- ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿ ಸಂಘ ಸಮಾರೋಪ - - -
ಹರಿಹರ: ಜಾಗತಿಕ ಹೂಡಿಕೆಗೆ ಭಾರತ ಪ್ರಶಸ್ತವಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು.ನಗರದ ಸರ್ಕಾರಿ ಪಾಲಿಟೆಕ್ನಿಕ್ ನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ದೇಶದ ಸುಮಾರು 15600 ಪಾಲಿಟೆಕ್ನಿಕ್ ಐಟಿಐ ಮತ್ತು ಡಿಪ್ಲೊಮಾ ಕಾಲೇಜುಗಳಿಂದ ವಾರ್ಷಿಕ ₹10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಬರುತ್ತಿದ್ದಾರೆ. ಅಂಥ ವಿದ್ಯಾರ್ಥಿಗಳೆಲ್ಲ ನೌಕರಿಯೇ ಬೇಕು ಎಂದಲ್ಲಿ, ದೇಶದ ನಿವ್ವಳ ಆಂತರಿಕ ಉತ್ಪಾದನೆ ವೃದ್ಧಿ ಆಗುವುದಿಲ್ಲ. ಪಾಲಿಟೆಕ್ನಿಕ್ ಹಾಗೂ ಡಿಪ್ಲೊಮಾದಾರರು ಮಧ್ಯಮ ಹಾಗೂ ಸಣ್ಣದಾದರೂ ಪರವಾಗಿಲ್ಲ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಬೇಕು ಎಂದು ತಿಳಿಸಿದರು.
ಇಂದಿಗೂ ನಮ್ಮ ದೇಶ ಅಮೆರಿಕ, ಜರ್ಮನಿ, ದಕ್ಷಿಣ ಕೋರಿಯಾ, ತೈವಾನ್ ಮುಂತಾದ ದೇಶಗಳಿಂದ ವಾರ್ಷಿಕ ಸಹಸ್ರಾರು ಹಡಗುಗಳಷ್ಟು ಯಂತ್ರೋಪಕರಣಗಳ ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇವುಗಳನ್ನು ನಮ್ಮ ಯುವಜನತೆ ಭಾರತದಲ್ಲೇ ಉತ್ಪಾದಿಸುವ ಬಗ್ಗೆ ಗಂಭೀರವಾಗಿ ಗಮನಿಸಬೇಕಾಗಿದೆ ಎಂದು ತಿಳಿಸಿದರು.ಅನೇಕ ಮುಂದುವರಿದ ರಾಷ್ಟ್ರಗಳ ಯುವಜನತೆಯನ್ನು ಗಮನಿಸಿದರೆ, ದೇಶದ ಯುವಜನತೆಯಲ್ಲಿ ಬುದ್ಧಿಶಕ್ತಿ, ಯೋಚನಾಶಕ್ತಿ, ಕ್ರಿಯಾಶಕ್ತಿ, ಅಪಾರವಾಗಿದೆ. ಆದರೆ, ಅದರ ಬಳಕೆಯಾಗುತ್ತಿಲ್ಲ. ಕಾರಣ ನಮ್ಮ ಯುವಜನತೆಗೆ ತಮ್ಮ ಸಾಮಥ್ಯದಲ್ಲಿ ಅರಿವಿಲ್ಲ ಎಂದರು.
ಪ್ರಾಚಾರ್ಯ ಬಿ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಬೋಧಕರಾದ ಜಕಣಾಚಾರ್ಯ ಕಮ್ಮಾರ್, ಶಾಂತಕುಮಾರ್ ನಾಯ್ಡು, ರಾಜು ಎನ್., ಗುರುಸ್ವಾಮಿ ಟಿ.ಬಿ., ಶಿವರಾಜ್ ಕೆ.ವಿ., ತನ್ನೀರು ಸ್ವಪ್ನಾ, ವಿದ್ಯಾರ್ಥಿ ಸಂಘದ ಕಿರಣ್ ಟಿ.ಪಿ., ಆಕಾಶ್, ಬಿ.ಮಾಲತೇಶ್, ಯು.ಕೆ. ಭಾರತಿ, ಮನೋಜ್ ಎಸ್.ಎಸ್. ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಾಣಿಶ್ರೀ ಹಾಗೂ ಕಸ್ತೂರಿ ಪ್ರಾರ್ಥಿಸಿದರು. ನಿರ್ಮಲ ಸ್ವಾಗತಿಸಿ, ಲಕ್ಷ್ಮೀ, ನಯನ, ನಿತಿನ್, ಸೌಜನ್ಯ, ಅನ್ನಪೂರ್ಣ ಹಾಗೂ ಐಶ್ವರ್ಯಾ ಕಾರ್ಯಕ್ರಮ ನಿರೂಪಿಸಿದರು. ಅನುಷಾ ವಂದಿಸಿದರು.
- - - -28ಎಚ್‍ಆರ್‍ಆರ್03- 3ಎ:ಹರಿಹರದ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿ ಸಂಘ ಸಮಾರೋಪ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ, ಪ್ರಾಚಾರ್ಯ ಬಿ.ಪ್ರಕಾಶ್ ಇತರರು ಭಾಗವಹಿಸಿದ್ದರು.