ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸದಾ ಸಹಕಾರಿ. ಇವುಗಳಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಾಳಜಿ ಹೆಚ್ಚುತ್ತದೆ. ಸಮಾಜದ ಸುಧಾರಣೆಯ ಕಡೆ ನಾವು ನೀವೆಲ್ಲರೂ ಗಮನ ಹರಿಸಬೇಕು. ಶಿಕ್ಷಣದಿಂದ ವೃತ್ತಿ ಬದುಕು ರೂಪಿಸಿಕೊಳ್ಳುವುದಷ್ಟೇ ನಮ್ಮ ಗುರಿಯಾಗಿರಬಾರದು.
ಕನ್ನಡಪ್ರಭ ವಾರ್ತೆ ಮೈಸೂರು
‘ಭಾರತೀಯ ಸಂಸ್ಕೃತಿಗೆ ಸುದೀರ್ಘವಾದ ಪರಂಪರೆಯ ಬೇರುಗಳಿವೆ. ಈ ಪರಂಪರೆಗೆ ಇಂದಿನ ಯುವಜನತೆ ಚಿಗುರುಗಳಿದ್ದಂತೆ. ಈ ಪರಂಪರೆಯ ಬೇರು ಆಳವಾಗಿ ಗಟ್ಟಿಯಾಗಿದೆ. ವಿಶ್ವಕ್ಕೆ ಭಾರತ ವೈವಿಧ್ಯಮಯ ಸಂಸ್ಕೃತಿಯ ರಾಜಧಾನಿಯಾಗಿದ್ದು. ಇದನ್ನು ನಾವೆಲ್ಲರು ಅರಿತು ಈ ಪರಂಪರೆಯ ಜೊತೆಗೆ ನಮ್ಮ ಅನುಸಂಧಾನವಾಗಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಸ್ನಾತಕೋತ್ತರ ವಿಭಾಗದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸದಾ ಸಹಕಾರಿ. ಇವುಗಳಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಾಳಜಿ ಹೆಚ್ಚುತ್ತದೆ. ಸಮಾಜದ ಸುಧಾರಣೆಯ ಕಡೆ ನಾವು ನೀವೆಲ್ಲರೂ ಗಮನ ಹರಿಸಬೇಕು. ಶಿಕ್ಷಣದಿಂದ ವೃತ್ತಿ ಬದುಕು ರೂಪಿಸಿಕೊಳ್ಳುವುದಷ್ಟೇ ನಮ್ಮ ಗುರಿಯಾಗಿರಬಾರದು ಎಂದರು.
ವೃತ್ತಿ ಬದುಕನ್ನು ವ್ಯಕ್ತಿಗತವಾಗಿ ತೆಗೆದುಕೊಳ್ಳುವುದರ ಜೊತೆಗೆ ಅದನ್ನು ಸಮಾಜಮುಖಿ ಕಾರ್ಯದ ಕಡೆಯು ಯೋಚಿಸುವಂತೆ ರೂಪಿಸಿಕೊಳ್ಳಬೇಕು. ಸಮಾಜದ ಅಭಿವೃದ್ಧಿ ಜೊತೆ ಜೊತೆಯಲ್ಲಿ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು. ಮಾನವ ನಾಗರಿಕತೆಯ ಬೆಳವಣಿಗೆಯ ನೆಪದಲ್ಲಿ ಪರಿಸರ ನಾಶವಾಗಬಾರದು. ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಾಕ್ಸಿಂಗ್ ತರಬೇತುದಾರೆ ಮೈಸೂರಿನ ಎಂ. ಸಹನಾ ಮಾತನಾಡಿ, ಕ್ರೀಡೆ ಅಗತ್ಯವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಮುಖ್ಯ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ. ಕ್ರೀಡಾ ಕ್ಷೇತ್ರಗಳಲ್ಲಿ ಹಲವಾರು ಸವಾಲುಗಳಿವೆ. ಕ್ರೀಡಾ ಯಶಸ್ಸು ಅಷ್ಟು ಸರಳವಾದದ್ದಲ್ಲ. ಸಾಧನೆಯ ಹಸಿವು, ಗೆಲುವಿನ ಛಲ ಬಹಳ ಮುಖ್ಯ. ವಿದ್ಯಾರ್ಥಿಗಳ ಕ್ರೀಡಾ ಸಾಧನೆ ಶಿಕ್ಷಣ ಸಂಸ್ಥೆಗಳಿಗೆ ಹಿರಿಮೆ ಗರಿಮೆ ತಂದುಕೊಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಮತ್ತು ಪ್ರಾಂಶುಪಾಲ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ವಿದ್ಯಾರ್ಥಿಗಳು ಹೊಸ ಹೊಸ ಕೌಶಲ್ಯಗಳೊಂದಿಗೆ ಅಭಿಮುಖರಾಗಬೇಕು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗೆ ಕಾಲೇಜು ಸದಾ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಮತ್ತು ಕ್ರೀಡಾ ಸ್ಫೂರ್ತಿ ಗುರುತಿಸುವುದಕ್ಕೆ ಈ ವೇದಿಕೆ ಅವಕಾಶ ಕೊಟ್ಟಿದೆ. ಇದನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ ಎಂದರು.
ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಂದ ಸಂಘಟನಾ ಚತುರತೆ, ನಾಯಕತ್ವದ ಗುಣ, ಧೈರ್ಯ, ಆತ್ಮವಿಶ್ವಾಸ, ಕ್ರಿಯಾಶೀಲತೆ, ಮಾತುಗಾರಿಕೆ, ವಿಭಿನ್ನವಾಗಿ ಆಲೋಚಿಸುವ ಮನಸ್ಥಿತಿ ಬರುತ್ತದೆ. ನಿಮ್ಮ ಮುಂದಿನ ಬದುಕಿನಲ್ಲಿಯೂ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮನಸ್ಥಿತಿ ಕಾಪಾಡಿಕೊಳ್ಳಿ. ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳು ಆರೋಗ್ಯಕರವಾದ ಬದುಕು, ಬುದ್ಧಿಶಕ್ತಿ ಬೆಳವಣಿಗೆ ಮತ್ತು ಸದೃಢ ಮನಸ್ಥಿತಿಗೆ ಕಾರಣವಾಗುತ್ತವೆ ಎಂದು ಅವರು ಹೇಳಿದರು.
ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಎಂ.ಪಿ. ಸೋಮಶೇಖರ್ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಎಂ. ಕಾರ್ತಿಕ್ ಇದ್ದರು.
ವಿದ್ಯಾರ್ಥಿ ಆರ್. ಕಿರಣ್ ನಿರೂಪಿಸಿದರು. ಸಿ. ಸೃಷ್ಟಿ ಶಿವಾನಂದ್ ಸ್ವಾಗತಿಸಿದರು. ಸಹನಾ ಡಿ.ಹೀರೆಮಠ್ ಮತ್ತು ಸಿ.ಎಚ್. ಪೂರ್ವಿಕ ಪ್ರಾರ್ಥಿಸಿದರು. ಎಂ. ಶಿವಕುಮಾರ್ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.