ಕಾರವಾರ: ನಗರದ ರವೀಂದ್ರನಾಥ ಟಾಗೋರ್ ಕಡಲ ತೀರದಲ್ಲಿರುವ ಯುದ್ಧ ನೌಕಾ ವಸ್ತು ಸಂಗ್ರಾಹಾಲಯದ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ವಿಜಯ ದಿವಸ ಕಾರ್ಯಕ್ರಮ ಸೋಮವಾರ ನಡೆಯಿತು.ಪರಮವೀರಚಕ್ರ ಪುರಸ್ಕೃತ ಮೇ. ರಾಮ ರಘಬಾ ರಾಣೆ ಅವರ ಪುತ್ಥಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ್, ಕದಂಬ ನೌಕಾನೆಲೆಯ ಸಬ್ ಮರೀನ್ ಕ್ಯಾ. ಎಸ್.ಆರ್. ಕೃಷ್ಣ, ಜಿಲ್ಲಾ ಸೈನಿಕ ಮಂಡಳಿಯ ಉಪಾಧ್ಯಕ್ಷ ನಿವೃತ್ತ ಸ್ವ್ಯಾಡ್ ಲೀಡರ್ ಎಸ್.ಎಫ್. ಗಾಂವಕರ, ಕರ್ನಲ್ ಎ.ಕೆ. ಮಿಶ್ರಾ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಪ್ರಭಾರ ಉಪನಿರ್ದೇಶಕ ಡಾ. ಕ್ಯಾ. ರಮೇಶ ರಾವ್, ಪೌರಾಯುಕ್ತ ಜಗದೀಶ ಹುಲಗಬ್ಬಿ ಪುಷ್ಪಗುಚ್ಛವಿರಿಸಿ ಗೌರವ ನಮನ ಸಲ್ಲಿಸಿದರು.ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, 1971ರ ಯುದ್ಧದಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ವಿಮೋಚನೆ ಮಾಡುವಲ್ಲಿ ಭಾರತೀಯ ಯೋಧರ ಕೊಡುಗೆ ಅಪಾರವಾಗಿದೆ. ಡಿ. 16ರಂದು ಪಾಕಿಸ್ತಾನದ ಲೆಫ್ಟಿನಂಟ್ ಜನರಲ್ ಶರಣಾಗತಿ ಪತ್ರಕ್ಕೆ ಸಹಿ ಮಾಡಿಕೊಟ್ಟ ದಿನವಾಗಿದ್ದು, ಈ ದಿನ ಎಲ್ಲರು ಹೆಮ್ಮೆಪಡುವ ದಿನವಾಗಿದೆ.
ರಾಷ್ಟ್ರದ ಗಡಿ ಪ್ರದೇಶದಲ್ಲಿ ಕ್ಲಿಷ್ಟಕರವಾದ ಸಂದರ್ಭದಲ್ಲೂ ದಿನದ 24 ಗಂಟೆ ದೇಶಸೇವೆ ಮಾಡುತ್ತಿರುವ ಯೋಧರ ತ್ಯಾಗ ಬಲಿದಾನದಿಂದ ನಾವೆಲ್ಲರೂ ಸಮೃದ್ಧ ಜೀವನ ನಡೆಸಲು ಸಾಧ್ಯವಾಗಿದೆ. ಅಂತಹ ವೀರಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸಬೇಕು ಹಾಗೂ ವೀರ ಸೇನಾನಿಗಳ ಕಷ್ಟಕ್ಕೆ ಎಲ್ಲರೂ ಸ್ಪಂದಿಸಬೇಕು ಎಂದರು.ಇದೇ ವೇಳೆ ಯುದ್ಧದಲ್ಲಿ ಹುತಾತ್ಮರಾದ ಯೋಧರ ಅವಲಂಬಿತರಿಗೆ ಮತ್ತು ಯುದ್ಧದಲ್ಲಿ ಪಾಲ್ಗೊಂಡಿದ್ದ ಮಾಜಿ ಯೋಧರಿಗೆ ಸನ್ಮಾನ ಮಾಡಲಾಯಿತು. ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮಾಡಲಾಯಿತು.ತಾಲೂಕಿನ ಅರಗಾದ ಐಎನ್ಎಸ್ ಕದಂಬ ನೌಕಾನೆಲೆಯ ಬ್ಯಾಂಡ್ ದೇಶಭಕ್ತಿಗೀತೆ ನುಡಿಸುವ ಮೂಲಕ ಗೌರವ ನಮನ ಸಲ್ಲಿಸಿದರು. ಮಾಜಿ ಸೈನಿಕರು, ಎನ್‌ಸಿಸಿ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಇದ್ದರು.