ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾರತವು 6G ತಂತ್ರಜ್ಞಾನದಲ್ಲಿ ಜಾಗತಿಕ ನಾಯಕತ್ವ ವಹಿಸಲು ಅಗತ್ಯವಿರುವ ಎಲ್ಲ ಸಾಮರ್ಥ್ಯ ಮತ್ತು ಶಕ್ತಿ ಹೊಂದಿದೆ ಎಂದು ಕೇಂದ್ರ ಸಂವಹನ ಹಾಗೂ ಈಶಾನ್ಯ ಪ್ರದೇಶದ ಅಭಿವೃದ್ಧಿ ಖಾತೆ ಸಚಿವ ಜ್ಯೋತಿರಾದಿತ್ಯ ಎಂ.ಸಿಂಧಿಯಾ ಹೇಳಿದರು.ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯಲ್ಲಿ ಆಯೋಜಿಸಲಾದ ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ (TCOE) ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ದೂರಸಂಪರ್ಕ ತಜ್ಞರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 6G ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಸಂಶೋಧನೆ ಹಾಗೂ ನಾವೀನ್ಯತೆಯನ್ನು ಉತ್ತೇಜಿಸಲು ಡಿಜಿಟಲ್ ಹೆದ್ದಾರಿ ನಿರ್ಮಾಣಕ್ಕೆ ಬದ್ಧವಾಗಿದೆ ಎಂದು ಭರವಸೆ ನೀಡಿದರು.5G/6G, ಕೃತಕ ಬುದ್ಧಿಮತ್ತೆ (AI), ಇಂಟರ್ನೆಟ್ ಆಫ್ ಥಿಂಗ್ಸ್ (IOT) ಮುಂತಾದ ಮುಂದಿನ ತಂತ್ರಜ್ಞಾನಗಳು ಭಾರತದ ಭವಿಷ್ಯವನ್ನು ರೂಪಿಸುತ್ತವೆ. ಈ ನಿಟ್ಟಿನಲ್ಲಿ VTU ತನ್ನ ಶೈಕ್ಷಣಿಕ ಸಾಮರ್ಥ್ಯವನ್ನು ರಾಷ್ಟ್ರದ ಡಿಜಿಟಲ್ ಗುರಿಗಳೊಂದಿಗೆ ಜೋಡಿಸಿರುವುದಕ್ಕಾಗಿ ಪ್ರಶಂಸೆ ವ್ಯಕ್ತಪಡಿಸಿದರು.VTUನಲ್ಲಿ TCOE ಸ್ಥಾಪನೆಯು ದೇಶೀಯ ನಾವೀನ್ಯತೆಯ ಮೂಲಕ ಆತ್ಮನಿರ್ಭರ ಭಾರತ ನಿರ್ಮಾಣದತ್ತ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕೇಂದ್ರವು ಭವಿಷ್ಯದ ದೂರಸಂಪರ್ಕ ನಾಯಕರಿಗೆ ತಂತ್ರಜ್ಞಾನದ ಜ್ಞಾನ ನೀಡುವ ತಂತ್ರಜ್ಞಾನದ ದೇವಾಲಯವಿದ್ದಂತೆ ಇದು ಜಾಗತಿಕ ಡಿಜಿಟಲ್ ಪರಿವರ್ತನೆಯಲ್ಲಿಯೂ ಭಾರತದ ನಾಯಕತ್ವವನ್ನು ಬಲಪಡಿಸುತ್ತದೆ. TCOE ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ದೂರಸಂಪರ್ಕ ಉದ್ಯಮದ ನಡುವೆ ಸೇತುವೆ ರಚಿಸುವ ಮೂಲಕ ಈ ಅವಶ್ಯಕ ಸಮಯದಲ್ಲಿ ಸಹಯೋಗಕ್ಕಾಗಿ ಇದು ವೇದಿಕೆಯಾಗಲಿದೆ ಎಂದರು.