ನ್ಯಾಯಾಲಯ ಆವರಣದಲ್ಲಿ 77 ನೇ ಗಣರಾಜ್ಯೋತ್ಸವ
ಜಗತ್ತಿಗೆ ಅಹಿಂಸೆ, ಶಾಂತಿ ಮಂತ್ರ ಪಠಿಸಿದ ದೇಶ ನಮ್ಮದು. ಇಲ್ಲಿ ಎಲ್ಲಾ ಧರ್ಮ, ಜಾತಿ. ಜನಾಂಗ, ವರ್ಗ ಸಂಸ್ಕೃತಿಯ ಜನರಿರುವ ನೆಲೆವೀಡು ಎಂದು ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಸ್.ಜೀತು ಹೇಳಿದರು.
ನ್ಯಾಯಾಲಯ ಆವರಣದಲ್ಲಿ 77 ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಭಾರತ ಸರ್ವಜನಾಂಗದ ಶಾಂತಿ ತೋಟ. ಜಗತ್ತಿನಲ್ಲಿಯೇ ವಿಭಿನ್ನ ಸಂಸ್ಕೃತಿ, ಪರಂಪರೆ ಹೊಂದಿದೆ. ಪ್ರತಿಯೊಬ್ಬರಿಗೂ ಅವರವರ ಧರ್ಮ, ಸಂಸ್ಕೃತಿ ಆಚರಿಸಿಸುವ ಸ್ವಾತಂತ್ರ್ಯ ನಮ್ಮ ಸಂವಿಧಾನ ನೀಡಿದೆ. ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯ ಸಮಾನತೆ ಹಕ್ಕನ್ನು ನೀಡಿದೆ ಎಂದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ಪರಮೊಚ್ಚ. ಸಂವಿಧಾನವೇ ಕಾನೂನಿನ ಮೂಲ. ದೇಶದ ಪ್ರತಿಯೊಬ್ಬ ನಾಗರಿಕ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು. ಈದೇಶದ ಕಾನೂನು ಸಂವಿಧಾನ ಪಾಲಿಸಬೇಕು. ಮೂಲಭೂತ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯ ಪಾಲಿಸಲು ಮರೆಯಬಾರದು.
ಜಗತ್ತಿನಲ್ಲೇ ಅತ್ಯಂತ ಬೃಹತ್ ಹಾಗೂ ಲಿಖಿತ ಸಂವಿಧಾನ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ. ಜಗತ್ತಿನ ಅನೇಕ ದೇಶಗಳು ಭಾರತದ ಸಂವಿಧಾನ ಪದ್ಧತಿ ಅನುಸರಿಸಿದೆ. ನಮ್ಮ ಸಂವಿಧಾನ ರಚನೆಗೆ ಡಾ.ಬಿ.ಆರ್.ಅಂಬೇಡ್ಕರ್,ಡಾ.ಬಾಬು ರಾಜೇಂದ್ರ ಪ್ರಸಾದ್ ಸೇರಿದಂತೆ ಅನೇಕ ಮಹನೀಯರು, ಕಾನೂನು ತಜ್ಞರು ಸತತ ಪರಿಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಅವರನ್ನು ಸದಾ ಸ್ಮರಿಸಬೇಕು. ಪ್ರತಿಯೊಬ್ಬರು ದೇಶಭಕ್ತಿ, ದೇಶಪ್ರೇಮ ಬೆಳೆಸಿಕೊಳ್ಳಬೇಕು.ನಮ್ಮ ದೇಶದ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.ಈ ಸಂದರ್ಭದಲ್ಲಿ ವಕೀಲರು, ನ್ಯಾಯಾಂಗ ಇಲಾಖೆಯ ಅಧಿಕಾರಿ, ನೌಕರ ವರ್ಗ,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
26 ಶ್ರೀ ಚಿತ್ರ 1-ಶೃಂಗೇರಿ ನ್ಯಾಯಾಲಯದ ಆವರಣದಲ್ಲಿ 77 ನೇ ಗಣರಾಜ್ಯೋತ್ಸವ ಅಂಗವಾಗಿ ನ್ಯಾ.ಆರ್.ಎಸ್. ಜೀತು ಧ್ವಜಾರೋಹಣ ನೆರವೇರಿಸಿ ಗಾಂಧಿಜಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.