ಭಾರತ-ಬ್ರಿಟನ್ ಒಪ್ಪಂದ: ಬೊಂಬೆ ಉದ್ಯಮ ಸ್ವಚ್ಛಂದ

KannadaprabhaNewsNetwork |  
Published : Jul 26, 2025, 12:30 AM IST
ಪೊಟೋ೨೫ಸಿಪಿಟಿ೧: ಚನ್ನಪಟ್ಟಣದ ಬೊಂಬೆಗಳು.( ಸಾಂಧರ್ಬಿಕ ಚಿತ್ರ) | Kannada Prabha

ಸಾರಾಂಶ

ಚನ್ನಪಟ್ಟಣ: ಭಾರತ-ಬ್ರಿಟನ್ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಚನ್ನಪಟ್ಟಣದ ಬೊಂಬೆಗಳ ರಫ್ತಿಗೆ ಸುಂಕದಿಂದ ವಿನಾಯಿತಿ ಸಿಕ್ಕಿರುವುದು ಬೊಂಬೆ ಉದ್ಯಮದ ಚೇತರಿಕೆಗೆ ನೆರವಾಗಬಹುದು ಎಂಬ ಆಶಾಭಾವನೆ ಮೂಡಿಸಿದೆ.

ಚನ್ನಪಟ್ಟಣ: ಭಾರತ-ಬ್ರಿಟನ್ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಚನ್ನಪಟ್ಟಣದ ಬೊಂಬೆಗಳ ರಫ್ತಿಗೆ ಸುಂಕದಿಂದ ವಿನಾಯಿತಿ ಸಿಕ್ಕಿರುವುದು ಬೊಂಬೆ ಉದ್ಯಮದ ಚೇತರಿಕೆಗೆ ನೆರವಾಗಬಹುದು ಎಂಬ ಆಶಾಭಾವನೆ ಮೂಡಿಸಿದೆ.

ಗುರುವಾರ ಭಾರತ ಹಾಗೂ ಬ್ರಿಟನ್ ನಡುವೆ ನಡೆದ ಪರಸ್ಪರ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಒಪ್ಪಂದಿಂದ ಬೊಂಬೆಗಳು ಅಲ್ಲಿ ಕೊಂಚ ಅಗ್ಗದ ಬೆಲೆಗೆ ಲಭ್ಯವಾಗಲಿದ್ದು, ಬೇಡಿಕೆ ಹೆಚ್ಚಾಗಿ ಇದು ಸೊರಗಿದ್ದ ಬೊಂಬೆ ಉದ್ಯಮಕ್ಕೆ ನೆರವಾಗಬಹುದು ಎಂಬ ಆಸೆ ಚಿಗುರಿದೆ.

ವಿದೇಶಗಳಿಗೆ ರಫ್ತು: ಚನ್ನಪಟ್ಟಣದಲ್ಲಿ ತಯಾರಾಗುವ ಬೊಂಬೆಗಳಿಗೆ ವಿದೇಶಗಳಲ್ಲೂ ಸಾಕಷ್ಟು ಬೇಡಿಕೆ ಇದೆ. ಬ್ರಿಟನ್, ಅಮೆರಿಕಾ, ಜಪಾನ್, ಮಲೇಶಿಯಾ ಸೇರಿದಂತೆ ಸಾಕಷ್ಟು ದೇಶಗಳಿಗೆ ಇಲ್ಲಿನ ಆಟಿಕೆಗಳು ರಫ್ತಾಗುತ್ತದೆ. ಆದರೆ, ರಫ್ತು ಸುಂಕದ ಕಾರಣಕ್ಕೆ ಅಲ್ಲಿ ಇವುಗಳ ಬೆಲೆ ಹೆಚ್ಚಳವಾಗುತ್ತಿತ್ತು. ಇದೀಗ ಬ್ರಿಟನ್ ಸುಂಕ ವಿನಾಯಿತಿ ನೀಡಿರುವುದರಿಂದ ಆ ದೇಶಕ್ಕೆ ಬೊಂಬೆಗಳ ರಫ್ತು ಹೆಚ್ಚಾಗುವಂತೆ ಮಾಡುವ ಭರವಸೆ ಮೂಡಿಸಿದೆ.

