ಭಾರತ ಜಗತ್ತಿನಲ್ಲಿ ವಿಶೇಷವಾಗಿ ಗುರುತಿಸಲ್ಪಡುವ ದೇಶ

KannadaprabhaNewsNetwork | Published : Oct 30, 2023 12:30 AM

ಸಾರಾಂಶ

ಭಾರತ ಜಗತ್ತಿನಲ್ಲಿ ವಿಶೇಷವಾಗಿ ಗುರುತಿಸಲ್ಪಡುವ ದೇಶವಾಗಿದೆ. ನಮ್ಮ ದೇಶದ ಯಾವುದಾದರೂ ಒಂದು ಮೂಲೆಯಲ್ಲೂ 360 ದಿನ ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ ಎಂದು ಉತ್ತರ ಕರ್ನಾಟಕ ಪ್ರಾಂತ ವ್ಯವಸ್ಥಾ ಪ್ರಮುಖ ಶ್ರೀನಿವಾಸ ನಾಡಿಗೇರ ಹೇಳಿದರು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಭಾರತ ಜಗತ್ತಿನಲ್ಲಿ ವಿಶೇಷವಾಗಿ ಗುರುತಿಸಲ್ಪಡುವ ದೇಶವಾಗಿದೆ. ನಮ್ಮ ದೇಶದ ಯಾವುದಾದರೂ ಒಂದು ಮೂಲೆಯಲ್ಲೂ 360 ದಿನ ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ ಎಂದು ಉತ್ತರ ಕರ್ನಾಟಕ ಪ್ರಾಂತ ವ್ಯವಸ್ಥಾ ಪ್ರಮುಖ ಶ್ರೀನಿವಾಸ ನಾಡಿಗೇರ ಹೇಳಿದರು.

ಇಲ್ಲಿನ ನಗರಸಭೆ ಕ್ರೀಡಾಂಗಣದಲ್ಲಿ ಭಾನುವಾರ ವಿಜಯದಶಮಿ ಅಂಗವಾಗಿ ಜರುಗಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನದ ನಂತರ ಏರ್ಪಡಿಸಲಾಗಿದ್ದ ಬೌದ್ಧಿಕ ಸಭೆಯಲ್ಲಿ ಮಾತನಾಡಿದರು. ಪರಸ್ಪರ ಬಾಂಧವ್ಯ ಗಟ್ಟಿಯಾಗಿ ನಮ್ಮ ಸಂಸ್ಕಾರ, ಸಂಪ್ರದಾಯ ಬೆಳೆಯಬೇಕು ಎಂಬ ಉದ್ದೇಶದಿಂದ ಹಬ್ಬ ಆಚರಣೆ ಮಾಡುತ್ತೇವೆ. ಅಧರ್ಮದ ಮೇಲೆ ಧರ್ಮದ ಜಯ ಹಾಗೂ ಜಗತ್ತು ಸುರಕ್ಷಿತ ಮತ್ತು ಸುಸಜ್ಜಿತವಾಗಿರಬೇಕು ಎಂಬುದು ವಿಜಯ ದಶಮಿ ಹಬ್ಬದ ಚಿಂತನೆಯಾಗಿದೆ. ವಿಜಯ ದಶಮಿ ನಿಮಿತ್ತ ನಾವು ಬನ್ನಿ ಕೊಟ್ಟು ಬಂಗಾರದಂಗ ಇರೋಣ ಎನ್ನುತ್ತಾರೆ. ಭಾರತ ಎಲ್ಲ ಸಮಯದಲ್ಲಿ ವೈಯಕ್ತಿಕ ಆಸೆ ಪಟ್ಟಿಲ್ಲ, ಬದಲಾಗಿ ಎಲ್ಲರ ಒಳಿತಿಗಾಗಿ ಯೋಚನೆ ಮಾಡಿದೆ. ವ್ಯಕ್ತಿಗತ ವಿಚಾರ ಮಾಡಿಲ್ಲ. ಬದಲಾಗಿ ಸಮಾಜದ ಬಗ್ಗೆ ವಿಚಾರ ಮಾಡುವಂತಹ ದೇಶ ಭಾರತವಾಗಿದೆ. ಮುತ್ತು ರತ್ನಗಳನ್ನು ಬೀದಿಯಲ್ಲಿ ಮಾರಾಟ ಮಾಡಿರುವಂತಹ ದೇಶ ನಮ್ಮದು ಎಂದರು.

ಕಂಬಳಿ ಮತ್ತು ಉಣ್ಣೆ ಸೊಸೈಟಿ ಮಾಜಿ ಅಧ್ಯಕ್ಷ ಲಿಂಗಪ್ಪಗೌಡ, ಸಂಘದ ಜಿಲ್ಲಾ ಸಂಚಾಲಕ ಈಶ್ವರ ಹಾವನೂರ, ಡಾ. ಬಸವರಾಜ ಕೇಲಗಾರ, ಕೆ. ಶಿವಲಿಂಗಪ್ಪ, ಗುರುರಾಜ ನಾಡಿಗೇರ, ಸಂಜೀವ ಶಿರಹಟ್ಟಿ, ಜಗದೀಶ ಕಾಕೋಳ, ಅಜಯ ಮಠದ ಮತ್ತಿತರರಿದ್ದರು.

Share this article