ಭಾರತದ ಡಿಜಿಟಲ್‌ ವಿಶ್ವಕ್ಕೇ ಮುಂಚೂಣಿ: ನಿರ್ಮಲಾ

KannadaprabhaNewsNetwork |  
Published : Oct 15, 2025, 02:07 AM IST

ಸಾರಾಂಶ

ದೇಶದ ಅಭಿವೃದ್ಧಿ ವೇಗಕ್ಕೆ ತಕ್ಕಂತೆ ಹಣಕಾಸು ತಂತ್ರಜ್ಞಾನ (ಫಿನ್‌ಟೆಕ್‌) ಕೂಡ ಬೆಳೆಯುತ್ತಿದೆ. ಡಿಜಿಟಲ್‌ ವ್ಯವಹಾರದಲ್ಲಿ ವಿಶ್ವದಲ್ಲೇ ಭಾರತ ಮುಂಚೂಣಿಯಲ್ಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ದೇಶದ ಅಭಿವೃದ್ಧಿ ವೇಗಕ್ಕೆ ತಕ್ಕಂತೆ ಹಣಕಾಸು ತಂತ್ರಜ್ಞಾನ (ಫಿನ್‌ಟೆಕ್‌) ಕೂಡ ಬೆಳೆಯುತ್ತಿದೆ. ಡಿಜಿಟಲ್‌ ವ್ಯವಹಾರದಲ್ಲಿ ವಿಶ್ವದಲ್ಲೇ ಭಾರತ ಮುಂಚೂಣಿಯಲ್ಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಇಲ್ಲಿನ ಐಐಟಿಯಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಸಿಎಸ್‌ಆರ್‌ ಫಂಡ್‌ನಲ್ಲಿ ನಿರ್ಮಿಸಿದ ಧರ್ತಿ ಬಯೋನೆಸ್ಟ್‌ ನೂತನ ಇನ್‌ಕ್ಯುಬೇಟರ್‌ ಸೆಂಟರ್‌ ಉದ್ಘಾಟಿಸಿದ ಬಳಿಕ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿ ಜತೆ ಜತೆಗೆ ಫಿನ್‌ಟೆಕ್‌ ಕೂಡ ಬೆಳೆಯುತ್ತಿರುವುದು ದೊಡ್ಡ ಕ್ರಾಂತಿಕಾರಿ. ಬ್ಯಾಂಕ್ ಮತ್ತು ಗ್ರಾಹಕರ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿದೆ. ಕೆಲವೇ ಕ್ಷಣಗಳಲ್ಲಿ ಗ್ರಾಹಕರನ್ನು ತಲುಪುವ ಶಕ್ತಿ ಇಂದು ಬ್ಯಾಂಕ್‌ಗಳಿಗೆ ಬಂದಿದೆ. ಕ್ಯೂಆರ್‌ ಕೋಡ್‌ ದೇಶದ ಮೂಲೆ ಮೂಲೆಗಳಲ್ಲಿ ಬಳಕೆಯಾಗುತ್ತಿದೆ. ಅನಕ್ಷರಸ್ಥರು ಕೂಡ ಕ್ಯೂ ಆರ್‌ ಕೋಡ್‌ ಮೂಲಕ ತಮ್ಮ ವ್ಯವಹಾರ ಮಾಡಿಕೊಳ್ಳುತ್ತಿದ್ದಾರೆ ಎಂದರು.ವಿಶ್ವದ ಶೇ.61ರಷ್ಟು ಡಿಜಿ ವ್ಯವಹಾರ ಭಾರತದಲ್ಲಿ:

ದೇಶದಲ್ಲಿ ಇಂದು ಶೇ.87ರಷ್ಟು ವ್ಯವಹಾರ ಡಿಜಿಟಲ್ ಮೂಲಕ ನಡೆಯುತ್ತಿದ್ದರೆ, ವಿಶ್ವದಲ್ಲಿ ಇದರ ಪ್ರಮಾಣ ಶೇ.61ರಷ್ಟಿದೆ. ಹೀಗಾಗಿ ಡಿಜಿಟಲ್‌ ಹಣಕಾಸು ವ್ಯವಹಾರದಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.

ಭಾಷೆ ಮೇಲೆ ಹಿಡಿತ ಸಾಧಿಸಿ:

ಭಾಷೆ ಇಂದು ಉದ್ಯೋಗ ಪಡೆದುಕೊಳ್ಳುವ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಟ್ಟಿದೆ. ವಿದೇಶಿ ಭಾಷೆ ಕಲಿತರೆ ಅದು ಕೂಡ ವಿಪುಲ ಅವಕಾಶ ಕಲ್ಪಿಸುತ್ತದೆ ಎಂದ ಅವರು, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಆಸಕ್ತಿಗೆ ತಕ್ಕಂತ ಕೌಶಲ್ಯ ಕಲಿಸಬೇಕು ಎಂದು ಸಲಹೆ ನೀಡಿದರು.

