ಜಾಗತಿಕ ಮಟ್ಟದಲ್ಲಿ ಭಾರತೀಯ ಕಾಫಿಗೆ ಮನ್ನಣೆ: ಪ್ರಲ್ಹಾದ್ ಜೋಷಿ

KannadaprabhaNewsNetwork |  
Published : Dec 21, 2025, 02:15 AM IST
೨೦ಬಿಹೆಚ್‌ಆರ್ ೩: ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಉದ್ಘಾಟಿಸಿದರು. ಕೆ.ಜೆ.ಜಾರ್ಜ್, ಕೋಟಾ ಶ್ರೀನಿವಾಸಪೂಜಾರಿ, ಟಿ.ಡಿ.ರಾಜೇಗೌಡ, ಸಿ.ಟಿ.ರವಿ. ಎಚ್.ಡಿ.ತಮ್ಮಯ್ಯ, ಎಂ.ಕೆ.ಪ್ರಾಣೇಶ್, ಎಂ.ಜೆ.ದಿನೇಶ್ ಹಾಜರಿದ್ದರು. | Kannada Prabha

ಸಾರಾಂಶ

ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ

ಭಾರತೀಯ ಕಾಫಿಗೆ ವಿಶ್ವದಲ್ಲಿ ಬೇಡಿಕೆ । ಪ್ರಧಾನಿಗಳ ಆಶಯದಂತೆ 9 ಲಕ್ಷ ಟನ್ ಕಾಫಿ ಉತ್ಪಾದನೆ ನಮ್ಮ ಗುರಿ। ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ಭಾರತದ ಕಾಫಿ ಒಟ್ಟು ವಿಶ್ವದ ಉತ್ಪಾದನೆಯಲ್ಲಿ 7ನೇ ಸ್ಥಾನದಲ್ಲಿ, ರಫ್ತಿನಲ್ಲಿ 5ನೇ ಸ್ಥಾನದಲ್ಲಿದೆ. ನಮ್ಮ ಕಾಫಿಗೆ ಜಗತ್ತಿನಾದ್ಯಂತ ಬೇಡಿಕೆಯೂ ಇದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ನೂತನ, ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಷಿ ಹೇಳಿದರು.ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಆರಂಭವಾಗಿ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ಸಿಆರ್‌ಎಸ್‌ನಲ್ಲಿ ಆಯೋಜಿಸಿದ್ದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಫಿ ಉತ್ಪಾದನೆ, ಮಾರುಕಟ್ಟೆ ವಿಚಾರದಲ್ಲಿ ಪ್ರತಿಯೊಂದರಲ್ಲಿ ಗುಣಮಟ್ಟ ಅಗತ್ಯ. ಜಗತ್ತಿನಲ್ಲಿ ಜನ ಗುಣಮಟ್ಟ ಸ್ವೀಕರಿಸುತ್ತಾರೆ. ಈ ಬಗ್ಗೆ ಅಧ್ಯಯನ ಮಾಡಿ ಹೊಸ ಮಾರ ಕಟ್ಟೆ ವ್ಯವಸ್ಥೆ. ಸಂಶೋಧನೆ ಜೊತೆಗೆ ಗುಣಮಟ್ಟ ಹಾಗೂ ಮಾರುಕಟ್ಟೆ ಬೆಳವಣಿಗೆಗೂ ಆದ್ಯತೆ ನೀಡಬೇಕು.

ಕಾಫಿ ಸಂಶೋಧನಾ ಸಂಸ್ಥೆ ದೇಶದ ಅತ್ಯುನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿದೆ. ದೇಶದಲ್ಲಿ ಸುಮಾರು 4 ಲಕ್ಷ ಟನ್ ಕಾಫಿ ಉತ್ಪಾದನೆಯಾಗುತ್ತಿದ್ದು, ಶೇ.70 ಕಾಫಿಯನ್ನು ನಾವು ರಪ್ತು ಮಾಡುತ್ತಿದ್ದೇವೆ. ಶೇ.30 ಉತ್ಪನ್ನವನ್ನು ಭಾರತದಲ್ಲಿ ಬಳಕೆ ಮಾಡುತ್ತಿದ್ದೇವೆ. ಅನೇಕ ದೇಶಗಳು ತಾವಾಗಿಯೇ ಬಂದು ಭಾರತದ ಜೊತೆಗೆ ಪ್ರೀ ಟ್ರೇಡ್ ಅಗ್ರಿಮೆಂಟ್ ಮಾಡಿಕೊಳ್ಳುತ್ತಿವೆ. ಶುಕ್ರವಾರ ಕ್ಯಾಬಿನೆಟ್‌ನಲ್ಲಿ ಯುಕೆ ಜೊತೆಗೆ ಪ್ರೀ ಟ್ರೇಡ್ ಅಗ್ರಿಮೆಂಟ್ ಆಗಿದೆ. ಸಂಪೂರ್ಣ ಯುರೋಪಿ ಯನ್ ರಾಷ್ಟ್ರಗಳ ಜೊತೆ ಆಗಿದೆ ಎಂದರು.

ನಮ್ಮ ದೇಶದ ಚಿಕ್ಕಮಗಳೂರು ಕಾಫಿ, ಅರಕ್ಕು ಕಾಫಿಗಳಿಗೆ ಜಾಗತಿಕಮಟ್ಟದಲ್ಲಿ ದೊಡ್ಡ ಪ್ರಮಾಣದ ಬೇಡಿಕೆ ಬರುತ್ತಿದೆ. ಅದರ ಗುಣಮಟ್ಟ, ಬೆಳವಣಿಗೆ ಅಭಿವೃದ್ಧಿಪಡಿಸಬೇಕಿದೆ. ಅನೇಕ ಸಂಶೋಧನೆ ಮಾಡಿ, ಬರುವ ವರ್ಷದಲ್ಲಿ ಇದರ ನಾಲ್ಕು ಪಟ್ಟು ಅಂದರೆ 9 ಲಕ್ಷ ಟನ್‌ಗೆ ತೆಗೆದುಕೊಂಡು ಹೋಗಬೇಕು ಎಂದು ಕೇಂದ್ರಹಾಗೂ ಪ್ರಧಾನಮಂತ್ರಿ ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಂಶೋಧನಾ ಕೇಂದ್ರ ಪ್ರಮುಖ ಪಾತ್ರ ವಹಿಸಲಿದೆ. ಈ ಗುರಿ ಸಾಧನೆ ನಮ್ಮ ಆದ್ಯತೆಯಾಗಬೇಕಿದೆ ಎಂದರು.

ಉತ್ತಮ ಗುಣಮಟ್ಟದ ಕಾಫಿಯನ್ನು ರಾಸಾಯನಿಕಗಳನ್ನು ಕಡಿಮೆ ಮಾಡಿ ಬೆಳೆದಲ್ಲಿ ಜನರು ಹೆಚ್ಚು ಸ್ವೀಕರಿಸುತ್ತಾರೆ. ಕಾಫಿ ಬೆಳೆಯಲ್ಲಿ ನಮ್ಮ ಸ್ಕಿಲ್, ಸ್ಕೇಲ್ ಹಾಗೂ ಕ್ವಾಲಿಟಿ ಕಾಪಾಡಿಕೊಳ್ಳಬೇಕು. ಕಾಫಿಗೆ ಶೇ.18 ಇದ್ದ ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಸಲಾಗಿದೆ. ಜಿಎಸ್‌ಟಿ ಇಳಿಸಿದಾಗ ಕೆಲವರು ಟೀಟಿಸಿದ್ದರು. ಆದರೆ ಜಿಎಸ್‌ಟಿಗೂ ಮುನ್ನ ವಿವಿಧ ತೆರಿಗೆಗಳೂ ಸೇರಿ ಶೇ.35ರಷ್ಟು ತೆರಿಗೆ ಕಾಫಿಯ ಮೇಲೆ ಇತ್ತು. ಈ ಹಿನ್ನೆಲೆಯಲ್ಲಿ ಜಿಎಸ್‌ಟಿ ಜಾರಿ ಮಾಡುವಾಗ ಎಲ್ಲ ರಾಜ್ಯಗಳ ಜೊತೆಗೆ ಚರ್ಚಿಸಿ ಶೇ.೧೮ ನಿಗದಿ ಮಾಡಲಾಗಿತ್ತು. ಇದೀಗ ಎಲ್ಲಾ ಆಹಾರ ಉತ್ಪನ್ನಗಳ ಮೇಲೆ ಜಿಎಸ್‌ಟಿ ಶೇ.5ರಿಂದ ಶೇ.0ಗೆ ಇಳಿಸಲಾಗಿದೆ ಎಂದರು.

ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ದೇವವೃಂದ, ಸಿಇಒ ಡಾ.ಕೂರ್ಮಾರಾವ್, ಸಂಶೋಧನಾ ನಿರ್ದೇಶಕ ಡಾ.ಸೆಂಥಿಲ್‌ ಕುಮಾರ್, ಶಾಸಕ ಎಚ್.ಡಿ.ತಮ್ಮಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ವಾಣಿಜ್ಯ ಸಚಿವಾಲಯ ಕಾರ್ಯದರ್ಶಿ ಡಾ.ನಿತಿನ್ ಕುಮಾರ್ ಯಾದವ್, ಮಾಜಿ ಸಚಿವ ಡಿ.ಎನ್.ಜೀವರಾಜ್, ಬಿ.ಬಿ.ನಿಂಗಯ್ಯ, ಕಾಫಿ ಮಂಡಳಿ ಸದಸ್ಯರಾದ ಭಾಸ್ಕರ್ ವೆನಿಲ್ಲಾ, ಡಾ.ಮಹಾಬಲರಾವ್, ಎ.ಜಿ.ದಿವಿನ್‌ರಾಜ್, ಡಾ.ಕೃಷ್ಣಾನಂದ ಮತ್ತಿತರರಿದ್ದರು. -- (ಬಾಕ್ಸ್) --ವಿಶ್ವದಲ್ಲೇ ವೇಗವಾಗಿರುವ ಭಾರತದ ಆರ್ಥಿಕತೆ ವಿಶ್ವದಲ್ಲಿ ಅತ್ಯಂತ ವೇಗವಾಗಿ ಭಾರತದ ಆರ್ಥಿಕತೆ ಬೆಳೆಯುತ್ತಿದೆ. ಈ ಹಿಂದೆ ತೀರಾ ಕಡಿಮೆಯಿದ್ದ ಜಿಡಿಪಿ ಇಂದು ಶೇ.7.2 ಆಗಿ ಹೊರ ಹೊಮ್ಮಿದೆ. ಭಾರತದ ವಿವಿಧ ನೀತಿ ನಿಯಮಗಳ ಕಾರಣ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕ ಬೆಳವಣಿಗೆ ಯಾಗಿದೆ. ಜಗತ್ತಿನಲ್ಲಿ ಅತೀ ಹೆಚ್ಚು ಹಣ ಮೂಲಸೌಕರ್ಯಗಳಿಗೆ ಖರ್ಚು ಮಾಡುತ್ತಿರುವುದು ಭಾರತ ಮಾತ್ರ ಎಂದು ಸಚಿವ ಪ್ರಲ್ಹಾದ್ ಜೋಷಿ ಹೇಳಿದರು.ಭಾರತದಲ್ಲಿ ಈ ಹಿಂದೆ ₹12-13ಕ್ಕೆ ಖರೀದಿಸುತ್ತಿದ್ದ ವಿದ್ಯುತ್ ಬೆಲೆ ಇಂದು ₹2ಕ್ಕೆ ಇಳಿದಿದೆ. ಒನ್ ಗ್ರಿಡ್, ಒನ್ ನೇಶನ್ ಯೋಜನೆಯಡಿ ವಿವಿಧ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ವಿದ್ಯುತ್ ಶಕ್ತಿ ಸೂಕ್ತ ನಿರ್ವಹಣೆಯಿಂದ ರಿಯಾ ಯಿತಿ ದರದಲ್ಲಿ ಜನರಿಗೆ ವಿದ್ಯುತ್ ನೀಡಲು ಸಾಧ್ಯ. ದೇಶದಲ್ಲಿ ನಾವು ಅಧಿಕಾರಕ್ಕೆ ಬಂದ ನಂತರ ವಿವಿಧ 14 ಕ್ಷೇತ್ರಗಳ ಉತ್ಪಾದನೆ ಹೆಚ್ಚಿಸಲಾಗಿದೆ. ಈ ಹಿಂದೆ ಭಾರತದಲ್ಲಿ ಕೇವಲ 2 ಮೊಬೈಲ್ ಕಂಪೆನಿಗಳು ಉತ್ಪಾದನೆ ಮಾಡುತ್ತಿದ್ದವು. ಆದರೆ ಇಂದು ಭಾರತದಲ್ಲಿ ೩೦೦ಕ್ಕೂ ಅಧಿಕ ಕಂಪೆನಿಗಳು ಇವೆ. ರಾಜ್ಯದಲ್ಲಿ 3 ಸಾವಿರ ಕಿಮೀ ಹೆದ್ದಾರಿ ಅಭಿವೃದ್ಧಿಗೊಳಿಸಲಾಗಿದೆ. ಆತ್ಮನಿರ್ಭರ ಭಾರತ ಯೋಜನೆಯಡಿ ರಕ್ಷಣಾ ಕ್ಷೇತ್ರದಿಂದ ಹಿಡಿದು ಕಾಫಿ ಕ್ಷೇತ್ರದವರೆಗೂ ಒತ್ತು ನೀಡಲಾಗಿದೆ. ಕಾಫಿ ಬೆಳೆಗೆ ಸಂಬಂಧಿಸಿದಂತೆ, ಮಾನವ-ಪ್ರಾಣಿ ಸಂಘರ್ಷ ಹಾಗೂ ಅರಣ್ಯ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದಿಂದ ಯಾವುದೇ ಸಹಾಯ ಬೇಕಾದಲ್ಲಿ ರಾಜ್ಯ ಸರ್ಕಾರ ನಮ್ಮ ಬಳಿಗೆ ಬಂದರೆ ಅದಕ್ಕೆ ನಾನು ಸಂಪೂರ್ಣ ಸಹಕಾರ ನೀಡಿ ಕೈಜೋಡಿಸುತ್ತೇನೆ ಎಂದರು. -- (ಬಾಕ್ಸ್) --

ಮಾನವ-ಪ್ರಾಣಿ ಸಂಘರ್ಷ: ರಾಜ್ಯದಿಂದ ಪ್ರಸ್ತಾವನೆ ಅಗತ್ಯ

ಮಾನವ-ಪ್ರಾಣಿ ಸಂಘರ್ಷದ ಕುರಿತು ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಬಂದಲ್ಲಿ ಪಕ್ಷಾತೀತವಾಗಿ ಒಗ್ಗೂಡಿ ಈ ಸಮಸ್ಯೆ ಪರಿಹರಿಸಬಹುದು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.ಮಲೆನಾಡಲ್ಲಿ ಆನೆ ದಾಳಿ, ಕಾಡು ಕೋಣ ಹಾವಳಿ ಮುಂತಾದ ಗಂಭೀರ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಅಗತ್ಯ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ 25 ಎಕರೆ ವರೆಗಿನ ಒತ್ತುವರಿ ಕಾಫಿ ತೋಟವನ್ನು 50 ವರ್ಷ ಬೆಳೆಗಾರರಿಗೆ ಲೀಸ್‌ಗೆ ನೀಡುವ ಯೋಜನೆ ರೂಪಿಸಿದ್ದು, ಇದು ಪ್ರಸ್ತುತ ಯಾವ ಹಂತಕ್ಕೆ ಬಂದಿದೆ ಎಂಬುದು ತಿಳಿದಿಲ್ಲ. ಇದು ಶೀಘ್ರವಾಗಿ ಆದಲ್ಲಿ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.

