ಮೋದಿ ನೇತೃತ್ವದಲ್ಲಿ ಸಾಂಸ್ಕೃತಿಕ ಪುನರುತ್ಥಾನದೆಡೆಗೆ ಭಾರತ: ಸೂರ್ಯ

KannadaprabhaNewsNetwork | Published : Apr 18, 2024 2:18 AM

ಸಾರಾಂಶ

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಆಯ್ಕೆಯಾದ ನಂತರ ಹಿಂದೂ ಪವಿತ್ರ ಸ್ಥಳಗಳ ಸಾಂಸ್ಕೃತಿಕ ಮಹತ್ವವನ್ನು ಸಂರಕ್ಷಿಸುವ ಮೂಲಕ ಭಾರತೀಯ ಪರಂಪರೆ, ಸಂಪ್ರದಾಯ, ಸಂಸ್ಕೃತಿ ರಕ್ಷಣೆಗೆ ಒತ್ತು ನೀಡಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಆಯ್ಕೆಯಾದ ನಂತರ ಕಳೆದ 10 ವರ್ಷದಲ್ಲಿ ದೇಶದ ಸಾಂಸ್ಕೃತಿಕ ಪುನರುತ್ಥಾನದ ಭಾಗವಾಗಿ ಅನೇಕ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಪವಿತ್ರ ಸ್ಥಳಗಳ ಸಾಂಸ್ಕೃತಿಕ ಮಹತ್ವವನ್ನು ಸಂರಕ್ಷಿಸುವ ಮೂಲಕ ಭಾರತೀಯ ಪರಂಪರೆ, ಸಂಪ್ರದಾಯ, ಸಂಸ್ಕೃತಿ ರಕ್ಷಣೆಗೆ ಒತ್ತು ನೀಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು.

ಶ್ರೀರಾಮ ನವಮಿ ಅಂಗವಾಗಿ ಬುಧವಾರ ಕ್ಷೇತ್ರದ ಹಲವೆಡೆ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಗೊಂಡ ನಂತರ ಮೊದಲ ಶ್ರೀರಾಮ ನವಮಿ ಆಚರಿಸಲಾಗುತ್ತಿದೆ. ಲಕ್ಷಾಂತರ ಭಕ್ತರು ಪ್ರತಿ ದಿನ ರಾಮಲಲ್ಲಾನ ಮೂರ್ತಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ದೇಶ-ವಿದೇಶಗಳಿಂದ ಪ್ರವಾಸಿಗರು ಅಯೋಧ್ಯೆಗೆ ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಕೇವಲ ಮೂರೇ ತಿಂಗಳಲ್ಲಿ ಪ್ರಮುಖ ಕ್ಷೇತ್ರವಾಗಿ ಬದಲಾಗಿದೆ. ಇದೆಲ್ಲದರ ಶ್ರೇಯಸ್ಸು ನರೇಂದ್ರ ಮೋದಿ ಸರ್ಕಾರಕ್ಕೆ ಸಲ್ಲಬೇಕು. ಅಯೋಧ್ಯೆ ಮಾತ್ರವಲ್ಲದೆ ಕಳೆದ 10 ವರ್ಷದಲ್ಲಿ ಭಾರತೀಯ ನಾಗರಿಕತೆಯ ಮೌಲ್ಯಗಳನ್ನು ಸಂರಕ್ಷಿಸಲು ಮತ್ತು ಮರು ಸ್ಥಾಪಿಸುವತ್ತ ಸರ್ಕಾರದಿಂದ ಅನೇಕ ಕಾರ್ಯಗಳು ನಡೆದಿವೆ. ಸರ್ಕಾರದ ಈ ಪ್ರಯತ್ನಗಳಿಂದ ಯುವಕರು ಸೇರಿದಂತೆ ಎಲ್ಲರೂ ಭಾರತದ ಅಂತ:ಸತ್ವದೆಡೆಗೆ ವಾಲುತ್ತಿದ್ದಾರೆ ಎಂದು ಬಣ್ಣಿಸಿದರು.- - -

ಮಹತ್ವ ಅರಿಯುವಲ್ಲಿ ಕಾಂಗ್ರೆಸ್‌ ವಿಫಲ

ದಶಕಗಳ ಕಾಲದ ಆಡಳಿತದಲ್ಲಿ ಧಾರ್ಮಿಕ ಕ್ಷೇತ್ರಗಳ ಮಹತ್ವ ಅರಿಯುವಲ್ಲಿ ಕಾಂಗ್ರೆಸ್‌ ವಿಫಲವಾದ್ದು, ಸಾಂಸ್ಕೃತಿಕ ಅಸ್ಮಿತೆಯನ್ನು ನಿರ್ಲಕ್ಷಿಸಿತ್ತು. 2014ರಲ್ಲಿ ವಾರಣಾಸಿಯಲ್ಲಿ ಗಂಗಾ ಆರತಿ ಮಾಡುವ ಮೂಲಕ ಸಾಂಸ್ಕತಿಕ ಪುನರುಜ್ಜೀವನದ ಪುಣ್ಯ ಕಾರ್ಯ ಆರಂಭಿಸಿದ ಮೋದಿ ಅವರು, ದೇಶದ ನಾಗರಿಕತೆಯ ಮೌಲ್ಯಗಳು ಮತ್ತು ಸಂಪ್ರದಾಯಗಳ ಪಾವಿತ್ರ್ಯತೆಯನ್ನು ಕಾಪಾಡುವುದರೊಂದಿಗೆ ದೇಶದ ಜನರನ್ನು ನಂಬಿಕೆಯೊಂದಿಗೆ ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪುಣ್ಯ ಕ್ಷೇತ್ರಗಳ ಅಭಿವೃದ್ಧಿಯಿಂದ ದೇವಾಲಯಗಳ ಆದಾಯದಲ್ಲಿ ಏರಿಕೆಯಾಗುತ್ತಿದ್ದು, ಉದ್ಯೋಗಾವಕಾಶಗಳೂ ಹೆಚ್ಚುತ್ತಿವೆ. ಮೋದಿ ಅವರ ಮುಂದಿನ ಅವಧಿಯಲ್ಲೂ ಮತ್ತಷ್ಟು ಪುಣ್ಯ ಕಾರ್ಯಗಳು ನಡೆದು ಅನೇಕ ಧಾರ್ಮಿಕ ಸ್ಥಳಗಳು ಪ್ರಮುಖ ಪ್ರವಾಸಿ ಕೇಂದ್ರಗಳಾಗುವುದು ನಿಶ್ಚಿತವಾಗಿದೆ ಎಂದರು.

Share this article