ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ/ಮಂಗಳೂರು:
ಸಚಿವ ಜಮೀರ್ ಪುತ್ರ ಝೈದ್‌ಖಾನ್ ಅಭಿನಯದ ‘ಕಲ್ಟ್’ ಸಿನಿಮಾದ ಬ್ಯಾನರ್ ತೆರವುಗೊಳಿಸಿದ್ದಕ್ಕೆ ಆಕ್ರೋಶಗೊಂಡ ರಾಜೀವ್‌ಗೌಡ, ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾಗೌಡರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರಿಗೆ ಜೀವ ಬೆದರಿಕೆ ಹಾಕಿದ್ದ. ಈ ಸಂಬಂಧ ಅಮೃತಾಗೌಡ ಅವರು ರಾಜೀವ್ ಗೌಡ ವಿರುದ್ಧ ದೂರು ದಾಖಲಿಸಿದ್ದರು. ಅಂದಿನಿಂದ ತಲೆಮರೆಸಿಕೊಂಡಿದ್ದ ರಾಜೀವ್ ಗೌಡನನ್ನು ಕೇರಳದ ಮಲ್ಲಪುರಂನ ವಾಜಿಕಡೈ ಬಳಿ ಸೋಮವಾರ ಬಂಧಿಸಿದ್ದ ಚಿಕ್ಕಬಳ್ಳಾಪುರ ಪೊಲೀಸರು, ಮಂಗಳವಾರ ಶಿಡ್ಲಘಟ್ಟದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಶಿಡ್ಲಘಟ್ಟ ಜೆಎಂಎಫ್‌ಸಿ ಕೋರ್ಟ್‌ನ ಹೆಚ್ಚುವರಿ ಅಪರ ನ್ಯಾಯಾಧೀಶೆ ಸುಕನ್ಯಾ ಅವರು, ರಾಜೀವ್‌ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಜೊತೆಗೆ, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದರು. ರಾಜೀವ್‌ಗೌಡನನ್ನು ಚಿಂತಾಮಣಿಯ ಉಪ ಕಾರಾಗೃಹದಲ್ಲಿ ಇಡಲಾಗಿದೆ.ಈ ಮಧ್ಯೆ, ತಲೆಮರೆಸಿಕೊಂಡು ಓಡಾಡುತ್ತಿದ್ದ ವೇಳೆ ರಾಜೀವ್‌ಗೌಡಗೆ ಆಶ್ರಯ ನೀಡಿದ ಆರೋಪದಡಿ ಮಂಗಳೂರಿನ ಉದ್ಯಮಿ ಮೈಕಲ್ ಜೋಸೆಫ್ ರೇಗೋರನ್ನು ಮಂಗಳವಾರ ಬಂಧಿಸಿದ ಪೊಲೀಸರು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಶಿಡ್ಲಘಟ್ಟ ಜೆಎಂಎಫ್‌ಸಿ ಕೋರ್ಟ್‌ನ ಹೆಚ್ಚುವರಿ ಅಪರ ನ್ಯಾಯಾಧೀಶೆ ಸುಕನ್ಯಾ ಅವರು, ರೇಗೋಗೆ ಜಾಮೀನು ಮಂಜೂರು ಮಾಡಿದರು. ಕೇಸು ದಾಖಲಾದ ಬಳಿಕ ರಾಜೀವ್‌ಗೌಡ ಮಂಗಳೂರಿಗೆ ಆಗಮಿಸಿ, ಉದ್ಯಮಿ ಮೈಕಲ್ ಒಡೆತನದ ಪಚ್ಚನಾಡಿಯ ಫಾರ್ಮ್ ಹೌಸ್‌ನಲ್ಲಿ ಉಳಿದುಕೊಂಡಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಅಲ್ಲಿಂದ ಪೊಲೀಸರ ಕೈಗೆ ಸಿಗದಂತೆ ರಾಜೀವ್‌ಗೌಡನನ್ನು ತನ್ನ ಕಾರಿನಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ತಲುಪಿಸಿ, ಅಲ್ಲಿಂದ ಕೇರಳಕ್ಕೆ ಪರಾರಿಯಾಗಲು ಹಣ ಹಾಗೂ ಮೊಬೈಲ್ ನೀಡಿ, ರೈಲು ಹತ್ತಿಸಿರುವ ಆರೋಪ ಮೈಕಲ್ ಮೇಲಿದೆ.