ಜಿಲ್ಲೆಯಲ್ಲಿ 125 ಹೊಸ ಬಿಎಸ್‌ಎನ್‌ಎಲ್ ಟವರ್‌ಗಳು ಮಂಜೂರಾಗಿದ್ದು, ಇಂಧನ ಸಚಿವರು ಈ ಕಾರ್ಯಕ್ರಮದಿಂದ ತೆರಳುವ ಒಳಗೆ ಇವುಗಳಿಗೆ ವಿದ್ಯುತ್ ಮಂಜೂರಾತಿ ನೀಡಿದರೆ, ಕೂಡಲೇ ಎಲ್ಲಾ ಟವರ್‌ಗಳನ್ನು ಅಧಿಕೃತ ಚಾಲನೆ ಸಾಧ್ಯವಾಗಲಿದೆ ಎಂದು ಸಂಸದ ಶ್ರೀನಿವಾಸಪೂಜಾರಿ ಇಂಧನ ಸಚಿವ ಕೆ.ಜೆ.ಜಾರ್ಜ್ ಗಮನ ಸೆಳೆದರು.ಪಾರ್ಲಿಮೆಂಟಲ್ಲಿ ಕಾಫಿ ಪರಿಮಳ ಬಂದರೆ ಎಲ್ಲರೂ ಇದು ಚಿಕ್ಕಮಗಳೂರು ಕಾಫಿ ಎಂದು ಹೇಳುತ್ತಾರೆ. ಚಿಕ್ಕಮಗಳೂರು ಕಾಫಿಗೆ ಇಷ್ಟೊಂದು ಬೇಡಿಕೆಯಿದೆ. ಚಿಕ್ಕಮಗಳೂರು ಕರ್ನಾಟಕದ ಕಾಶ್ಮೀರವಾಗಿ ಪ್ರಸಿದ್ಧಿ ಪಡೆದಿದೆ ಎಂದು ಕೋಟಾ ಬಣ್ಣಿಸಿದರು.-- (ಬಾಕ್ಸ್) ---ಕರ್ನಾಟಕಕ್ಕೆ ಕಾಫಿ ಬೆಳೆಗಾರರ ಕೊಡುಗೆ ಅಪಾರ ಕಾಫಿ ಬೆಳೆಗಾರರನ್ನು ಕರ್ನಾಟಕ ಮರೆಯುವ ಹಾಗಿಲ್ಲ. ರಾಜ್ಯದ ಅಭಿವೃದ್ಧಿಯಲ್ಲಿ ಕಾಫಿ ಬೆಳೆಗಾರರ ಕೊಡುಗೆ ಅಪಾರ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.ಕಾಫಿ ಬೆಳೆಗಾರರು ಹವಾಮಾನ, ಕಾರ್ಮಿಕರ ಸಮಸ್ಯೆ ಸೇರಿದಂತೆ ಬೇರೆ ಬೇರೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಕಾಫಿ ಗಿಡಗಳಿಗೆ ಬೋರಾರ್ ಸಮಸ್ಯೆ ಅಧಿಕವಾಗಿದ್ದು, ಸಂಶೋಧನಾ ಕೇಂದ್ರ ಹೆಚ್ಚಾಗಿ ರೋಗ ರಹಿತ ಗಿಡಗಳನ್ನು ಬಿಡುಗಡೆ ಮಾಡ ಬೇಕಿದೆ. ರಾಸಾಯನಿಕ ಗೊಬ್ಬರ ಹೆಚ್ಚಿಗೆ ಉಪಯೋಗಿಸಿದಂತೆ ಮಣ್ಣಿನ ಶಕ್ತಿ ಕಳೆದುಕೊಳ್ಳುತ್ತಿದೆ. ಹಾಗಾಗಿ ರಾಸಾ ಯನಿಕ ಬಳಕೆ ಕಡಿಮೆ ಮಾಡಿ ಕಾಂಪೋಸ್ಟ್, ಸೆಗಣಿ ಗೊಬ್ಬರ ಬಳಕೆ ಮಾಡಿ ಮಣ್ಣಿನ ಶಕ್ತಿ ಹೆಚ್ಚಿಸಬೇಕಿದೆ. ರಾಜ್ಯದ ಕಾಫಿ ಕ್ಷೇತ್ರ ಬೆಳೆಯುವಲ್ಲಿ ಉದ್ಯಮಿ ದಿ. ಸಿದ್ಧಾಥ್ ಹೆಗ್ಡೆ ಕೊಡುಗೆ ಅಪಾರ. ಅವರನ್ನು ಸ್ಮರಿಸಬೇಕಿದೆ. ಕಾಫಿ ಅಭಿವೃದ್ಧಿ ವಿಚಾರದಲ್ಲಿ ನಾವು ಯಾವುದೇ ರಾಜಕೀಯ ಮಾಡಲ್ಲ. ಚುನಾವಣೆ ಬಂದಾಗ ಮಾತ್ರ ಭಾಷಣ ಮಾಡುತ್ತೇವೆ. ಅಭಿವೃದ್ಧಿಗೆ ಎಲ್ಲರ ಜೊತೆ ಕೈಜೋಡಿಸುತ್ತೇವೆ ಎಂದರು.ರಾಜ್ಯದಲ್ಲಿದ್ದ ಕುಸುಮ್ ಬಿ, ಸಿ ಯೋಜನೆಗಳು ರದ್ದಾಗಿದ್ದ ಬಗ್ಗೆ ಪ್ರಲ್ಹಾದ್ ಜೋಷಿ ಗಮನ ಸೆಳೆದಾಗ ಅವುಗಳನ್ನು ಪುನಃ ಆರಂಭಿಸಿ ದ್ದಾರೆ. ಬೆಳೆಗಾರರ ಜಮೀನುಗಳಿಗೆ 500 ಮೀ. ಒಳಗೆ ವಿದ್ಯುತ್ ಸಂಪರ್ಕ ನೀಡಲು 4.50 ಲಕ್ಷ ಅರ್ಜಿಗಳು ನಾವು ಅಧಿಕಾರಕ್ಕೆ ಬಂದಾಗ ಬಾಕಿಯಿತ್ತು. ಇದರಲ್ಲಿ 3.50 ಲಕ್ಷ ಅರ್ಜಿಗಳನ್ನು ವಿಲೇ ಮಾಡಲಾಗಿದೆ ಎಂದು ತಿಳಿಸಿದರು.