ದೇಶದಲ್ಲಿ 900 ಮಿಲಿಯನ್ ಮೊಬೈಲ್ ಸಂಪರ್ಕಗಳಿರುವ ಡಿಜಿಟಲ್ ಕ್ರಾಂತಿಯ ಕುರಿತು ವಿವರಿಸಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಮವಾಯಿತ 4G/5G ಪ್ರವೇಶಕ್ಕೆ ಸರ್ಕಾರದ ಬದ್ಧತೆಯನ್ನು ಹಂಚಿಕೊಂಡರು. ಇಂಜಿನೀಯರಿಂಗ್ ಪದವಿಧರರನ್ನು ಹೊಸ ಡಿಜಿಟಲ್ ಆರ್ಥಿಕತೆಗೆ ಸಿದ್ಧಪಡಿಸಲು idu ಸಹಾಯಕಾರಿಯಾಗಲಿದೆ ಮತ್ತೆ ಆ ನಿಟ್ಟಿನಲ್ಲಿ ಈ ಕೇಂದ್ರ ಕೆಲಸ ಮಾಡಬೇಕು. ಶೈಕ್ಷಣಿಕ ಪಠ್ಯಕ್ರಮಗಳಲ್ಲಿ AI, ಮೆಷಿನ್ ಲರ್ನಿಂಗ್ ಮತ್ತು ನೆಟ್‌ವರ್ಕ್ ಭದ್ರತೆ ಸೇರಿಸಬೇಕು ಎಂದು ಸಲಹೆ ನೀಡಿದರು.TCOE ದೂರಸಂಪರ್ಕ ಆಧಾರಿತ ಸ್ಟಾರ್ಟ್‌ಅಪ್‌ಗಳಿಗೆ ಮೂಲಸೌಕರ್ಯ, ಮಾರ್ಗದರ್ಶನ ಹಾಗೂ ಸಂಶೋಧನಾ ನಿಧಿ ಒದಗಿಸುವ ಯೋಜನೆಯಿಂದ ಇದು ಕೂಡಿದೆ. ಪ್ರತಿಯೊಬ್ಬ ನಾಗರಿಕನಿಗೆ ಕೈಗೆಟಕುವ ಹಾಗೂ ಸುಲಭವಾಗಿ ದೊರೆಯುವ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಮಾದರಿಯಲ್ಲಿ ಸಂಶೋಧನಾ ಕಾರ್ಯ ನಡೆಯಬೇಕಿದೆ. ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಮಾತನಾಡಿ, ಇವತ್ತಿನ ವಿದ್ಯಾರ್ಥಿಗಳಿಗೆ ಇಂತಹ ಕೇಂದ್ರಗಳು ಅವಶ್ಯಕವಾಗಿದೆ ಎಂದರು.ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್.ಎಸ್ ಅವರು ಅತಿಥಿಗಳನ್ನುಸ್ವಾಗತಿಸಿ ಪರಿಚಯಿಸಿ ಕೇಂದ್ರ ಸಚಿವರ ದೃಷ್ಟಿಕೋನಕ್ಕೆ ಕೃತಜ್ಞತೆ ಸಲ್ಲಿಸಿದರು ಮತ್ತು TCOE ಶೀಘ್ರದಲ್ಲೇ ರಾಷ್ಟ್ರಮಟ್ಟದ ಶೈಕ್ಷಣಿಕ ಶ್ರೇಷ್ಠತೆ ಹಾಗೂ ಉದ್ಯಮ ಸಹಯೋಗದ ಮಾದರಿಯಾಗಿ ಪರಿವರ್ತನೆಯಾಗಲಿದೆ. ವಿಟಿಯು ಈ ಮೂಲಕ ಮುಂದಾಳತ್ವ ವಹಿಸಿಕೊಂಡಿದೆ ಎಂದರು.ಈ ಸಮಾರಂಭದಲ್ಲಿ ವಿಟಿಯು ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ವಿಟಿಯು ಕಾರ್ಯಕಾರಿ ಪರಿಷತ್ ಮತ್ತು ವಿದ್ಯಾ ವಿಧಾನ ಮಂಡಲ ಸದಸ್ಯರು, ವಿಟಿಯು ಅಧೀನ ಕಾಲೇಜಗಳ ಸಂಸ್ಥೆಯ ಮುಖ್ಯಸ್ಥರು, ಪ್ರಾಂಶುಪಾಲರು, ದೂರಸಂಪರ್ಕ ಇಲಾಖೆ (DOT)ಯ ಹಿರಿಯ ಅಧಿಕಾರಿಗಳು, ವಿಟಿಯು ಅಧ್ಯಾಪಕರು, ಸಿಬ್ಬಂದಿ ವರ್ಗ ಮತ್ತು ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರತಿ ವ್ಯಕ್ತಿಯ ವೃತ್ತಿಜೀವನ ರೂಪಿಸುವಲ್ಲಿ ಗುರುಗಳ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ಸರ್ ಎಂ.ವಿಶ್ವೇಶ್ವರಯ್ಯ ಅವರು ಒಬ್ಬ ಶ್ರೇಷ್ಠ ತಂತ್ರಜ್ಞ ಜೊತೆಗೆ ಗುರು ಆಗಿದ್ದರು. ಈ ಕೇಂದ್ರವು ದೂರಸಂಪರ್ಕ ಕ್ಷೇತ್ರದಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮ-ಶೈಕ್ಷಣಿಕ ಸಹಯೋಗಕ್ಕೆ ಮಾರ್ಗದರ್ಶನ ನೀಡುವ ದೃಷ್ಟಿಕೋನದ ಯೋಜನೆಯಾಗಿದೆ.-ಜ್ಯೋತಿರಾದಿತ್ಯ ಎಂ.ಸಿಂಧಿಯಾ,
ಕೇಂದ್ರ ಸಂವಹನ ಹಾಗೂ ಈಶಾನ್ಯ ಪ್ರದೇಶದ ಅಭಿವೃದ್ಧಿ ಖಾತೆಯ ಸಚಿವರು.