ಇಂಡಿಯಾ ಪ್ಯಾಡಲ್ ಫೆಸ್ಟಿವಲ್: ಆಂಟೋನಿಯೋ ಮೊರಿಲ್ಲೊ, ಎಸ್ಪೆರಾಂಜಾ ಬರೇರಾಸ್‌ಗೆ ಪ್ರಶಸ್ತಿ

KannadaprabhaNewsNetwork | Published : Mar 10, 2025 12:18 AM

ಸಾರಾಂಶ

ಪುರುಷ ವಿಭಾಗದಲ್ಲಿ ಆಂಟೋನಿಯೋ ಮೊರಿಲ್ಲೊ ಮತ್ತು ಮಹಿಳಾ ವಿಭಾಗದಲ್ಲಿ ಎಸ್ಪೆರಾಂಜಾ ಬರೇರಾಸ್ ಚಾಂಪಿಯನ್ ಶಿಪ್ ಆಗಿ ಹೊರಹೊಮ್ಮಿದರು. ಅಂಡರ್‌ 18 ವಿಭಾಗದಲ್ಲಿ ಸ್ಥಳೀಯ ಪ್ರತಿಭೆ ಆಕಾಶ್ ಪುಜಾರ್ ಚಾಂಪಿಯನ್ ಆಗಿ ಮಿಂಚಿದರೆ, ಶೇಖರ್ ಪಚ್ಚೈ 4ನೇ ಸ್ಥಾನ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದರು.

ಕನ್ನಡಪ್ರಭವಾರ್ತೆ ಮೂಲ್ಕಿ

ಸರ್ಫಿಂಗ್ ಸ್ವಾಮಿ ಫೌಂಡೇಶನ್ ಮತ್ತು ಮಂತ್ರಾ ಸರ್ಫ್ ಕ್ಲಬ್ ಆಯೋಜನೆಯಲ್ಲಿ ಡಬ್ಲ್ಯೂ ಆರ್‌ ಕೆ ಡಬ್ಲ್ಯೂ ಆರ್‌ ಕೆ ಸಹಯೋಗದಲ್ಲಿ ಇನ್‌ಕ್ರೆಡಿಬಲ್ ಇಂಡಿಯಾ ಮತ್ತು ಕರ್ನಾಟಕ ಟೂರಿಸಂ ಪ್ರಾಯೋಜಕತ್ವದಲ್ಲಿ ಸಸಿಹಿತ್ಲು ಬೀಚ್‌ ನಲ್ಲಿ ಜರಗಿದ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ 2025 ರ ಅಂತಾರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ ಸ್ಪರ್ಧೆಯಲ್ಲಿ ಡೆನ್ಮಾರ್ಕ್‌ನ ಕ್ರಿಸ್ಟಿಯನ್ ಆಂಡರ್ಸನ್ ಮತ್ತು ಸ್ಪೇನ್‌ನ ಎಸ್ಪೆರಾಂಜಾ ಬರೇರಾಸ್ ಎಪಿಪಿ ಪ್ರೋ ಸ್ಪ್ರಿಂಟ್ ಫೈನಲ್ಸ್‌ನಲ್ಲಿ ವಿಜಯಶಾಲಿಗಳಾಗಿದ್ದಾರೆ.

