ಕನ್ನಡಪ್ರಭ ವಾರ್ತೆ ಭಾರತೀನಗರ
ಬಾಹ್ಯಾಕಾಶ ತಂತ್ರಜ್ಞಾನದ ಸಾಧನೆಯಲ್ಲಿ ವಿಶ್ವದಲ್ಲೇ ಭಾರತ ಮೊದಲನೇ ಸ್ಥಾನದಲ್ಲಿದೆ. ಚಂದ್ರನ ಅಂಗಳಕ್ಕೆ 2ನೇ ಭಾರಿ ಯಶಸ್ವಿಯಾಗಿ ಕಾಲಿಟ್ಟ ದೇಶ ಭಾರತ ಎಂದು ವಿಜ್ಞಾನಿ ಪ್ರೊ. ಸಿ.ಡಿ.ಪ್ರಸಾದ್ ತಿಳಿಸಿದರು.ಭಾರತೀ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಭೌತಶಾಸ್ತ್ರ ವಿಭಾಗದ ಸಹಯೋಗದಲ್ಲಿ ನಡೆದ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಪವಾಡಗಳಲ್ಲಿ ವೈಜ್ಞಾನಿಕತೆ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
1939ರಲ್ಲಿ ಸಾರಾಬಾಯಿಯವರು ಬಾಹ್ಯಕಾಶ ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ರಾಕೆಟ್ ಉಡಾವಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅವರ ಇಚ್ಚೆಯಂತೆ ತಮಿಳುನಾಡಿನಲ್ಲಿ ತುಂಬಾ ಎಂಬ ಸಣ್ಣ ಗ್ರಾಮದಲ್ಲಿ ಭಾರತೀಯ ಬಾಹ್ಯಕಾಶ ಸಂಶೋಧನಾ ಕೇಂದ್ರ ತೆರೆಯಲಾಯಿತು ಎಂದರು.ಅದಕ್ಕೆ ಇದ್ದ ಅಡ್ಡಿ, ಆತಂಕಗಳನ್ನು ದೂರ ಮಾಡಿ ಇಸ್ರೋ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ನಂತರ ಚಂದ್ರಯಾನ ಎರಡರವರೆಗೂ ಬೆಳೆದಿತ್ತು. ಈಗ ಚಂದ್ರಯಾನ 3ಕ್ಕೂ ಇಸ್ರೋ ಸಜ್ಜಾಗಿದೆ ಎಂದು ತಿಳಿಸಿದರು.
ಬಾಹ್ಯಕಾಶ ಸಂಶೋಧನೆಯಲ್ಲಿ ಇಸ್ರೋ 97.3 ರಷ್ಟು ಸಾಧನೆ ಮಾಡಿದೆ. ನಾಸಾ 65 ರಷ್ಟು ಸಾಧನೆ ಮಾಡಿದ್ದು ಬಾಹ್ಯಕಾಶ ತಂತ್ರಜ್ಞಾನದಲ್ಲಿ ಭಾರತ ದೇಶದ ಸಾಧನೆಯೇ ಹೆಚ್ಚು. ಮುಂದಿನ ದಿನಗಳಲ್ಲಿ ಚಂದ್ರಯಾನ 3 ಕ್ಕೆ ಇಸ್ರೋ ಸಜ್ಜಾಗಿದೆ. ಹಿಂದಿನ ಚಂದ್ರಯಾನಕ್ಕಿಂತ ಹೆಚ್ಚು ಸಾಧನೆ ಮೆರೆಯುವ ಮೂಲಕ ವಿಶ್ವಕ್ಕೆ ಮಾದರಿಯಾಗಲಿದೆ ಎಂದರು.ಪ್ರಾಂಶುಪಾಲ ಡಾ.ಪಿ.ನಾಗೇಂದ್ರ ಮಾತನಾಡಿ, ಪ್ರಸ್ತುತ ವಿಜ್ಞಾನ ನಾಗಲೋಟದಲ್ಲಿ ಬೆಳೆಯುತ್ತಿದೆ. ಪ್ರತಿಯೊಂದು ವಿಷಯಕ್ಕೂ ವಿಜ್ಞಾನ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಭೌತಶಾಸ್ತ್ರದ ಪ್ರಾಧ್ಯಾಪಕ ಪ್ರೊ.ಎಸ್.ಪಿ.ಬಸವರಾಜು, ಸಿ.ವಿ.ರಾಮನ್‌ರವರ ಸುಪ್ರಸಿದ್ಧ ಜೀವನ ಮತ್ತು ಸಾಧನೆಗಳ ಬಗ್ಗೆ ವಿಚಾರ ಮಂಡಿಸಿದರು. ವಿಚಾರವಾದಿ ಪ್ರೊ.ಎಂ.ನರೇಂದ್ರ ನಾಯಕ್ , ಪವಾಡಗಳ ಹಿಂದಿರುವ ವೈಜ್ಞಾನಿಕ ಸತ್ಯಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.ಸಂವಿಧಾನದ ಪೀಠಿಕೆಯನ್ನು ಬೋಧನೆ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು.
ಇದೇ ವೇಳೆ ಭಾರತೀ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ರೇವಣ್ಣ, ಸ್ನಾತ್ತಕೋತ್ತರ ವಿಭಾಗದ ನಿರ್ದೇಶಕ ಎಸ್.ನಾಗರಾಜು, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಜವರೇಗೌಡ, ಪ್ರೊ.ಎಸ್.ಜಯರಾಮೇಗೌಡ ಇದ್ದರು.