ವಿಶ್ವದ ಕಲ್ಯಾಣ ಬಯಸುವ ಭಾರತ: ಪ್ರಕಾಶ್ ಮಲ್ಪೆ

KannadaprabhaNewsNetwork |  
Published : Dec 14, 2024, 12:45 AM IST
ನರಸಿಂಹರಾಜಪುರ ತಾಲೂಕಿನ ಕುದುರೆಗುಂಡಿಯಲ್ಲಿ ನಡೆದ ದತ್ತ ಜಯಂತಿ, ಹಿಂದೂ ಸಂಗಮ ಹಾಗೂ ಶ್ರೀ ಕ್ಷೇತ್ರ ಕಪಿಲ ತೀರ್ಥ ದೀಪೋತ್ಸವ ಕಾರ್ಯಕ್ರಮದಲ್ಲಿ ಮಲ್ಪೆಯ ಪ್ರಕಾಶ್‌ ದಿಕ್ಸೂಚಿ ಭಾಷಣ ಮಾಡಿದರು.ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್‌ ಕುಮಾರ್ ಮತ್ತಿತರರು ಇದ್ದರು.  | Kannada Prabha

ಸಾರಾಂಶ

ನರಸಿಂಹರಾಜಪುರ, ಭಾರತ ಕೇವಲ ನಮ್ಮ ದೇಶದ ಕಲ್ಯಾಣ ಮಾತ್ರ ಬಯಸುವುದಿಲ್ಲ. ಇಡೀ ವಿಶ್ವದ ಕಲ್ಯಾಣ ಬಯಸುತ್ತದೆ ಎಂದು ಮಲ್ಪೆಯ ಪ್ರಖರ ವಾಗ್ಮಿ ಪ್ರಕಾಶ ಮಲ್ಪೆ ತಿಳಿಸಿದರು.

- ಕುದುರೆಗುಂಡಿಯಲ್ಲಿ ಸನಾತನ ಹಿಂದೂ ಸಮಾಜ ಪರಿಷತ್ ಆಶ್ರಯದಲ್ಲಿ ಹಿಂದೂ ಸಂಗಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಭಾರತ ಕೇವಲ ನಮ್ಮ ದೇಶದ ಕಲ್ಯಾಣ ಮಾತ್ರ ಬಯಸುವುದಿಲ್ಲ. ಇಡೀ ವಿಶ್ವದ ಕಲ್ಯಾಣ ಬಯಸುತ್ತದೆ ಎಂದು ಮಲ್ಪೆಯ ಪ್ರಖರ ವಾಗ್ಮಿ ಪ್ರಕಾಶ ಮಲ್ಪೆ ತಿಳಿಸಿದರು.