ವೈವಿಧ್ಯಮಯ ಆಟಿಕೆ:

ಚನ್ನಪಟ್ಟಣದಲ್ಲಿ ನೂರಾರು ಗೊಂಬೆಗಳು ಇಲ್ಲಿ ಸಿದ್ಧಗೊಳ್ಳುತ್ತವೆ. ಬಣ್ಣದ ಬುಗರಿ, ಆಕರ್ಷಕ ರೈಲು, ಮರದ ಕೀ ಬಂಚ್, ಕಿವಿಯೋಲೆ, ಬಳೆ, ನೆಕ್‌ಲೆಸ್, ಅಲಂಕಾರಿಕ ಟೇಬಲ್, ಸ್ಟ್ಯಾಂಡ್ ಲ್ಯಾಂಪ್, ಹ್ಯಾಂಗಿಂಗ್ ವಾಚ್, ಬಾಗಿಲ ಅಲಂಕಾರಿಕ ವಸ್ತು ಸೇರಿದಂತೆ ವೈವಿಧ್ಯಮಯ ಆಟಿಕೆಗಳು ಇಲ್ಲಿ ತಯಾರಾಗುತ್ತವೆ.

ಇದಲ್ಲದೇ ಬೇಡಿಕೆಗೆ ಅನುಗುಣವಾಗಿ ಬೊಂಬೆಗಳು ಹಾಗೂ ಆಟಿಕೆಗಳನ್ನು ತಯಾರಿಸಿ ಕೊಡಲಾಗುತ್ತದೆ. ವಿದೇಶಕ್ಕೆ ರಫ್ತಾಗುವ ಆಟಿಕೆಗಳಲ್ಲಿ ಸಹ ನಾನಾ ಬಗೆ ಇದ್ದು, ಒಂದೊಂದು ದೇಶದಲ್ಲಿ ಒಂದೊಂದು ಬಗೆಯ ಆಟಿಕೆಗಳಿಗೆ ಬೇಡಿಕೆ ಇದೆ. ಆ ದೇಶದ ಬೇಡಿಕೆಗೆ ಅನುಗುಣವಾಗಿ ಆಟಿಕೆಗಳನ್ನು ತಯಾರಿಸುವ ಬೊಂಬೆ ಉದ್ಯಮಿಗಳು ಅದನ್ನು ರಫ್ತು ಮಾಡಲಾಗುತ್ತದೆ.

ಸೊರಗಿದ್ದ ಬೊಂಬೆ ಉದ್ಯಮ:

ಚನ್ನಪಟ್ಟಣದ ಬೊಂಬೆಗಳಿಗೆ ತನ್ನದೇ ಬೇಡಿಕೆ ಇತ್ತು. ಕೊರೋನಾ ನಂತರ ಹಾಗೂ ಚೀನಾ ಬೊಂಬೆಗಳ ಪೈಪೋಟಿಯಿಂದ ಚನ್ನಪಟ್ಟಣದ ಬೊಂಬೆ ಉದ್ಯಮ ಕೊಂಚ ಸೊರಗಿತ್ತು. ನಂತರ ಕೊಂಚ ಚೇತರಿಕೆಯ ಹಾದಿಯಲ್ಲಿ ಸಾಗಿದರು, ಮೊದಲಿನ ಬೇಡಿಕೆ ಇರಲಿಲ್ಲ. ಇದಲ್ಲದೇ ಬೊಂಬೆಗಳ ತಯಾರಿಕೆಗೆ ಬೇಕಾದ ಕಚ್ಛಾ ವಸ್ತುಗಳಾದ ಮರ, ಬಣ್ಣಗಳ ವೆಚ್ಚದಲ್ಲಿ ಸಹ ಬಾರಿ ಏರಿಕೆಯಾದ ಕಾರಣ ಬೊಂಬೆ ಉದ್ಯಮಿಗಳು ನಲುಗಿದ್ದರು.

