ಭಟ್ಕಳ: ತಾಲೂಕಿನಾದ್ಯಂತ ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ತಾಲೂಕು ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಹಲವು ಮಹನೀಯರ ಹೋರಾಟ, ತ್ಯಾಗದಿಂದ ನಮಗೆ ಸ್ವಾತಂತ್ರ್ಯ ಪ್ರಾಪ್ತಿಯಾಗಿದೆ. ನಾವು ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಬೇಕು. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಕಳೆದ 79 ವರ್ಷಗಳಲ್ಲಿ ಭಾರತ ಆರ್ಥಿಕ, ಶಿಕ್ಷಣ, ವಿಜ್ಞಾನ ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಸಾಧಿಸಿದೆ. ನಮ್ಮ ಜಿಡಿಪಿ ಶೇ.2-3ರಿಂದ ಶೇ.6ಕ್ಕೆ ಏರಿಕೆಯಾಗಿದೆ. ಅಂದಿನ ಶೇ.30ಕ್ಕಿಂತ ಕಡಿಮೆ ಇದ್ದ ಶೈಕ್ಷಣಿಕ ಮಟ್ಟ ಇಂದಿಗೆ ಶೇ.75 ದಾಟಿದೆ. ಪ್ರತಿಯೊಬ್ಬರು ನಮ್ಮ ರಾಷ್ಟ್ರದ ಬಗ್ಗೆ ಅಭಿಮಾನ ಹೊಂದಬೇಕು ಎಂದರು.ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಅಲ್ತಾಫ್ ಮೊಹಿದ್ದೀನ್ ಖರೂರಿ, ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಖಾಜಿಯಾ ಅಫ್ಸಾ ಹುಜೈಫಾ, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ರಾಜು ನಾಯ್ಕ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಎಂ., ಸಿಪಿಐ ಮಂಜುನಾಥ ಲಿಂಗಾರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಜಾಲಿ ಪಂಚಾಯತ್ ಮುಖ್ಯಾಧಿಕಾರಿ ಮಂಜಪ್ಪ ಎಸ್ ಸೇರಿದಂತೆ ಪುರಸಭೆ, ಜಾಲಿ ಪಪಂ, ಸದಸ್ಯರು, ಗಣ್ಯರು ಇದ್ದರು. ಪೊಲೀಸ್ ಇಲಾಖೆ ಹಾಗೂ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ಷೇತ್ರದ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಸ್ವಾಗತಿಸಿದರು. ಶಿಕ್ಷಕ ಶ್ರೀಧರ ಶೇಟ್ ನಿರೂಪಿಸಿದರು. ಶುಕ್ರವಾರ ಬೆಳಿಗ್ಗೆ ವ್ಯಾಪಕ ಮಳೆ ಸುರಿಯುತ್ತಿದ್ದರೂ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಎಲ್ಲೆಡೆ ದೇಶಾಭಿಮಾನ ಮೊಳಗಿತು.
ಭಟ್ಕಳದ ತಾಲೂಕು ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ.