- ಹರಿಹರದಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಸಕ ಬಿ.ಪಿ. ಹರೀಶ್ । ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಗುರುಬಸವರಾಜ್
- - -ಕನ್ನಡಪ್ರಭ ವಾರ್ತೆ ಹರಿಹರ
ದೇಶದ ಸೈನ್ಯ ಅತ್ಯುತ್ತಮ ತಂತ್ರಜ್ಞಾನ ಬಳಸಿ, ವೈರಿರಾಷ್ಟ್ರ ಪಾಕಿಸ್ತಾನದ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿದೆ. ಈ ಪರಾಕ್ರಮದಿಂದ ಇಡೀ ಪ್ರಪಂಚವೇ ಭಾರತದ ಕಡೆ ತಿರುಗಿ ನೋಡುವಂತೆ ನಮ್ಮ ಸೇನೆ ಹೋರಾಡಿದೆ. ಇಂಥ ಸಾಧನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪರ, ದೇಶಪರ ಆಡಳಿತ ನೀತಿಯೇ ಕಾರಣ ಎಂದು ಶಾಸಕ ಬಿ.ಪಿ. ಹರೀಶ್ ಶ್ಲಾಘಿಸಿದರು.ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ ದಿನಾಚರಣೆ-2025 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶದ ಸೈನ್ಯ ಮಾನವೀಯತೆಯಿಂದ ಕೂಡಿದೆ. ಕೇವಲ ಉಗ್ರರು ಹಾಗೂ ಅವರ ಶಿಬಿರಗಳನ್ನು ಮಾತ್ರ ಧ್ವಂಸ ಮಾಡಲಾಗಿದೆ. ಅಲ್ಲಿನ ಜನಸಾಮಾನ್ಯರಿಗೆ ಯಾವುದೇ ಹಾನಿ ಮಾಡಿಲ್ಲ. ಬ್ರಹ್ಮೋಸ್ ಕ್ಷೀಪಣಿಯಂಥ ಅಸ್ತ್ರ ಬಳಸಿ ದೇಶಕ್ಕೆ ಯಾವುದೇ ಹಾನಿ ಆಗದಂತೆ ಕಾಪಾಡುವಲ್ಲಿ ಯಶಸ್ವಿಯಾಗಿದೆ. ಇಂಥ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ದಿಟ್ಟತನದ ನಿರ್ಧಾರ ಕಾರಣ ಎಂದು ತಿಳಿಸಿದರು.
ಒಂದು ಕಾಲದಲ್ಲಿ ಅಮೆರಿಕ ಹಾಗೂ ಇನ್ನಿತರ ದೇಶಗಳು ಕಾಲಿನಲ್ಲಿ ತೋರಿಸಿದ್ದನ್ನು ಮಾಡುವ ನಾಯಕರು ಭಾರತದಲ್ಲಿ ಇದ್ದರು. ಅಮೆರಿಕ ಅಧ್ಯಕ್ಷ ನಮ್ಮ ದೇಶದ ಮೇಲೆ ವಿವಿಧ ಟ್ಯಾಕ್ಸ್ ಹೇರಿ, ಆರ್ಥಿಕ ಕಿರುಕುಳ ನೀಡುವ ಮೂಲಕ ದೇಶ ಆರ್ಥಿಕ ದಿವಾಳಿ ಮಾಡಲು ಯತ್ನಿಸುತ್ತಿದ್ದಾರೆ. ಅನೇಕ ಬಾರಿ ಭಾರತ ಪಾಕ್ ಯುದ್ಧ ನಿಲ್ಲಿಸಿದ್ದು ತಾನೆ ಎಂದು ಹೇಳುತ್ತಿದ್ದಾರೆ. ಆದರೆ ಯುದ್ಧ ವಿರಾಮ ಘೋಷಣೆ ಮಾಡಲಾಗಿದೆಯೇ ಹೊರತು, ಯುದ್ಧ ಇನ್ನೂ ನಿಂತಿಲ್ಲ ಎಂದು ತಿರುಗೇಟು ನೀಡುವ ಮೂಲಕ ಭಾರತದ ನಿಲುವನ್ನು ಸ್ಪಷ್ಟವಾಗಿ ತಿಳಿಸಿದೆ ಎಂದ ಅವರು, ಪ್ರತಿಯೊಬ್ಬರೂ ದೇಶದ ಬಗ್ಗೆ ಆದರ, ಪ್ರಿತಿ, ಗೌರವ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್ ಧ್ವಜಾರೋಹಣ ನೆರವೇರಿಸಿ, ದೇಶಕ್ಕೆ ಸ್ವಾತಂತ್ರ್ಯ ಕೇವಲ ಒಬ್ಬಿಬ್ಬ ವ್ಯಕ್ತಿಗಳಿಂದ ಸಿಕ್ಕಿಲ್ಲ. ಅದಕ್ಕಾಗಿ ಹುತಾತ್ಮರಾದವರು 6.50 ಕೋಟಿಗೂ ಹೆಚ್ಚು ಜನರಿದ್ದಾರೆ. ಮಂಗಲ್ ಪಾಂಡೆ ಎಂಬ ದೇಶಭಕ್ತ ಅನಿವಾರ್ಯವಾಗಿ ಸೈನ್ಯಕ್ಕೆ ಸೇರಿ ಆಂಗ್ಲರ ನೀತಿ ವಿರೋಧಿಸಿ ದೇಶದ ಯೋಧರೊಂದಿಗೆ ಸೇರಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭಿಸಿದ್ದ. ಅದನ್ನು ಬ್ರಿಟಿಷರು ಸಿಪಾಯಿ ದಂಗೆ ಎಂದು ಕರೆದರು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನಿಸಲಾಯಿತು. ತಾ.