ಸರ್ವಧರ್ಮಗಳನ್ನು ಸಮಾನವಾಗಿ ಕಾಣುವ ಏಕೈಕ ರಾಷ್ಟ್ರ ಭಾರತ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ

KannadaprabhaNewsNetwork | Published : May 7, 2025 12:46 AM

ಸಾರಾಂಶ

ಗಣ್ಯರು ಸಮಾಧಿಯ ಮೇಲೆ ಹೂಗಳನ್ನು ಎರಚಿ, ಚಾದರ ಹೊದಿಸಿ ಪ್ರಾರ್ಥನೆ ಸಲ್ಲಿಸಿದರು. ಕವ್ವಾಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ವಿಜಯಪುರ

ಭಾರತ ಸರ್ವಧರ್ಮಗಳನ್ನೂ ಸಮಾನವಾಗಿ ಪ್ರೀತಿಸುವಂತಹ ವಿಶ್ವದಲ್ಲಿನ ಏಕೈಕ ರಾಷ್ಟ್ರ. ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ಖರು, ಪಾರಸೀಯರು, ಜೈನರು ಸಹೋದರರಂತೆ ಬದುಕುತ್ತಿದ್ದು, ಪರಸ್ಪರ ಉತ್ತಮವಾದ ಬಾಂಧವ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಹಜರತ್ ಸೈಯದನಾ ಜಂಗ್ಲಿ ಪೀರ್ ಬಾಬಾ ರಹಮತುಲ್ಲಾ ಅಲೈ ಅವರ ಸಂದಲ್(ಗಂಧ) ಮತ್ತು ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಿಂದೂ, ಮುಸಲ್ಮಾನರೆಂಬ ಬೇಧ, ಭಾವವಿಲ್ಲದೆ, ನಾವೆಲ್ಲರೂ ಭಾರತೀಯರು ಎನ್ನುವ ಮನೋಭಾವನೆಯನ್ನು ಇಟ್ಟುಕೊಂಡು ರಾಷ್ಟ್ರದ ಅಭಿವೃದ್ಧಿಗಾಗಿ ಜೊತೆಯಾಗಿ ಸಾಗಬೇಕು. ಎಲ್ಲಾ ಧರ್ಮಿಯರೂ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡಿಸಬೇಕು. ಮಕ್ಕಳು ಶಿಕ್ಷಣದಿಂದ ವಂಚಿತರಾದರೆ ಅವರು, ಸಮಾಜದಲ್ಲಿ ಏನನ್ನೂ ಸಾಧಿಸಲಾರರು.

ಗಂಧ- ಉರುಸ್‌ನಂತಹ ಕಾರ್ಯಕ್ರಮಗಳಲ್ಲಿ ಹಿಂದೂಗಳೂ ಭಾಗವಹಿಸಬೇಕು. ಹಿಂದೂಗಳು ಆಚರಣೆ ಮಾಡುವಂತಹ ಹಬ್ಬಗಳಲ್ಲಿ ಮುಸಲ್ಮಾನರೂ ಭಾಗವಹಿಸಬೇಕು. ಈ ಮೂಲಕ ಸಹೋದರತೆ ಮತ್ತಷ್ಟು ಬಲಿಷ್ಟವಾಗಲು ಸಾಧ್ಯವಾಗುತ್ತದೆ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ, ಮೌಲಾನಾ ಅಬುಲ್ ಕಲಾಂ ಆಜಾದ್ ಹಾಗೂ ಅಸಂಖ್ಯಾತ ದೇಶ ಭಕ್ತರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಮತ್ತು ಅನೇಕ ಜನರು ತಮ್ಮ ಜೀವನವನ್ನು ಜೈಲುಗಳಲ್ಲಿ ಕಳೆದಿದ್ದಾರೆ. ಅವರಲ್ಲಿದ್ದ ದೇಶ ಭಕ್ತಿ ನಮಗೆ ಆದರ್ಶವಾಗಬೇಕು ಎಂದರು.

ದೇವನಹಳ್ಳಿ ಅಭಿವೃದ್ಧಿಗೆ ಅನುದಾನ ಬಿಡುಗಡೆ:

ದೇವನಹಳ್ಳಿ ತಾಲೂಕಿನ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು, ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ರಸ್ತೆಗಳ ಅಭಿವೃದ್ಧಿ, ಶಾಲಾ ಕಟ್ಟಡಗಳ ನಿರ್ಮಾಣ, ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಸೇರಿದಂತೆ ಹಳ್ಳಿಗಳಲ್ಲಿ ಸಿ.ಸಿ.ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ವಿಜಯಪುರದ ಇತಿಹಾಸದಲ್ಲಿ ಹಿಂದೂ- ಮುಸ್ಲಿಮರೆಂಬ ಬೇಧ, ಭಾವ ಯಾರಲ್ಲೂ ಕಂಡು ಬಂದಿಲ್ಲ. ನಾವೆಲ್ಲರೂ ಸಹೋದರರು ಎನ್ನುವ ಭಾವನೆಯಿಂದ ಇಲ್ಲಿ ಬದುಕು ಕಟ್ಟಿಕೊಂಡಿದ್ದು, ಸಾಮರಸ್ಯ ಕಾಪಾಡುವುದಕ್ಕೆ ವಿಜಯಪುರ ಮಾದರಿಯಾಗಿದೆ. ಈಗಿನ ಯುವಕರೂ ಕೂಡಾ ಹಿಂದಿನ ಹಿರಿಯರ ಹಾದಿಯಲ್ಲಿ ಸಾಗಬೇಕು. ದುಶ್ಚಟಗಳಿಗೆ ಬಲಿಯಾಗಬಾರದು ಎಂದರು.

ಗಣ್ಯರು ಸಮಾಧಿಯ ಮೇಲೆ ಹೂಗಳನ್ನು ಎರಚಿ, ಚಾದರ ಹೊದಿಸಿ ಪ್ರಾರ್ಥನೆ ಸಲ್ಲಿಸಿದರು. ಕವ್ವಾಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ್, ಬೆಂಗಳೂರು ಜಿಲ್ಲಾ ಅಲ್ಪಸಂಖ್ಯಾತರ ಕಾಂಗ್ರೆಸ್ ಅಧ್ಯಕ್ಷ ಗೌಸ್ ಖಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ, ಪುರಸಭಾ ಸದಸ್ಯ ಎ.ಆರ್.ಹನೀಫುಲ್ಲಾ, ಸೈಯದ್ ಇಕ್ಬಾಲ್, ಮಂಜುನಾಥ್, ಆಸೀಫ್ ಹಾಗೂ ದರ್ಗಾ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಹಾಜರಿದ್ದರು.

Share this article