ಹೊಡೆತ ನೀಡಿದ ಚೀನಾ ಆಟಿಕೆ, ಜಿಎಸ್‌ಟಿ:

ಚೀನಾ ಆಟಿಕೆಗಳ ಭರಾಟೆ ಎದುರು ಚನ್ನಪಟ್ಟಣದ ಬೊಂಬೆಗಳು ಮೊನಚು ಕಳೆದುಕೊಂಡಿದ್ದವು. ಅಗ್ಗದ ದರಕ್ಕೆ ಚೀನಾ ಆಟಿಕೆಗಳು ಸಿಗುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಬೊಂಬೆಗಳ ಮಾರಾಟಕ್ಕೆ ಹೊಡೆತ ಬಿದ್ದಿತ್ತು. ಇದಲ್ಲದೇ ಬೊಂಬೆಗಳ ಮಾರಾಟದ ಮೇಲೆ ಶೇ.೧೨ರಷ್ಟು ಜಿಎಸ್‌ಟಿ ವಿಧಿಸಿದ್ದು, ಇದು ಸಹ ಬೊಂಬೆ ಉದ್ಯಮಕ್ಕೆ ಹೊಡೆತ ನೀಡಿತ್ತು.

ಎಕ್ಸ್‌ಪ್ರೆಸ್ ವೇನಿಂದ ವ್ಯಾಪಾರ ಕುಸಿತ:

ಇನ್ನು ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣಗೊಂಡ ನಂತರ ಚನ್ನಪಟ್ಟಣದ ಬೊಂಬೆಗಳ ವ್ಯಾಪಾರಕ್ಕೆ ಕೊಂಚ ಹೊಡೆತ ಬಿದ್ದಿತ್ತು. ಹಳೇ ಬೆಂ-ಮೈ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸುವುದು ಶುರುಮಾಡಿದ ಇಲ್ಲಿನ ಬೊಂಬೆಗಳ ವ್ಯಾಪಾರದಲ್ಲಿ ಕುಸಿತ ಉಂಟಾಗಿತ್ತು. ಇಲ್ಲಿನ ಬೊಂಬೆಗಳ ಉದ್ಯಮ ಬಹುತೇಕ ಹೊರಗಿನ ಗ್ರಾಹಕರನ್ನೇ ನಂಬಿದ್ದು, ಎಕ್ಸ್‌ಪ್ರೆಸ್ ವೇನಿಂದಾಗಿ ಹೊರಗಿನ ಗ್ರಾಹಕರು ನೇರವಾಗಿ ಬಂದು ಕೊಳ್ಳುವುದು ಕಡಿಮೆಯಾಗಿತ್ತು. ಇದೀಗ ಬ್ರಿಟನ್‌ಗೆ ಬೊಂಬೆಗಳ ರಫ್ತಿಗೆ ಸುಂಕದಿಂದ ವಿನಾಯಿತಿ ಸಿಕ್ಕರುವುದು ಬೊಂಬೆ ಉದ್ಯಮದ ಚೇತರಿಕೆಗೆ ಕಾರಣವಾಗಬಹುದು ಎಂಬ ಆಶಾ ಭಾವನೆ ಮೂಡಿಸಿದೆ.

