ಕನ್ನಡಪ್ರಭ ವಾರ್ತೆ ಧಾರವಾಡ
ಇಲ್ಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಶುಕ್ರವಾರ ಸೆಂಟ್ರಲ್ ಲರ್ನಿಂಗ್ ಥಿಯೇಟರ್, ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ ಹಾಗೂ ಮುಖ್ಯ ದ್ವಾರಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
2022ರಲ್ಲಿ ಭಾರತ ತನ್ನ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವುದರೊಂದಿಗೆ ದೇಶದಲ್ಲಿ ಅಮೃತಕಾಲ ಆರಂಭವಾಗಿದೆ. ಇನ್ಮುಂದೆ 2047ರ ಹೊತ್ತಿಗೆ ಭಾರತದಲ್ಲಿ ಗೌರವಕಾಲ ನಿರ್ಮಿಸುವ ಜವಾಬ್ದಾರಿ ಇಂದಿನ ಯುವ ಜನರ ಮೇಲಿದೆ ಎಂದರು.ಭಾರತ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕ್ವಾಂಟಂ ಕಂಪ್ಯೂಟಿಂಗ್‌ಗೆ ₹6 ಸಾವಿರ ಕೋಟಿ ಮತ್ತು ಗ್ರೀನ್ ಹೈಡ್ರೋಜನ್ ಮಿಶನ್‌ಗೆ ₹90 ಸಾವಿರ ಕೋಟಿ ಮೀಸಲು ಇಡಲಾಗಿದೆ. ದೇಶದ ಬೆನ್ನೆಲುಬಾಗಿರುವ ಯುವಕರು ತಮಗೆ ದೊರೆಯುವ ಎಲ್ಲ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ದೇಶದ ಗಮನಾರ್ಹ ಬೆಳವಣಿಗೆಯಲ್ಲಿ ಪಾಲುದಾರರಾಗಬೇಕು ಎಂದರು.
ಹಸರೀಕರಣಕ್ಕೆ ಒತ್ತು
ಆತ್ಮನಿರ್ಭರ ಭಾರತದ ಅಂಗವಾಗಿ ಸ್ವದೇಶ ಉತ್ಪಾದನೆಗೆ ಮಹತ್ವ ನೀಡಲಾಗುತ್ತಿದ್ದು, ಮೊದಲು ವಿದೇಶಗಳಿಂದ ಆಮದು ಮಾಡುತ್ತಿದ್ದ ರಕ್ಷಣಾ ಸಾಮಗ್ರಿಗಳನ್ನು ಭಾರತದಲ್ಲಿಯೇ ಉತ್ಪಾದಿಸಿ ಪರರಾಷ್ಟ್ರಗಳಿಗೆ ರಫ್ತು ಮಾಡುವ ಮಟ್ಟಕ್ಕೆ ದೇಶ ಆತ್ಮನಿರ್ಭರವಾಗುತ್ತಿದೆ. ಇದು ಗಮನಾರ್ಹ ಸಾಧನೆ ಎಂದು ಅವರು ಹೇಳಿದರು.
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಸುದೇಶ ಜಗದೀಪ ಧನಕರ್ ವೇದಿಕೆ ಮೇಲಿದ್ದರು. ಐಐಟಿ ನಿರ್ದೇಶಕ ಡಾ. ವೆಂಕಪ್ಪಯ್ಯ ಆರ್ ದೇಸಾಯಿ ಸ್ವಾಗತಿಸಿದರು.
ಇಲ್ಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಶುಕ್ರವಾರ ನೂತನ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಕ್ಷೀಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಪ್ರತಿದಿನವೂ ಒಂದೊಂದು ಔಚಿತ್ಯಪೂರ್ಣ ಬೆಳವಣಿಗೆಯನ್ನು ಕಾಣುತ್ತಿದೆ. ಇಡೀ ವಿಶ್ವ ಭಾರತದ ಕಡೆಗೆ ಬೆರಗಿನಿಂದ ನೋಡುತ್ತಿದೆ. ಇದನ್ನು ಸಹಿಸಲಾಗದೇ ಕೆಲವರು ದೇಶದ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.ಭಾರತ ಜಗತ್ತಿನಲ್ಲಿ 5ನೇ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿದ್ದು, ಕೆಲವೇ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ಏರಲಿದೆ. ದೇಶದ ಯುವಕರಿಗೆ ಭವ್ಯ ಭವಿಷ್ಯ ಕಾದಿದ್ದು ಪ್ರತಿಭಾವಂತರಿಗೆ ತಮ್ಮ ಪ್ರತಿಭೆಯನ್ನು ಸದುಪಯೋಗಪಡಿಸಿ ತಮ್ಮ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸಲು ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆ. ಆದ್ದರಿಂದ ದೇಶದ ಎಲ್ಲ ಪ್ರಜೆಗಳು ಅದರಲ್ಲೂ ಯುವ ಜನಾಂಗ ದೇಶಾಭಿಮಾನ ಬೆಳೆಸಿಕೊಂಡು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಬೇಕು. ಪ್ರತಿಯೊಬ್ಬರು ದೇಶದ ಬಗ್ಗೆ ಅಭಿಮಾನ ಹೊಂದಿರಬೇಕು ಎಂದು ಉಪರಾಷ್ಟ್ರಪತಿಗಳು ಹೇಳಿದರು.ದೇಶದಲ್ಲಿ ಆಗುತ್ತಿರುವ ಸಕಾರಾತ್ಮಕ ಬೆಳವಣಿಗೆಗಳು ದೇಶದ ಭಾಗ್ಯವನ್ನು ಬದಲಿಸುತ್ತಿದ್ದು, ವಿಶ್ವದ ಬಂಡವಾಳಗಾರರಿಗೆ ಬಂಡವಾಳ ಹೂಡಲು ಭಾರತ ಒಂದು ಅನುಕೂಲಕರ ತಾಣವಾಗಿದೆ ಎಂದು ನುಡಿದರು.