಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಪ್ರತಿಕೃತಿ ದಹನ ಮಾಡಲಾಗುವುದು. ಬಳಿಕ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿಯ ಗಾಂಧಿ ಪುತ್ಥಳಿ ತನಕ ಪ್ರತಿಭಟಣೆಯ ಮೆರವಣಿಗೆ ಜರುಗಲಿದೆ. ಮತದಾರ ಪಟ್ಟಿಯಿಂದ ಕೈಬಿಟ್ಟ ಹೆಸರು ಜತೆಗೆ ಸಂವಿಧಾನ ಉಳಿವು ಸೇರಿ ಇತರ ಅನೇಕ ಬೇಡಿಕೆ ಇವೆ. ಹೀಗಾಗಿ ಪ್ರತಿಭಟನೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ತಿಳಿಸಿದರು.ಸಿಪಿಎಂ. ಮುಖಂಡ ವಿಎಸ್.ಶಿವಶಂಕರ್ ಮಾತನಾಡಿ, ತಾಲ್ಲೂಕು ಆಡಳಿತಕ್ಕೆ ನಕಲಿ ನಮೂನೆ7 ನೀಡುವ ಮೂಲಕ ದಲಿತರ, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗದವರ ಮತದಾನದ ಹಕ್ಕು ಕಸಿದುಕೊಳ್ಳಲುವ ಬಿಜೆಪಿ ಕುತಂತ್ರ ನಡೆಸಿದೆ ಎಂದು ಆರೋಪಿಸಿದರು.
ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ 24.9 ಸಾವಿರ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ರಾಜ್ಯದಲ್ಲಿ ಇದರ ಸಂಖ್ಯೆ 1.5 ಕೋಟಿ ದಾಟಿದೆ. ಕೂಡಲೇ ಎಸ್ಐಆರ್ ಪ್ರಕ್ರಿಯೆಯನ್ನು ಕೈಬಿಡಬೇಕು ಮತ್ತು ಚುನಾವಣಾ ಆಯುಕ್ತರ ಸ್ಥಾನದಿಂದ ಜ್ಞಾನೇಶ್ ಕುಮಾರ್ ಅವರನ್ನು ಕೆಳಗಿಳಿಸಬೇಕು ಎಂದು ಒತ್ತಾಯಿಸಿದರು.