-- (ಬಾಕ್ಸ್)-- ಸಮಸ್ಯೆ ನಿವಾರಣೆಯಾದರೆ ನಮ್ಮ ಗುರಿ ತಲುಪಲು ಸಾಧ್ಯ ಕಾಫಿ ಬೆಳೆಯಲ್ಲಿ ಮಾನವ-ಪ್ರಾಣಿ ಸಂಘರ್ಷ, ಹವಾಮಾನ ವೈಪರೀತ್ಯ, ಕಾರ್ಮಿಕರ ಸಮಸ್ಯೆಗಳಿದ್ದು, ಇವು ನಿವಾರಣೆ ಯಾದರೆ ಮಾತ್ರ ಕಾಫಿ ಬೆಳೆಯ ಸಾಧನೆ ಗುರಿ ತಲುಪಲು ಸಾಧ್ಯ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು. ಕಾಫಿ ಬೆಳೆಗೆ ಪ್ರಸ್ತುತ ಇರುವ ಬೆಲೆ ಹಾಗೆ ಕಾರ್ಮಿಕರ ಬೆಲೆಯೂ ಹೆಚ್ಚುತ್ತಿದೆ. ಇದಕ್ಕೆ ಯಾಂತ್ರೀಕೃತ ಕೃಷಿ ಅಗತ್ಯವಾಗಿ ಆಗಬೇಕಿದೆ. ಕಾರ್ಮಿಕರೊಂದಿಗೆ ಯಂತ್ರಗಳನ್ನು ಹೆಚ್ಚು ಬಳಸಲು ಪ್ರಯತ್ನಿಸಿದರೆ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಕಾಫಿ ಬೆಳೆ ಬೋರಾರ್ ರೋಗಕ್ಕೆ ಶಾಶ್ವತ ಪರಿಹಾರ ಇನ್ನೂ ಆಗಿಲ್ಲ. ಈ ಬಗ್ಗೆ ಸಂಶೋಧನಾ ಕೇಂದ್ರ ಹೆಚ್ಚು ಗಮನ ಹರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಕಾಫಿ ಬೆಳೆಗಾರರು ಹಲವರ ಬದುಕಿಗೆ ದಾರಿ. ದೇಶದ ಆರ್ಥಿಕ ಶಕ್ತಿಗೂ ದನಿ ಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಬೆಳೆಗಾರರ ಹಲವು ಬೇಡಿಕೆ ಈಡೇರಿಸಬೇಕು. ವಿವಿಧ ಸಬ್ಸಿಡಿ ಗಳನ್ನು ಬೆಳೆಗಾರರಿಗೆ ನೀಡಬೇಕು ಎಂದರು.-- (ಬಾಕ್ಸ್)--ಬಾಂಗ್ಲಾ ಕಾರ್ಮಿಕರ ಎಸ್‌ಐಆರ್ ಶೀಘ್ರವಾಗಲಿಕಾಫಿ ತೋಟಗಳಲ್ಲಿ ಕೂಲಿ ಕೆಲಸಕ್ಕಾಗಿ ಅಕ್ರಮವಾಗಿ ಬಂದ ಬಾಂಗ್ಲಾ ಕಾರ್ಮಿಕರ ಬಗ್ಗೆ ಶೀಘ್ರವೇ ಎಸ್‌ಐಆರ್ ಆಗಬೇಕಿದ್ದು, ಕೇಂದ್ರ, ರಾಜ್ಯ ಸರ್ಕಾರ ಕೂಡಲೇ ಈ ಕೆಲಸ ಮಾಡಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.ಕಾಫಿ ತೋಟಗಳಿಗೆ ಕೂಲಿ ಕೆಲಸಕ್ಕೆ ಬಾಂಗ್ಲಾ ಪ್ರಜೆಗಳು ಇಂದು ಸಾಕಷ್ಟು ಸಂಖ್ಯೆಯಲ್ಲಿ ಕಳ್ಳ ಮಾರ್ಗದಲ್ಲಿ ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಿಗೆ ಬಂದು ಇಲ್ಲಿನ ಪೌರತ್ವದ ದಾಖಲೆ ಮಾಡಿಸಿಕೊಂಡಿದ್ದಾರೆ.ಇದನ್ನು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ದೇಶಕ್ಕೆ ಮಾರಕವಾಗಲಿದೆ.ಇಲ್ಲಿಗೆ ಕೆಲಸಕ್ಕೆ ಅವರು ಬರುವುದಾದರೆ ಬರಲಿ. ಅವರಿಗೆ ವರ್ಕಿಂಗ್ ವೀಸಾ ನೀಡುವ ವ್ಯವಸ್ಥೆಯಾಗಬೇಕು. ಕಳ್ಳ ಮಾರ್ಗದಲ್ಲಿ ದೇಶಕ್ಕೆ ಬರುವುದು ಬೇಡ. ರಾಜ ಮಾರ್ಗದಲ್ಲೇ ಬಂದು ನ್ಯಾಯಯುತವಾಗಿ ಕೆಲಸ ಮಾಡಿ ವಾಪಾಸ್ ತೆರಳಲಿ ಎಂದರು.ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಂಡಿ ಬಿದ್ದ ರಸ್ತೆಗಳಿಂದ ಹಲವು ಸಮಸ್ಯೆಯಾಗುತ್ತಿದ್ದು, ರಾಜ್ಯ ಸರ್ಕಾರ ರಸ್ತೆ ದುರಸ್ತಗೆ ವಿಶೇಷ ಅನುದಾನ ನೀಡಬೇಕಿದೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಪೂರ್ಣ ಆಡಳಿತ ಪಕ್ಷದ ಶಾಸಕರೇ ಇದ್ದು, ವಿಶೇಷ ಪ್ಯಾಕೇಜ್ ತರುವಲ್ಲಿ ಶ್ರಮಿಸಬೇಕು. ಕೇವಲ ವಾರ್ಷಿಕ ಅನುದಾನಗಳಿಂದ ಈ ರಸ್ತೆಗಳನ್ನು ಸರಿಪಡಿಸಲು ಸಾಧ್ಯ ವಿಲ್ಲ. ಇದರೊಂದಿಗೆ ಇತರೆ ಬೆಳೆಗಳಿಗೆ 10 ಎಚ್‌ಪಿವರೆಗೆ ಉಚಿತ ವಿದ್ಯುತ್ ನೀಡಿದಂತೆ ಕಾಫಿ ಬೆಳೆಗೂ 10 ಎಚ್‌ಪಿ ವರೆಗೆ ಉಚಿತ ವಿದ್ಯುತ್ ನೀಡಬೇಕಿದೆ ಎಂದರು.(ಬಾಕ್ಸ್)