ಪರಿಸರ ಸ್ನೇಹಿ:

ಡಿಜಿಟಲ್ ಮೂಲಭೂತ ಸೌಕರ್ಯ ವೃದ್ಧಿಸಬೇಕಾಗಿದೆ. ಯಾವುದೇ ತಂತ್ರಜಾನ ಬಂದರೂ ಅದೂ ಪರಿಸರಕ್ಕೆ ಪೂರಕ ಮತ್ತು ಹಸಿರೀಕರಣಕ್ಕೆ ಸಹಾಯಕವಾಗಬೇಕು ಮತ್ತು ಮಾಲಿನ್ಯ ರಹಿತವಾಗಬೇಕು. ಇದಕ್ಕೆ ಸರ್ಕಾರ ಪೂರಕವಾಗಿ ಎಲ್ಲ ಸಹಾಯ ಮಾಡುತ್ತದೆ. ಹಸಿರು ಇಂಧನ ಉತ್ಪಾದನೆಗೆ ಸರ್ಕಾರ ಒತ್ತು ನೀಡುತ್ತಿದೆ. ಸರ್ಕಾರ ಮತ್ತು ಖಾಸಗಿ ವಲಯ ಒಟ್ಟಾಗಿ ಹಸರೀಕರಣಕ್ಕೆ ಒತ್ತು ನೀಡಬೇಕಾಗಿದೆ ಎಂದು ಕೇಂದ್ರ ಸಚಿವೆ ಹೇಳಿದರು.

ಸಂಶೋಧನೆಗಳು ನಿಲ್ಲದಿರಲಿ:

ಯುವ ಸಂಶೋಧಕರು ಉತ್ತಮ, ಅತ್ಯುತ್ತಮ ಸಂಶೋಧನೆಗಳನ್ನು ನಿರಂತರವಾಗಿ ಕೈಗೊಳ್ಳುತ್ತಲೇ ಇರಬೇಕು. ಸಂಶೋಧನೆಗಳು ಲಾಭದಾಯಕವಾಗುತ್ತದೆ ಎಂಬ ಬಗ್ಗೆ ಒಂದಿಷ್ಟು ಕಾಯಬೇಕು. ಇದು ಅನಿವಾರ್ಯ ಕೂಡ. ಇಂತಹ ಇನ್ ಕ್ಯುಬೇಟರ್ ಕೇಂದ್ರಗಳು ಇದಕ್ಕೆ ಪೂರಕವಾಗಿ ಸಹಾಯ ಮಾಡುತ್ತವೆ. ಯಾವುದೇ ಕಾರಣಕ್ಕೂ ನಿರಾಶರಾಗದೆ, ಸಂಶೋಧನೆಗಳನ್ನು ನಿಲ್ಲಿಸದೇ ನಿರಂತರವಾಗಿ ಸಂಶೋಧನೆ ನಡೆಸುವ ಮೂಲಕ ಸಮಾಜ, ದೇಶಕ್ಕೆ ಕೊಡುಗೆ ನೀಡಲು ಸಜ್ಜಾಗಬೇಕು. ಸಂಶೋಧನೆ ಮಾಡುವತ್ತ ಮಾತ್ರ ಗಮನಹರಿಸಿ. ಆ ಸಂಶೋಧನೆಗಳನ್ನು ಲಾಭದಾಯಕವನ್ನಾಗಿಸಲು ಬೇರೆಯವರು ಇರುತ್ತಾರೆ. ಇದೆಲ್ಲದಕ್ಕೂ ಸರ್ಕಾರ ಅಗತ್ಯ ಸಹಕಾರ, ಪ್ರೋತ್ಸಾಹ ನೀಡುತ್ತಲೇ ಇದೆ. ನೀಡುತ್ತಲೇ ಇರುತ್ತದೆ ಎಂದು ಭರವಸೆ ನೀಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೂ ಅವಕಾಶ ನೀಡಲಾಗಿದೆ. ಪ್ರತಿಭೆ ಮತ್ತು ಉದ್ಯೋಗ ಅವಕಾಶಕ್ಕೆ ಸದ್ಯಕ್ಕೆ ದೇಶದಲ್ಲಿ ಉತ್ತಮ ವಾತಾವರಣವಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ, ಹತ್ತು ಹಲವು ನವೋದ್ಯಮಕ್ಕೆ ಈಗಾಗಲೇ ಸರ್ಕಾರ ಸಹಾಯಕ್ಕೆ ಬಂದಿದೆ. ಇದಕ್ಕೆ ಐಐಟಿ ಧಾರವಾಡ ಕೂಡ ಸಾಥ್‌ ನೀಡಿದ್ದು, ವಿದ್ಯಾಥಿಗಳು ಸಾಕಷ್ಟು ಸಂಶೋಧನಾತ್ಮಕವಾಗಿ ಕೆಲಸ ಮಾಡಬೇಕಾಗಿದೆ ಎಂದರು.

ಬಿರಾಕ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಜೀತೇಂದ್ರ ಕುಮಾರ್, ದೇಶದಲ್ಲಿ 100 ಇನ್‌ಕ್ಯುಬೇಟರ್‌ ಸೆಂಟರ್‌ಗಳಿವೆ. ಇದೀಗ ಧಾರವಾಡ ಐಐಟಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವುದು 101ನೇ ಸೆಂಟರ್‌. ಹುಬ್ಬಳ್ಳಿ-ಧಾರವಾಡದಲ್ಲಿ 20ಕ್ಕೂ ಹೆಚ್ಚು ನವೋದ್ಯಮಗಳು ಆರಂಭಗೊಂಡಿವೆ. ಮೊದಲ ವರ್ಷವೇ ಒಂದೊಂದು ಕಂಪನಿಗಳು ₹ 5 ಕೋಟಿ ವ್ಯವಹಾರ ಮಾಡಿವೆ. 2047ಕ್ಕೆ ವಿಕಸಿತ ಭಾರತದ ಗುರಿ ಇಟ್ಟುಕೊಂಡು ಇಂತಹ ಯೋಜನೆ ಕೈಗೊಳ್ಳುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಐಐಟಿ ಧಾರವಾಡ ಉತ್ತಮ ಕೊಡುಗೆ ನೀಡಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು