ಚಿತ್ರದುರ್ಗ : ಕ್ಯಾಷ್ ಲೆಸ್ ವಹಿವಾಟಿನಲ್ಲಿ ಭಾರತ ಇಡೀ ವಿಶ್ವದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ವಿಧಾನ ಪರಿಷತ್ತು ಸದಸ್ಯ ಕೆ.ಎಸ್.ನವೀನ್ ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದ ಕಾಮರ್ಸ್ ವಿಭಾಗ ಹಾಗೂ ಹೈದರಾಬಾದ್‌ನ ಭಾರತೀಯ ಸಮಾಜ ವಿಜ್ಞಾನ ಮಂಡಳಿ ವತಿಯಿಂದ ಗುಡ್ಡದರಂಗವ್ವನಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಹಿವಾಟು ನಡೆಸಲು ಇಂದು ಬ್ಯಾಂಕ್‌ಗೆ ಹೋಗಬೇಕಿಲ್ಲ. ತಂತ್ರಜ್ಞಾನದ ಫಲವಾಗಿ ಆರ್ಥಿಕ ವಹಿವಾಟು ಬೆರಳ ತುದಿಗೆ ಬಂದಿದೆ. ಮೊಬೈಲ್ ಇದ್ದರೆ ಸಾಕು ಯಾರು, ಎಲ್ಲಿಗಾದರೂ, ಎಷ್ಟಾದರೂ ಹಣ ಕಳಿಸಬಹುದು. ಇದು ಕ್ರಾಂತಿಕಾರ ಬದಲಾವಣೆ ಎಂದರು.
75 ವರ್ಷದ ಹಿಂದೆ ಭಾರತದ ಆರ್ಥಿಕ ಪರಿಸ್ಥಿತಿ ಭಯಾನಕವಾಗಿತ್ತು. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಬಡತನದಲ್ಲಿದ್ದ ಭಾರತದ ಮುಂದೆ ಅನೇಕ ಸವಾಲುಗಳಿದ್ದವು. ಆ ಎಲ್ಲ ಸವಾಲುಗಳ ಈಗ ಮೆಟ್ಟಿ ನಿಂತಿದ್ದರ ಪರಿಣಾಮ ಭಾರತ ಐದನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಇಂದಿನ ಪೀಳಿಗೆ ನಿಜಕ್ಕೂ ಅಮೃತಕಾಲದಲ್ಲಿದೆ ಎಂದರು.
ಹತ್ತು ವರ್ಷಗಳ ಹಿಂದಿನ ಆರ್ಥಿಕ ವಹಿವಾಟಿಗೂ ಈಗಿನದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. 2014ರಲ್ಲಿ ದೇಶದಲ್ಲಿ 120 ಕೋಟಿ ಜನಸಂಖ್ಯೆ ಇದ್ದರೂ ಕೇವಲ ₹17 ಕೋಟಿ ಜನ ಮಾತ್ರ ಬ್ಯಾಂಕ್ ಖಾತೆ ಹೊಂದಿದ್ದರು. ಈಗ ಜನ್‍ಧನ್ ಹಾಗೂ ತಂತ್ರಜ್ಞಾನದ ಪರಿಣಾಮ 50 ಕೋಟಿ ಖಾತೆಗಳಾಗಿವೆ. 33 ಕೋಟಿ ಜನ ಹೊಸದಾಗಿ ಬ್ಯಾಂಕ್ ಸಂಪರ್ಕಕ್ಕೆ ಬಂದಿದ್ದಾರೆ. ಸರ್ಕಾರದ ಸವಲತ್ತು ಪಡೆಯುತ್ತಿದ್ದಾರೆ ಎಂದರು.
