ಸರ್ಕಾರಿ ನೌಕರರು ಸಾರ್ವಜನಿಕರಿಗೆ ನ್ಯಾಯಯುತ ಸೇವೆ ಒದಗಿಸಿ: ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ

KannadaprabhaNewsNetwork |  
Published : Dec 21, 2025, 02:15 AM IST
ಕೆ ಕೆ ಪಿ ಸುದ್ದಿ 01:ಉಪಲೋಕಾಯುಕ್ತ ಪಣೀಂದ್ರ ರವರಿಂದ ನಗರದ ಅಂಬೇಡ್ಕರ್ ಭವನದಲ್ಲಿ ಸಭೆ. .  | Kannada Prabha

ಸಾರಾಂಶ

ಸಾರ್ವಜನಿಕ ದೂರು ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಪರಿಹಾರವಾಗುವಂಥ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ, ಕಾನೂನಾತ್ಮಕವಾಗಿ, ಪ್ರಾಮಾಣಿಕವಾಗಿ ಪ್ರಕರಣ ಗಳನ್ನು ಪರಿಹರಿಸಿಕೊಡುವಂತೆ ನಿರ್ದೇಶನ ನೀಡಲಾಗಿದೆ, ಅದರಂತೆ ಒಂದೊಂದೇ ಪ್ರಕರಣಗಳನ್ನು ಗುರುತಿಸಿ ಅವುಗಳನ್ನು ತೀರ್ಮಾನಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಕನಕಪುರ

ಸರ್ಕಾರದ ಕೆಲಸ ದೇವರ ಕೆಲಸ, ಸರ್ಕಾರಿ ನೌಕರರು ದೇವರ ಪ್ರತಿನಿಧಿಗಳಿದ್ದಂತೆ. ಸಾರ್ವಜನಿಕ ಸೇವೆ ಯಲ್ಲಿರುವ ನೌಕರರು ಕಾನೂನಿನ ಸೇವಕರು, ಆ ಸೇವಾ ಮನೋಭಾವವನ್ನಿಟ್ಟುಕೊಂಡು ಸರ್ಕಾರಗಳು ರೂಪಿಸುವ ಅಭಿವೃದ್ಧಿ ಕಾರ್ಯಗಳನ್ನು ಎಲ್ಲರಿಗೂ ಒದಗಿಸುವ ಮೂಲಕ ಸರ್ವರಿಗೂ ಸಮಪಾಲು, ಸಮ ಬಾಳು ಕಲ್ಪಿಸುವ ಆಶಯದತ್ತ ಮುನ್ನಡೆಯಬೇಕು ಎಂದು ರಾಜ್ಯದ ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಕಿವಿಮಾತು ಹೇಳಿದರು.

ಕನಕಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ಕನಕಪುರ ತಾಲೂಕಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಪ್ರಕರಣಗಳ ವಿಚಾರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶ ಹಾಗೂ ರಾಜ್ಯಗಳ ಅಭಿವೃದ್ಧಿಗೆ ಸರ್ಕಾರಗಳು ರೂಪಿಸುವ ಕಾನೂನುಗಳು, ಯೋಜನೆಗಳನ್ನು ಸರ್ಕಾರಿ ನೌಕರರು ಸೇವಾ ಮನೋಭಾವದಿಂದ ಮಾಡದೇ ಹೋದರೆ ಸಮಾಜದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ, ಲಂಚ, ಸ್ವಜನಪಕ್ಷಪಾತಕ್ಕೆ ಆಸೆ ಪಟ್ಟು ಅಭಿವೃದ್ಧಿ ಕಾರ್ಯ ಗಳಿಗೆ ಅಡ್ಡಿ ಉಂಟುಮಾಡಬಾರದು, ಭ್ರಷ್ಟಾಚಾರ ಎನ್ನುವುದು ಕ್ಯಾನ್ಸರ್ ರೀತಿ, ಕ್ಯಾನ್ಸರ್ ಸೆಲ್ ಗಳು ದೇಹದೊಳಗೆ ಸೇರಿ ದ್ವಿಗುಣಗೊಳ್ಳುತ್ತವೆ. ಅದೇ ರೀತಿ ಭ್ರಷ್ಟಾಚಾರವೂ ಸಮಾಜದೊಳಗೆ ಸೇರುತ್ತಾ ಹೋದರೆ ಸಮಾಜ ದುರ್ಬಲಗೊಳ್ಳುತ್ತದೆ, ಇವು ಸರ್ಕಾರದ ಸದುದ್ದೇಶಗಳನ್ನು ಹಾಳುಗೆಡವುತ್ತವೆ ಎಂದು ತಿಳಿಸಿದರು.

1984ರಲ್ಲಿ ಲೋಕಾಯುಕ್ತ ಸಂಸ್ಥೆ ಪ್ರಾರಂಭವಾಯಿತು, ಇದು ಸರ್ಕಾರಿ ನೌಕರರಲ್ಲಿನ ದೋಷ, ಕರ್ತವ್ಯ ಲೋಪ, ಕಾನೂನುಬಾಹಿರ ಕೆಲಸಗಳು ಕಂಡು ಬಂದರೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತಿದೆ, ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಪ್ರದತ್ತವಾಗಿರುವ ಹಕ್ಕು ಬಾಧ್ಯತೆಗಳನ್ನು ಸರಿಯಾದ ರೀತಿಯಲ್ಲಿ ಒದಗಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಸಾರ್ವಜನಿಕ ದೂರು ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಪರಿಹಾರವಾಗುವಂಥ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ, ಕಾನೂನಾತ್ಮಕವಾಗಿ, ಪ್ರಾಮಾಣಿಕವಾಗಿ ಪ್ರಕರಣ ಗಳನ್ನು ಪರಿಹರಿಸಿಕೊಡುವಂತೆ ನಿರ್ದೇಶನ ನೀಡಲಾಗಿದೆ, ಅದರಂತೆ ಒಂದೊಂದೇ ಪ್ರಕರಣಗಳನ್ನು ಗುರುತಿಸಿ ಅವುಗಳನ್ನು ತೀರ್ಮಾನಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಸಾರ್ವಜನಿಕರು ಹಾಗೂ ಸರ್ಕಾರಿ ಅಧಿಕಾರಿಗಳು ಶಾಂತರೀತಿಯಲ್ಲಿ ವರ್ತಿಸಬೇಕು. ಸಮಸ್ಯೆಗಳಿಗೆ ಹೆಚ್ಚು ಒತ್ತು ನೀಡಲಾಗುವುದು. ಸ್ಥಳದಲ್ಲಿಯೇ ಪರಿಹಾರವಾಗುವ ಸಮಸ್ಯೆಗಳನ್ನುಬಗೆಹರಿಸಿ ಉಳಿದವುಗಳನ್ನು ಲೋಕಾಯುಕ್ತ ಕೇಂದ್ರ ಕಚೇರಿಗೆ ವರ್ಗಾಯಿಸಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದರು.

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್‌ಜೈನ್, ಸಿವಿಲ್ ನ್ಯಾಯಧೀಶರು ಹಾಗೂ ಉಪ ಲೋಕಾಯುಕ್ತರ ವಿಶೇಷ ಕರ್ತವ್ಯಾಧಿಕಾರಿ ಕಿರಣ್ ಪಾಟೀಲ್, ಬೆಂಗಳೂರು ದಕ್ಷಿಣ ಜಿಲ್ಲೆಯ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸವಿತಾ ಪಿ.ಆರ್., ಲೋಕಾಯುಕ್ತ ಎಸ್ಪಿ ಸ್ನೇಹಾ, ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಆರ್., ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ಉಪ ವಿಭಾಗಾಧಿಕಾರಿ ಬಿನೋಯ್ ವೇದಿಕೆಯಲ್ಲಿದ್ದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ದೂರುದಾರರು ಹಾಗೂ ಎದುರುದಾರರು ಈ ವೇಳೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''