ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಚಿಂತನೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ 2047ಕ್ಕೆ ವಿಕಸಿತ ಭಾರತ ಆಗಬೇಕು ಎಂಬ ಕಲ್ಪನೆ ಹೊಂದಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಇಲ್ಲಿನ ಗೋಪಾಲಗೌಡ ಬಡಾವಣೆಯಲ್ಲಿರುವ ಶಿವಮೊಗ್ಗ ಬಂಟರ ಭವನದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಮೋದಿಯವರ ಮೊದಲ ಅವಧಿಯಲ್ಲಿ ಸರ್ಕಾರದ ಭ್ರಷ್ಟಾಚಾರ ಸರಿ ಮಾಡಲು ತೆಗೆದುಕೊಂಡಿತ್ತು. ಕೋವಿಡ್ ನಂತಹ ಸಂಕಷ್ಟ ಕಾಲ ನಾವು ಎದುರಿಸಿದ್ದೇವೆ. ಪ್ರಕೃತಿ ನೀಡಿದ ಆಮ್ಲಜನಕವಿದ್ದರು ಆಸ್ಪತ್ರೆಗಳಲ್ಲಿ ಕೃತಕ ಆಮ್ಲಜನಕವಿಲ್ಲದೆ ಮೃತಪಟ್ಟಿದ್ದು ಕಂಡಿದ್ದೇವೆ. ಆದರೆ, ತಾಯಿಯ ಸಾವಿನ ಸಂದರ್ಭದಲ್ಲಿ ಪ್ರಧಾನಿ ಸಾಮಾನ್ಯರಂತೆ ನಡೆದುಕೊಂಡಿದ್ದು ಅವರ ಸ್ವಭಾವ ತೋರಿಸುತ್ತದೆ ಎಂದರು.
ಪ್ರಜಾಪ್ರಭುತ್ವದ ಯುದ್ಧ ಘೋಷಣೆ:ಅಂಬೇಡ್ಕರ್ ಬದುಕಿದ್ದಾಗ ಚುನಾವಣೆಯಲ್ಲಿ ಸೋಲಿಸಿದರು, ದೆಹಲಿಯಲ್ಲಿ ಅವರಿಗೊಂದು ಸ್ಮಾರಕ ನಿರ್ಮಿಸಲು ಕಾಂಗ್ರೆಸ್‌ನವರು ಬಿಡಲಿಲ್ಲ ಎಂದು ಟೀಕಿಸಿದರು. ಈಗ ಪ್ರಜಾಪ್ರಭುತ್ವದ ಯುದ್ಧ ಘೋಷಣೆಯಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೆ ,ರಾಷ್ಟ್ರೀಯ ಹೆದ್ದಾರಿ, ವಿಮಾನಯಾನ ಎಲ್ಲಾ ಸೌಲಭ್ಯಗಳ ಒದಗಿಸಲಾಗಿದೆ. ಬೈಂದೂರ್‌ನಲ್ಲಿ 450 ರು. ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಈ ಬಾರಿ ನನ್ನನ್ನು ಬೆಂಬಲಿಸಿ. ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡಬೇಕಿದೆ ಎಂದು ಮನವಿ ಮಾಡಿದರು.
ಏ.18ರಂದು ನಾಮಪತ್ರ ಸಲ್ಲಿಸಿ:ಸಭೆಯಲ್ಲಿ ಬಿಜೆಪಿ ಮುಖಂಡ ಆರ್.ಕೆ.ಸಿದ್ರಾಮಣ್ಣ ಮಾತನಾಡಿ, ಚುನಾವಣೆ ಬಂದ ಸಂದರ್ಭದಲ್ಲಿ ಅಭಿಯಾನ ರೀತಿ ವಿವಿಧ ಸಮಾಜ ಮುಖಂಡರ ಭೇಟಿಯಾಗಿ ಅವರೊಂದಿಗೆ ಚರ್ಚಿಸುವ ಕೆಲಸ ನಿರಂತರ ಮಾಡಿಕೊಂಡು ಬರಲಾಗುತ್ತಿದೆ. ಚುನಾವಣೆಗೆ ಇನ್ನೂ 40-45 ದಿನ ಬಾಕಿ ಉಳಿದಿದೆ. ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಏ.18ರಂದು ನಾಮಪತ್ರ ಸಲ್ಲಿಸಬೇಕು ಎಂಬ ಯೋಜನೆ ಮಾಡಲಾಗುತ್ತಿದೆ ಎಂದರು.
ಸಭೆಯಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಮುಖಂಡರಾದ ಎಂ.ಬಿ.ಭಾನುಪ್ರಕಾಶ್, ಕೆ.ಜಿ.ಕುಮಾರಸ್ವಾಮಿ, ಕಡಿದಾಳ್ ಗೋಪಾಲ್ ಮತ್ತಿತರರಿದ್ದರು.