ಪಂ. ಇಒ ಎಸ್.ಪಿ. ಸುಮಲತಾ, ಪೌರಾಯುಕ್ತ ಎಂ.ಪಿ. ನಾಗಣ್ಣ, ಅರಕ್ಷಕ ವೃತ್ತ ನಿರೀಕ್ಷಕ ಸುರೇಶ್ ಸಗರಿ, ಅರಕ್ಷಕ ನಿರೀಕ್ಷಕ ಆರ್.ಎಫ್. ದೇಸಾಯಿ, ಪಿಎಸ್‍ಐ ಶ್ರೀಪತಿ ಗಿನ್ನಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ದುರುಗಪ್ಪ, ನಗರಸಭೆ ಅಧ್ಯಕ್ಷ ಕವಿತಾ ಮಾರುತಿ ಬೇಡರ್ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.- - -
(ಬಾಕ್ಸ್) * ಮಳೆಯಿಂದಾಗಿ ಕೆಸರು ಗದ್ದೆಯಾಗಿದ್ದ ಕ್ರೀಡಾಂಗಣಹರಿಹರ ನಗರಾದ್ಯಂತ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಮಹತ್ಮಾ ಗಾಂಧಿ ಕ್ರೀಡಾಂಗಣ ಅಕ್ಷರಶಃ ಗದ್ದೆಯಂತಾಗಿತ್ತು. ಸ್ವಾತಂತ್ರ್ಯೋತ್ಸವಕ್ಕೆಂದು ಶಾಲಾ- ಕಾಲೇಜುಗಳಿಂದ ಬಂದ ವಿದ್ಯಾರ್ಥಿಗಳು ಸಂಚರಿಸುವುದೇ ದುಸ್ತರವಾಗಿತ್ತು. ಪಥ ಸಂಚಲನೆಯಲ್ಲಿ ಗೌರವ ರಕ್ಷೆ ಪಡೆಯಲು ಗಣ್ಯರಿಂದ ಕೆಲವು ಅಡಿಗಳಷ್ಟು ದೂರ ಮಾತ್ರ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಭಾರಿ ಕೆಸರಿನಿಂದಾಗಿ ಸುಮಾರು 80ರಿಂದ 100 ಅಡಿ ದೂರದ ಹುಲ್ಲಿನ ಮೇಲೆ ವಿದ್ಯಾರ್ಥಿಗಳು ಪಥ ಸಂಚಲನೆ ನಡೆಸಬೇಕಾಯಿತು. ಮಳೆಯಿಂದಾಗಿ ಎಲ್ಲರ ಪಾದರಕ್ಷೆಗಳು ಕೆಸರಿನಿಂದ ಕೆಂಪಗಾಗಿದ್ದವು. ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದ ಬಹುತೇಕರು ವಾಪಸ್ ತೆರಳಿದರೆ, ಕೆಲವರು ಆಯೋಜಕರನ್ನು ಶಪಿಸುತ್ತಾ ಕಾರ್ಯಕ್ರಮ ವೀಕ್ಷಿಸಿದರು.- - -
-15ಎಚ್‍ಆರ್‍ಆರ್01.ಜೆಪಿಜಿ:ಹರಿಹರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ ದಿನಾಚರಣೆ-2025 ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ. ಹರೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. -15ಎಚ್‍ಆರ್‍ಆರ್02ಎ.ಜೆಪಿಜಿ:
ಹರಿಹರ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ ದಿನಾಚರಣೆ-2025 ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಧ್ವಜಾರೋಹಣ ಮಾಡಿದರು. ಶಾಸಕ ಬಿ.ಪಿ. ಹರೀಶ್ ಉಪಸ್ಥಿತರಿದ್ದರು.