ಪುರುಷ ವಿಭಾಗದಲ್ಲಿ ಆಂಟೋನಿಯೋ ಮೊರಿಲ್ಲೊ ಮತ್ತು ಮಹಿಳಾ ವಿಭಾಗದಲ್ಲಿ ಎಸ್ಪೆರಾಂಜಾ ಬರೇರಾಸ್ ಚಾಂಪಿಯನ್ ಶಿಪ್ ಆಗಿ ಹೊರಹೊಮ್ಮಿದರು. ಅಂಡರ್‌ 18 ವಿಭಾಗದಲ್ಲಿ ಸ್ಥಳೀಯ ಪ್ರತಿಭೆ ಆಕಾಶ್ ಪುಜಾರ್ ಚಾಂಪಿಯನ್ ಆಗಿ ಮಿಂಚಿದರೆ, ಶೇಖರ್ ಪಚ್ಚೈ 4ನೇ ಸ್ಥಾನ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ಐಕಾನ್, ಮೂಲ್ಕಿಯ ಸುನೀಲ್ ಶೆಟ್ಟಿ ಭಾಗವಹಿಸಿ, ವಿಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುನಿಲ್ ಶೆಟ್ಟಿ ಸಸಿಹಿತ್ಲು ತೀರಾ ಸಣ್ಣದಾಗಿದ್ದರೂ, ಸುಂದರ ಹಾಗೂ ಅತ್ಯಂತ ಪವಿತ್ರ ಸ್ಥಳವಾಗಿದ್ದು, ಇಂತಹ ದೊಡ್ಡ ಮಟ್ಟದ ಈವೆಂಟ್ ನಡೆಸುವ ಸಾಮರ್ಥ್ಯವನ್ನ ಹೊಂದಿದೆ ಎಂದರು.ಎಪಿಪಿ ಪ್ರೋ ಸ್ಪ್ರಿಂಟ್ಸ್ ಪುರುಷರ ಫೈನಲ್‌ನಲ್ಲಿ, ಕ್ರಿಸ್ಟಿಯನ್ ಆಂಡರ್ಸನ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಸ್ಪೇನ್‌ನಆಂಟೋನಿಯೋ ಮೊರಿಲ್ಲೊ (ಎರಡನೇ ಸ್ಥಾನ) ಮತ್ತು ಹಂಗೇರಿ‌ನ ಡೇನಿಯಲ್ ಹಸುಲಿಯೋ (ಮೂರನೇ ಸ್ಥಾನ) ಸ್ಥಾನವನ್ನು ಪಡೆದರು.ಎಪಿಪಿ ಪ್ರೋ ಸ್ಪ್ರಿಂಟ್ಸ್ ಮಹಿಳಾ ಫೈನಲ್ ನಲ್ಲಿ, ಎಸ್ಪೆರಾಂಜಾ ಬರೇರಾಸ್ ಪ್ರಥಮ ಸ್ಥಾನ ಪಡೆದರೆ, ಕೊರಿಯಾದ ಸುಜಿಯೊಂಗ್ ಲಿಮ್ (ಎರಡನೇ ಸ್ಥಾನ) ಮತ್ತು ದಕ್ಷಿಣ ಆಫ್ರಿಕಾದ ಚಿಯಾರಾ ವೋರ್ಸ್ಟರ್ (ಮೂರನೇ ಸ್ಥಾನ) ಪಡೆದಿದ್ದಾರೆ.ಕಿರಿಯ ಪ್ಯಾಡ್ಲರ್‌ಗಳೂ ಕೂಡ ಶ್ರೇಷ್ಠ ಪ್ರದರ್ಶನ ನೀಡಿದರು.ಎಪಿಪಿ ಸ್ಪ್ರಿಂಟ್ಸ್ ಗ್ರಾಮ್ಸ್ (ಅಂಡರ್‌ 15) ಫೈನಲ್ ನಲ್ಲಿ ಪ್ರವೀಣ್ಪುಜಾರ್ ಪ್ರಥಮ ಸ್ಥಾನ,, ಅನೀಶ್ ಕುಮಾರ್ ಎರಡನೇ ಸ್ಥಾನ,ಮತ್ತು ಮುಹಮ್ಮದ್ ಇರ್ಫಾನ್ ಮೂರನೇ ಸ್ಥಾನ ಪಡೆದರು.ಅಂಡರ್‌ -18 ಬಾಲಕರ ವಿಭಾಗದಲ್ಲಿ, ತೈಲಾಂಡಿನ ಮಾರ್ಟಿನ್ ಜೆ ಪಟುಂಸುವಾನ್ ವೇಗದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಚಿನ್ನ ಗೆದ್ದರು. ಭಾರತದ ಆಕಾಶ್ ಪುಜಾರ್ ಮತ್ತು ರಾಜು ಪುಜಾರ್ ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಪಡೆದರು.. ಫೆಸ್ಟಿವಲ್ ನಲ್ಲಿ 4 ಕಿಮೀ ಸಮುದಾಯ ರೇಸ್ ಅನ್ನು ಆಯೋಜಿಸಿದ್ದು ರೇಸ್‌ನಲ್ಲಿ ಸಮಂತ್ ಪ್ರಥಮ ಸ್ಥಾನ ,, ಗೋಕುಲ್ ಎರಡನೇ, ಮತ್ತು ಮಧುಕರ್ ಮೂರನೇ ಸ್ಥಾನ ಪಡೆದರು.ಚಾಂಪಿಯನ್ ಶಿಪ್ ಪಟ್ಟ ಗಿಟ್ಟಿಸಿಕೊಂಡ ಆಂಟೋನಿಯೋ ಮೊರಿಲ್ಲೊ ಮತ್ತು ಎಸ್ಪೆರಾಂಜಾ ಬರೇರಾಸ್ಸ್ಪೇನ್‌ನ ಆಂಟೋನಿಯೋ ಮೊರಿಲ್ಲೊ ಒಟ್ಟಾರೆ ಪುರುಷರ ಚಾಂಪಿಯನ್ ಆಗಿ ಹೊರಹೊಮ್ಮಿದರು, 18,000 ಅಂಕಗಳೊಂದಿಗೆ ಗೆಲುವು ಸಾಧಿಸಿದರು. ಡೆನ್ಮಾರ್ಕ್‌ನ ಕ್ರಿಸ್ಟಿಯನ್ ಆಂಡರ್ಸನ್ (16,500 ಅಂಕ) ಎರಡನೇ ಸ್ಥಾನಕ್ಕೆ ಮತ್ತು ಹಂಗೇರಿಯ ಡೇನಿಯಲ್ ಹಸುಲಿಯೋ (14,500 ಅಂಕ) ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು

ಭಾರತದ ಶೇಖರ್ ಪಚ್ಚೈ ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟು 10,750 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿದರು. ಈ ಸಾಧನೆಯು ಭಾರತೀಯ ಎಸ್‌ ಯುಪಿ ಕ್ರೀಡಾಪಟುಗಳಿಗಾಗಿ ಪ್ರಮುಖ ಮೈಲಿಗಲ್ಲಾಗಿದ್ದು, ದೇಶದ ಪ್ಯಾಡ್ಲಿಂಗ್ ಕ್ರೀಡೆಯ ಬೆಳವಣಿಗೆಯಲ್ಲಿ ಮಹತ್ವದ ಘಟ್ಟವಾಗಿದೆ.

ಮಹಿಳಾ ವಿಭಾಗದಲ್ಲಿ, ಎಸ್ಪೆರಾಂಜಾ ಬರೇರಾಸ್ ಎಪಿಪಿ ಡಿಸ್ಟನ್ಸ್ ರೇಸ್ ಮತ್ತು ಸ್ಪ್ರಿಂಟ್ ರೇಸ್ ಎರಡನ್ನೂ ಗೆದ್ದು 20,000 ಅಂಕಗಳನ್ನು ಗಳಿಸಿದರು.ದಕ್ಷಿಣ ಆಫ್ರಿಕಾದ ಚಿಯಾರಾ ವೋರ್ಸ್ಟರ್ ಮತ್ತು ಕೊರಿಯಾದ ಸುಜಿಯೊಂಗ್ ಲಿಮ್ 14,500 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು.ಕಿರಿಯರ ವಿಭಾಗದಲ್ಲಿ, ಸ್ಥಳೀಯ ಪ್ರತಿಭೆ ಆಕಾಶ್ ಪುಜಾರ್ 16,000 ಅಂಕಗಳನ್ನು ಪಡೆದು ಅಂಡರ್‌ -18 ಚಾಂಪಿಯನ್ ಆಗಿ ಮಿಂಚಿದರು. ಇಂಡೋನೇಷಿಯಾದ ಕೀಫ್ ಅನಾರ್ಗ್ಯ ಪ್ರಣೋಟೋ ಎರಡನೇ ಸ್ಥಾನ , ತೈಲಾಂಡಿನ ಮಾರ್ಟಿನ್ ಜೆಪಟುಂಸುವಾನ್ ಮೂರನೇ ಸ್ಥಾನವನ್ನು ಪಡೆದರು.

Share this article