ಬೊಂಬೆ ಉದ್ಯಮಕ್ಕೆ ಚೇತರಿಕೆಗೆ ಕ್ರಮ:

ಇನ್ನು ಕೇಂದ್ರ ಸರ್ಕಾರ ಚನ್ನಪಟ್ಟಣದ ಬೊಂಬೆ ಉದ್ಯಮದ ಚೈತನ್ಯಕ್ಕೆ ಈ ಹಿಂದೆಯೂ ಸಹ ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ಆತ್ಮನಿರ್ಭರ ಯೋಜನೆಯಡಿ ಬೊಂಬೆಗಳ ಉದ್ಯಮಕ್ಕೆ ಉತ್ತೇಜನ ನೀಡಲು ರೈಲ್ವೆ ನಿಲ್ದಾಣದಲ್ಲಿ ಬೊಂಬೆಗಳ ಮಳಿಗೆ ತೆರೆಲಾಗಿತ್ತು. ಇದಲ್ಲದೇ ಬೊಂಬೆ ಉದ್ಯಮಕ್ಕೆ ಜಾಗತಿಕ ಮಾರುಕಟ್ಟೆ ಕಲ್ಪಿಸಲು ಆನ್‌ಲೈನ್‌ನಲ್ಲಿ ಇಂಡಿಯಾ ಟಾಯ್‌ಫೇರ್ ೨೦೨೧ ವರ್ಚವಲ್ ಕಾರ್ಯಕ್ರಮ ನಡೆಸಲಾಗಿತ್ತು. ಕಾರ್ಯಕ್ರಮಕ್ಕೆ ವರ್ಚುಯಲ್ ಮೂಲಕ ಚಾಲನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ಕರಕುಶಲಕರ್ಮಿಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದರು. ಸಂವಾದದಲ್ಲಿ ಪರಿಸರಸ್ನೇಹಿ ಆಟಿಕೆ ತಯಾರಿಸುವಂತೆ ಮೋದಿ ಸಲಹೆ ನೀಡಿದ್ದರು. ಸಾಕಷ್ಟು ಕ್ರಮಗಳ ಹೊರತಾಗಿಯೂ ಕರಕುಶಲ ಕರ್ಮಿಗಳು ಬೊಂಬೆ ತಯಾರಿಕಾ ಉದ್ಯಮದಿಂದ ವಿಮುಖರಾಗುತ್ತಿದ್ದರು.

ಇದೀಗ ಬ್ರಿಟನ್‌ಗೆ ರಫ್ತಾಗುವ ಬೊಂಬೆಗಳಿಗೆ ಸುಂಕದಿಂದ ವಿನಾಯಿತಿ ದೊರೆತಿರುವುದು ಬೊಂಬೆಗಳ ರಫ್ತು ಉದ್ಯಮಿಗಳು ಸ್ವಾಗತಿಸಿದ್ದಾರೆ.

ಕೋಟ್.................

ಬ್ರಿಟನ್‌ಗೆ ರಫ್ತಾಗುವ ಚನ್ನಪಟ್ಟಣದ ಬೊಂಬೆಗಳಿಗೆ ರಫ್ತಿಗೆ ಸುಂಕದಿಂದ ವಿನಾಯಿತಿ ದೊರೆತಿರುವುದು ಸ್ವಾಗತಾರ್ಹ. ಇದರಿಂದ ಬೊಂಬೆಗಳ ರಫ್ತು ಉದ್ಯಮಗಳಿಗೆ ಅನುಕೂಲವಾಗಲಿದೆ. ಸರ್ಕಾರ ಬೊಂಬೆ ಉದ್ಯಮಕ್ಕೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಇನ್ನಷ್ಟು ಕ್ರಮ ಕೈಗೊಳ್ಳಬೇಕು.

-ವೆಂಕಟೇಶ್, ಬೊಂಬೆ ತಯಾರಕರು, ಚನ್ನಪಟ್ಟಣ

ಪೊಟೋ೨೫ಸಿಪಿಟಿ೧: ಚನ್ನಪಟ್ಟಣದ ಬೊಂಬೆಗಳು.( ಸಾಂಧರ್ಬಿಕ ಚಿತ್ರ)

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್