ಹಣಕಾಸು ತಂತ್ರಜ್ಞಾನದಲ್ಲಿ ಮತ್ತಷ್ಟು ಸಂಶೋಧನೆಗಳಾಗುವ ಅಗತ್ಯವಿದೆ. ವಿದ್ಯಾರ್ಥಿಗಳು ಜಗತ್ತಿನ ವೇಗಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು. ಪಠ್ಯದ ಆಚೆಗಿನ ತೀವ್ರತರ ಬೆಳವಣಿಗೆಗಳತ್ತ ಕಣ್ಣಾಯಿಸಬೇಕು. ಪಠ್ಯಕ್ಕೆ ಸೀಮಿತರಾಗುವುದಕ್ಕಿಂತ ಹೊರಗಿನ ಜ್ಞಾನವ ರೂಢಿಸಿಕೊಳ್ಳುವ ಕಲಿಯಬೇಕು. ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ 9 ವಿಶ್ವವಿದ್ಯಾನಿಲಯಗಳಿಗೆ ಅನುದಾನ ಕೊಡದೇ ಮುಚ್ಚುವ ನಿರ್ಧಾರ ಮಾಡಿರುವುದು ದುರಂತದ ಸಂಗತಿ. ಶಿಕ್ಷಣ ಕ್ಷೇತ್ರ ಕಡೆಗಣಿಸುವ ನಿರ್ಣಯ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ನವೀನ್ ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಬಿ.ಡಿ. ಕುಂಬಾರ್ ಮಾತನಾಡಿ, ಹಣಕಾಸು ನಿರ್ವಹಣೆ ಬಹಳ ಮುಖ್ಯವಾದ ವಿಷಯ. ವಿದ್ಯಾರ್ಥಿಗಳು ಗ್ರಾಮಗಳಲ್ಲೂ ಅರಿವು ಮೂಡಿಸಬೇಕು. ಹಣಕಾಸು ತಂತ್ರಜ್ಞಾನದ ಬಗ್ಗೆ ಸದಾ ಎಚ್ಚರವಾಗಿದ್ದು, ಹೊಸತನ್ನು ಕಲಿಯಬೇಕು. ಭಾರತದ ಆರ್ಥಿಕತೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪಿ.ವಿ. ನರಸಿಂಹ ರಾವ್ ಅವರ ಕೊಡುಗೆ ಅಪಾರವಾದುದು ಎಂದರು.
ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ನಿರ್ದೇಶ್‍ಕುಮಾರ್ ಮಾತನಾಡಿ, ಹಣಕಾಸಿನ ವಿಚಾರದಲ್ಲಿ ತಂತ್ರಜ್ಞಾನ ಬದುಕನ್ನು ಎಷ್ಟು ಸರಳವಾಗಿಸಿದೆಯೋ, ಅಷ್ಟೇ ಸವಾಲುಗಳನ್ನು ಸೃಷ್ಟಿಸಿದೆ. ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್, ಹೂಡಿಕೆ ಸೇರಿದಂತೆ ಆಧುನಿಕ ತಂತ್ರಜ್ಞಾನ ಉಪಯೋಗಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಪಾವತಿ, ಸಾಲ ಹಾಗೂ ಠೇವಣಿಗಳ ವಿಚಾರದಲ್ಲಿ ಗಂಭೀರ ಗಮನ ಅಗತ್ಯವೆಂದರು.
ವಿಶ್ವವಿದ್ಯಾನಿಲಯ ನಡೆಸಿದ ಎಂ.ಕಾಂ. ಪರೀಕ್ಷೆಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿನಿಯರಾದ ಆರ್.ಮಧುರಾ, ನಾಗಮಣಿ, ಎಂ.ಪೂಜಾ ಹಾಗೂ ಪಿ.ಅಂಕಿತಾ ಅವರನ್ನು ಗೌರವಿಸಲಾಯಿತು. ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಸತ್ಯನಾರಾಯಣ, ದಾವಣಗೆರೆ ವಿ.ವಿ. ಕಾಮರ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಸುಪ್ರಿಯಾ, ಪ್ರೊ.ಲಕ್ಷ್ಮಣ ಇದ್ದರು.