ಗುರುವಾರ ರಾತ್ರಿ ಕುದುರೆಗುಂಡಿಯಲ್ಲಿ ಹರಿಹರಪುರ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಕುದುರೆಗುಂಡಿ ಸನಾತನ ಹಿಂದೂ ಸಮಾಜ ಪರಿಷತ್‌ ನೇತ್ರತ್ವದಲ್ಲಿ ದತ್ತ ಜಯಂತಿ ಹಿನ್ನೆಲೆಯಲ್ಲಿ ನಡೆದ ಹಿಂದೂ ಸಂಗಮ ಹಾಗೂ ಶ್ರೀ ಕ್ಷೇತ್ರ ಕಪಿಲ ತೀರ್ಥದ ದೀಪೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಹಿಂದೂ ಧರ್ಮಕ್ಕೆ ಚ್ಯುತಿ ಬಂದಾಗ ಖಡ್ಗ ಹಿಡಿದು ಹೋರಾಟ ಮಾಡಲು ಹಿಂದೂಗಳಿಗೆ ಗೊತ್ತಿದೆ. ಅಮೆರಿಕಾದಿಂದ ಹಿಡಿದು ಶ್ರೀಲಂಕಾವರೆಗೆ ಇಡೀ ಪ್ರಪಂಚದ ಎಲ್ಲಾ ಕಡೆ ಹಿಂದೂ ದೇವಾಲಯ, ಹಿಂದೂ ಸಂಸ್ಕೃತಿ ನೆಲೆಸಿದೆ. ಜಪಾನ್‌ ನಲ್ಲೂ ಸಾವಿರಾರು ಹಿಂದೂ ಮಠ, ಮಂದಿರಗಳಿವೆ. ಜರ್ಮನರು ವೇದಗಳಿಗೆ ಭಾಷ್ಯ ಬರೆದಿದ್ದರು. ಅಮೆರಿಕ ದೇಶದಲ್ಲಿ ರೆಡ್‌ ಇಂಡಿಯನ್‌ ಎಂಬ ಹಿಂದೂ ಜನಾಂಗದವರು ಬಹಳ ವರ್ಷಗಳ ಹಿಂದೆ ವಾಸ ಮಾಡುತ್ತಿದ್ದರು. ಭಾರತಕ್ಕೆ ರಾಜಕೀಯ ಭೀತಿ ಎದುರಾಗಬಹುದು. ಆದರೆ, ಸನಾತನ ಧರ್ಮಕ್ಕೆ ಸಣ್ಣ ಚ್ಯುತಿಯೂ ಬರುವುದಿಲ್ಲ. ಹಿಂದೂ ಧರ್ಮಕ್ಕೆ ಸ್ವಲ್ಪ ಚ್ಯುತಿಯಾದರೂ ಇಡೀ ವಿಶ್ವವೇ ಭಾರತದ ಬೆಂಬಲಕ್ಕೆ ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೂನ್‌ 1 ರಂದು ವಿಶ್ವದ 160 ದೇಶಗಳಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ. ಡಿ.21 ರಂದು ವಿಶ್ವ ಧ್ಯಾನ ದಿನ ಆಚರಿಸಲು ಜಗತ್ತು ಒಪ್ಪಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್‌ ಕುಮಾರ್ ಮಾತನಾಡಿ, 12 ನೇ ಶತಮಾನದಿಂದ 17 ಶತಮಾನದವರೆಗೆ ಅಯೋಧ್ಯೆ, ಕಾಶಿ, ಮಥುರ ಕಳೆದುಕೊಂಡಿದ್ದೆವು. ಧರ್ಮಕ್ಕೆ ಚ್ಯುತಿ ಬಂದಾಗ ಅಧರ್ಮದ ವಿರುದ್ಧ ಹೋರಾಟ ಮಾಡಿ ಧರ್ಮಸ್ಥಾಪನೆಗಾಗಿ ಶ್ರೀ ಕೃಷ್ಣ ಸಹಾಯಕ್ಕೆ ಬರುತ್ತಾನೆ. ನಮ್ಮ ದೇಶ, ನಮ್ಮ ಧರ್ಮ ಉಳಿಸಲು ಕ್ರಿಯಾಶೀಲ ಯುವ ಶಕ್ತಿ ಎದ್ದೇಳಬೇಕಾಗಿದೆ. ಸಹಸ್ರ ಸಂಖ್ಯೆಯಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಹೋರಾಟ ಮಾಡಿದ್ದರಿಂದ ಅಯೋಧ್ಯೆಯನ್ನು ಉಳಿಸಿಕೊಳ್ಳಲು ಸಾದ್ಯವಾಯಿತು. ಹಿಂದೂ ಧರ್ಮಕ್ಕೆ ಅನ್ಯಾಯವಾದರೆ ದಿಕ್ಕಾರ ಕೂಗಿ ಹೋರಾಟ ಮಾಡಬೇಕು. ಆಗ ನಿಮ್ಮ ಸಹಾಯಕ್ಕೆ ಶ್ರೀ ಕೃಷ್ಣ ಬರಲಿದ್ದಾನೆ. ಪ್ರತಿಯೊಬ್ಬ ಹಿಂದೂ ಮನೆಯಲ್ಲೂ ಒಬ್ಬಬ್ಬ ಧರ್ಮ ಸಂರಕ್ಷರು ಹುಟ್ಟಿ ಬರಬೇಕು ಎಂದು ಕರೆ ನೀಡಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಸೀತೂರು ಯಕ್ಷಸಿರಿ ರಾಜ್ಯ ಪ್ರಶಸ್ತಿ ವಿಜೇತ ಅನಂತಪದ್ಮನಾಭ ರಾವ್‌ ಮಾತನಾಡಿ, ಭಾರತ ದೇಶದ ಇತಿಹಾಸದಲ್ಲಿ ದತ್ತ ಪೀಠದ ದತ್ತಾತ್ರೇಯ ಸ್ವಾಮಿ ಬಗ್ಗೆ ಸ್ಪಷ್ಟವಾಗಿ ಬರೆಯಲಾಗಿದೆ. ಭಾರತ ದೇಶದಲ್ಲಿ ವೇದ, ಉಪನಿಷತ್‌, ಪುರಾಣ, ಮಹಾ ಭಾರತ, ರಾಮಾಯಣ ಅನಾದಿ ಕಾಲದಿಂದಲೂ ಬಂದ ಹಿಂದೂ ಧರ್ಮವಾಗಿದೆ. ಬ್ರಿಟಿಷರು ಭಾರತಕ್ಕೆ ಬಂದು ನಮ್ಮ ಸಂಸ್ಕೃತಿ ನಾಶ ಮಾಡಿದರು. ಹಿಂದೂ ಎಂದರೆ ವಿಶ್ವಕ್ಕೇ ಗುರು ಸ್ಥಾನವಿದ್ದಂತೆ. ಹಿಂದೂಗಳು ಸಂಘಟನೆಯಾದರೆ ವಿಶ್ವವನ್ನೇ ಆಳಬಹುದು. ಭಾರತ ದೇಶದ ಎಲ್ಲಾ ಮಠಗಳು ಒಂದಾಗಬೇಕು. ಮನೆಯಲ್ಲಿ ಮಾತ್ರ ಸ್ವಧರ್ಮ ಆಚರಿಸಿ ಹೊರಗೆ ಬಂದಾಗ ಎಲ್ಲರೂ ಒಟ್ಟಾಗಿ ಹಿಂದೂ ಧರ್ಮ ಎನ್ನಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಲ್ಪೆ ಪ್ರಕಾಶ್‌, ಸೀತೂರು ಅನಂತಪದ್ಮನಾಭ ಹಾಗೂ ಕಡೇಗದ್ದೆ ಚಕ್ರಪಾಣಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಕಪಿಲೇಶ್ವರ ಸೇವಾ ಸಮಿತಿ ಅಧ್ಯಕ್ಷ ಕೆ.ಕೆ.ಶಿವರಾಜ್‌, ಹಿಂದೂ ಕಾರ್ಯಕರ್ತ ಪ್ರಮೋದ್‌ ಕಾಮತ್‌, ಸನಾತನ ಹಿಂದೂ ಸಮಾಜ ಪರಿಷತ್‌ ಜಿಲ್ಲಾ ಸಹ ಸಂಚಾಲಕ ಚೇತನ್‌ ಕುಮಾರ್, ಜಮೀನ್ದಾರ್ ಕಡೇಗದ್ದೆ ಚಕ್ರಪಾಣಿ ಉಪಸ್ಥಿತರಿದ್ದರು.

ರಂಗಿಣಿ ಪ್ರಾರ್ಥಿಸಿದರು. ಅರವಿಂದ ಸೋಮಯಾಜಿ ಮಾತನಾಡಿದರು. ಜನಾರ್ಧನ್ ಕಾರ್ಯಕ್ರಮ ನಿರೂಪಿಸಿದರು. ಎ.ಎಸ್‌.ವೆಂಕಟರಮಣ ವಂದಿಸಿದರು. ನಂತರ ಕುದುರೆಗುಂಡಿಯಿಂದ ಕಪಿಲಾ ತೀರ್ಥದವರೆಗೆ ಮೆರವಣಿಗೆ, ದೀಪೋತ್ಸವ ನಡೆಯಿತು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