20 ಸಾವಿರ ಮೆಟ್ರಿಕ್ ಟನ್ ಬೆಳೆ ನಷ್ಟಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ 20 ಮೆಟ್ರಿಕ್ ಟನ್ ಕಾಫಿ ಬೆಳೆ ನಷ್ಟವಾಗಿದೆ. ಜತೆಗೆ ಪ್ರಸ್ತುತ ಕಾಫಿ ಬೆಲೆಯೂ ಕುಸಿತವಾಗುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಕಾಫಿ ಬೆಲೆ ಕಡಿಮೆಯಾಗುತ್ತಿರುವ ಕಾರಣ ಕೇಂದ್ರ ಸರ್ಕಾರ ಕಾಫಿ ರಫ್ತನ್ನು ಹೆಚ್ಚು ಮಾಡಿ, ಬೆಲೆ ಹೆಚ್ಚಳವಾಗುವಂತೆ ಮಾಡ ಬೇಕಿದೆ. ಅಡಕೆಗೆ ಹಳದಿ ಎಲೆ ರೋಗ, ಎಲೆಚುಕ್ಕಿ ರೋಗದಿಂದ ಸರ್ವ ನಾಶವಾದಂತೆ ಕಾಫಿಗೆ ಯಾವ ರೋಗಗಳು ಬರ ದಂತೆ ಎಚ್ಚರಿಕೆ ವಹಿಸಬೇಕಿದೆ. ರೋಗ ನಿರೋಧಕ ಗಿಡಗಳನ್ನು ಹೆಚ್ಚು ಬಿಡುಗಡೆ ಮಾಡಬೇಕಿದೆ. ಇದು ಬೆಳೆಗಾರರಿಗೆ ವರದಾನವಾಗಲಿದೆ ಎಂದರು.-- (ಬಾಕ್ಸ್)--ಸಿಸಿಆರ್‌ಐ ಸುರಕ್ಷಾ, ಶತಾಬ್ಧಿ ಹೊಸ ತಳಿ ಬಿಡುಗಡೆಸಂಶೋಧನಾ ಕೇಂದ್ರದ ಶತಮಾನೋತ್ಸವದ ಅಂಗವಾಗಿ ವಿಜ್ಞಾನಿಗಳು ನೂತನವಾಗಿ ಸಂಶೋಧಿಸಿರುವ ಹೊಸ ಎರಡು ಕಾಫಿ ತಳಿಗಳನ್ನು ಇದೇ ಸಂದರ್ಭದಲ್ಲಿ ಗಣ್ಯರು ಬಿಡುಗಡೆಗೊಳಿಸಿದರು. ನೂತನ ತಳಿಗಳಿಗೆ ಸಿಸಿಆರ್‌ಐ ಸುರಕ್ಷಾ, ಸಿಸಿಆರ್‌ಐ ಶತಾಬ್ಧಿ ಎಂದು ನಾಮಕರಣ ಮಾಡಲಾಗಿದೆ. ಕಾಫಿ ಸುಸ್ಥಿರತೆಗೆ ಮಾನದಂಡಗಳು ಕೈಪಿಡಿ, ವಿವಿಧ ಭಾಷೆಗಳಲ್ಲಿ ಕಾಫಿ ಕುರಿತು ರಚನೆಗೊಂಡ ಕಾಫಿ ಕೈಪಿಡಿ, ಸಂಶೋಧನಾ ಕೇಂದ್ರ ಹೊಸದಾಗಿ ಉತ್ಪಾದಿಸಿರುವ ಬಯೋಚಾರ್, ಟ್ರೈಕೋಡರ್ಮಾ, ಕಾಂಪೋಸ್ಟ್ ಸೇರಿದಂತೆ ವಿವಿಧ ಸಾವಯವ ಗೊಬ್ಬರ, ವಿವಿಧ ಕಾಫಿ ಪುಡಿಗಳು, ವಿವಿಧ ೮ ಹೊಸ ತಂತ್ರಜ್ಞಾನ, ಕಾಫಿ ನಾಟಿ ಮಾಡುವ ನೂತನ ಕಾಫಿ ಕ್ಯಾಪ್ಸೂಲ್‌ಗಳನ್ನು ಬಿಡುಗಡೆಗೊಳಿಸಲಾಯಿತು. ನೂತನವಾಗಿ ನಿರ್ಮಿಸಿರುವ ಕ್ವಾಲಿಟಿ ಕಾಫಿ ಪ್ರೊಸೆಸಿಂಗ್ ಕೇಂದ್ರವನ್ನು ಲೋಕಾರ್ಪಣೆಗೊಳಿಸಲಾಯಿತು.ಶತಮಾನೋತ್ಸವ ಅಂಗವಾಗಿ ಆಗಮಿಸಿದ ಸಾವಿರಾರು ಬೆಳೆಗಾರರು ಸಂಶೋಧನಾ ಪಟ್ಟೆಗಳಿಗೆ ತೆರಳಿ ವಿವಿಧ ರೀತಿ ಹೊಸ ಕಾಫಿ ಬೆಳೆ ಕುರಿತು ಮಾಹಿತಿ ಪಡೆದರು. ಸಂಶೋಧನಾ ಕೇಂದ್ರದ ಆವರಣದಲ್ಲಿ ತೆರೆದಿರುವ ನೂರಾರು ಮಳಿಗೆಗಳಲ್ಲಿ ಯಂತ್ರೋಪಕರಣ, ವಿವಿಧ ಕಾಫಿ ಉತ್ಪನ್ನ, ಸಾವಯವ ಗೊಬ್ಬರ ಮುಂತಾದವನ್ನು ವೀಕ್ಷಿಸಿ ಮಾಹಿತಿ ಪಡೆದರು.೨೦ಬಿಹೆಚ್‌ಆರ್ ೩:

ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಉದ್ಘಾಟಿಸಿದರು. ಕೆ.ಜೆ.ಜಾರ್ಜ್, ಕೋಟಾ ಶ್ರೀನಿವಾಸಪೂಜಾರಿ, ಟಿ.ಡಿ.ರಾಜೇಗೌಡ, ಸಿ.ಟಿ.ರವಿ. ಎಚ್.ಡಿ.ತಮ್ಮಯ್ಯ, ಎಂ.ಕೆ.ಪ್ರಾಣೇಶ್, ಎಂ.ಜೆ.ದಿನೇಶ್ ಹಾಜರಿದ್ದರು.೨೦ಬಿಹೆಚ್‌ಆರ್ ೪:

ಶತಮಾನೋತ್ಸವದ ಅಂಗವಾಗಿ ಸಂಶೋಧನಾ ಕೇಂದ್ರ ಸಂಶೋಧಿಸಿರುವ ಹೊಸ ಕಾಫಿ ತಳಿಗಳಾದ ಸಿಸಿಆರ್‌ಐ ಸುರಕ್ಷಾ, ಸಿಸಿಆರ್‌ಐ ಶತಾಬ್ಧಿ ಗಿಡಗಳನ್ನು ಸಚಿವರು, ಗಣ್ಯರು ಬಿಡುಗಡೆಗೊಳಿಸಿದರು.೨೦ಬಿಹೆಚ್‌ಆರ್ ೫:

ನೂತನವಾಗಿ ನಿರ್ಮಿಸಿರುವ ಕ್ವಾಲಿಟಿ ಕಾಫಿ ಪ್ರೊಸೆಸಿಂಗ್ ಕೇಂದ್ರ ಲೋಕಾರ್ಪಣೆಗೊಳಿಸಲಾಯಿತು.೨೦ಬಿಹೆಚ್‌ಆರ್ ೬:

ಸಮಾರಂಭದಲ್ಲಿ ಭಾಗವಹಿಸಿರುವ ವಿವಿಧೆಡೆಯ ಕಾಫಿ ಬೆಳೆಗಾರರರು.೨೦ಬಿಹೆಚ್‌ಆರ್ ೭:

ನೂತನವಾಗಿ ಬಿಡುಗಡೆಗೊಂಡ ಕಾಫಿ ಕ್ಯಾಪ್ಸೂಲ್‌ಗಳು. ೨೦ಬಿಹೆಚ್‌ಆರ್ ೮:

ವಿವಿಧ ಕಾಫಿ ತಳಿಗಳ ಕುರಿತು ವಿಜ್ಞಾನಿಗಳಿಂದ ಬೆಳೆಗಾರರಿಗೆ ಮಾಹಿತಿ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''