ಮೋದಿಯಿಂದ ವಿಕಸಿತ ಭಾರತ: ಅನುರಾಗ್ ಸಿಂಗ್ ಠಾಕೂರ್

KannadaprabhaNewsNetwork | Updated : Mar 09 2024, 12:10 PM IST

ಸಾರಾಂಶ

ಮೋದಿ ಅವರು ಕಳೆದ 10 ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ, ಅಭಿವೃದ್ಧಿಪರ ಸರ್ಕಾರವನ್ನು ನೀಡಿದ್ದಾರೆ ಎಂದು ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ, ಅಭಿವೃದ್ಧಿಪರ ಸರ್ಕಾರವನ್ನು ನೀಡಿದ್ದಾರೆ ಎಂದು ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಚರ್ಚ್ ಸ್ಟ್ರೀಟ್‍ನ ಬಿ ಹೈವ್ ಪ್ರೀಮಿಯಂನಲ್ಲಿ ನಡೆದ ‘ಬೆಂಗಳೂರಿನ ವಿಕಸಿತ ಭಾರತ ರಾಯಭಾರಿಗಳ ಸಮಾವೇಶ’ದಲ್ಲಿ ಮಾತನಾಡಿದ ಅವರು, ಭವಿಷ್ಯವು ಕೂಡ ಭ್ರಷ್ಟಾಚಾರ ರಹಿತ ಸರ್ಕಾರ ನಮ್ಮದಾಗಿರಲಿದೆ ಎಂದು ವಿಶ್ವಾಸದಿಂದ ನುಡಿದರು.

ಹಿಂದಿನ ಕಾಂಗ್ರೆಸ್ ಪಕ್ಷದ ಪ್ರಧಾನಿ ರಾಜೀವ್ ಗಾಂಧಿಯವರು 100 ರು. ಅನುದಾನ ಫಲಾನುಭವಿಗೆ ಬಿಡುಗಡೆ ಆದರೆ, ಕೇವಲ 15 ರು. ಅಂತ್ಯದಲ್ಲಿ ಸಂಬಂಧಿತರಿಗೆ ತಲುಪುತ್ತದೆ ಎಂದಿದ್ದರು. 

ಈಗ ನೇರ ಫಲಾನುಭವಿಗೆ ಸೌಲಭ್ಯ (ಡಿಬಿಟಿ) ಮೂಲಕ 100ಕ್ಕೆ 100ರಷ್ಟು ಮೊತ್ತ ಸಂಬಂಧಿತರನ್ನು ತಲುಪುತ್ತದೆ. ನಡುವೆ ಒಂದೇ ಒಂದು ಪೈಸೆಯೂ ಮಧ್ಯವರ್ತಿಗಳಿಗೆ ಸೇರದೆ ಇರುವಂಥ ವ್ಯವಸ್ಥೆಯನ್ನು ನಾವು ಜಾರಿ ಮಾಡಿದ್ದೇವೆ ಎಂದು ಹೇಳಿದರು.

ಐಎಂಎಫ್ ವರದಿ, ಮೂಡಿಸ್ ವರದಿಯಲ್ಲಿ ಭಾರತವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ತಿಳಿಸಲಾಗಿದೆ. ಮುಂದಿನ 2-3 ದಶಕಗಳಲ್ಲಿ ಈ ಬೆಳವಣಿಗೆ ಮುಂದುವರಿಯಲಿದೆ. ಕ್ರೀಡೆಯಿಂದ ಬಾಹ್ಯಾಕಾಶದವರೆಗೆ ಕಳೆದ 10 ವರ್ಷಗಳಲ್ಲಿ ಭಾರತ ಮಹಾನ್ ಸಾಧನೆ ಮಾಡಿದೆ ಎಂದು ವಿವರಿಸಿದರು.

2004-14ರ ನಡುವೆ ಗರಿಷ್ಠ ಹಣದುಬ್ಬರ ಇತ್ತು. ಅದು ಶೇ 10ಕ್ಕಿಂತ ಹೆಚ್ಚಾಗಿತ್ತು. ಗರಿಷ್ಠ ವಿದೇಶಿ ಸಾಲವೂ ನಮ್ಮ ದೇಶದ್ದಾಗಿತ್ತು. ಹಗರಣಗಳು, ಅಸಮರ್ಪಕ ನೀತಿ ಮೊದಲಾದವು ಇವುಗಳಿಗೆ ಕಾರಣವಾಗಿದ್ದವು. ಆದರೆ, ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳುವ ಶೂನ್ಯ ಹಗರಣಗಳ ಆಡಳಿತ ನಮ್ಮದಾಗಿದ್ದು, ಅದು ಅಭಿವೃದ್ಧಿಗೆ ಪೂರಕ ಎಂದು ತಿಳಿಸಿದರು.

ಎಲ್‍ಪಿಜಿ ಸಿಲಿಂಡರ್ ಸಂಪರ್ಕ ಇಲ್ಲದ 10 ಕೋಟಿಗೂ ಹೆಚ್ಚು ಜನರಿಗೆ ಸಂಪರ್ಕ ಕೊಡಲಾಗಿದೆ. 12 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಿಸಿ ಕೊಡಲಾಗಿದೆ. 

ಜಲಜೀವನ್ ಮಿಷನ್‍ನಡಿ 14 ಕೋಟಿ ನಲ್ಲಿ ನೀರಿನ ಸಂಪರ್ಕವನ್ನು ಮನೆಗಳಿಗೆ ಕೊಡಲಾಗಿದೆ. ಪ್ರತಿ ಸೆಕೆಂಡಿಗೆ ಒಂದು ಹೊಸ ನಲ್ಲಿ ನೀರಿನ ಸಂಪರ್ಕ ನೀಡಿದ ಸಾಧನೆ ನಮ್ಮದು ಎಂದು ವಿವರ ನೀಡಿದರು.

ಇದೇ ವೇಳೆ ವಿಕಸಿತ ಭಾರತ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋವನ್ನು ಪ್ರದರ್ಶಿಸಲಾಯಿತು. 2047ರ ಹೊತ್ತಿಗೆ ವಿಕಸಿತ ಅಥವಾ ಅಭಿವೃದ್ಧಿ ಹೊಂದಿದ ದೇಶವಾಗಿ ಮತ್ತು ವಿಶ್ವದ ಮೂರನೇ ಅತಿದೊಡ್ಡ ಹಣಕಾಸು ವ್ಯವಸ್ಥೆಯಾಗಿ ಪರಿವರ್ತಿಸುವ ಕುರಿತ ಮಾಹಿತಿ ನೀಡಲಾಯಿತು. ಬಿ ಹೈವ್ ಸಂಸ್ಥೆಯ ಶೇಷಗಿರಿ ರಾವ್, ಬಿಜೆಪಿ ಮುಖಂಡ ಅನಿಲ್ ಶೆಟ್ಟಿ ಇದ್ದರು.

Share this article