ನಮಗೆ ಸಾಂಸ್ಕೃತಿಕ ಬೇಡಿ ಹಾಕಲಾಗಿದೆ

KannadaprabhaNewsNetwork |  
Published : Dec 21, 2025, 02:15 AM IST
 | Kannada Prabha

ಸಾರಾಂಶ

ನಮಗೆ ಸಾಂಸ್ಕೃತಿಕ ಬೇಡಿಯನ್ನು ಹಾಕಿ ಬೀಗವನ್ನು ನಮ್ಮ ಜೋಬೊಳಗೇ ಹಾಕಿದ್ದಾರೆ. ಇದರ ಬಗ್ಗೆ ನಮಗೆ ಅರಿವಿಲ್ಲ. ನಮ್ಮ ಆಲೋಚನೆ, ನಮ್ಮ ಮನಸು, ನಮ್ಮ ಕೈ-ಕಾಲುಗಳಿಗೆ ಹಾಕಿರುವಂತಹ ಕೋಳದ ಬೀಗದ ಕೈ ನಮ್ಮಲ್ಲಿದ್ದರೂ ಇದರ ಅರಿವು ನಮಗಿಲ್ಲದೆ ತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ನಮ್ಮ ಹಟ್ಟಿ ಕೃತಿಯ ನಿರೂಪಕ ಹಾಗೂ ಕಥೆಗಾರ ಡಾ. ಜಿ.ವಿ. ಆನಂದಮೂರ್ತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ನಮಗೆ ಸಾಂಸ್ಕೃತಿಕ ಬೇಡಿಯನ್ನು ಹಾಕಿ ಬೀಗವನ್ನು ನಮ್ಮ ಜೋಬೊಳಗೇ ಹಾಕಿದ್ದಾರೆ. ಇದರ ಬಗ್ಗೆ ನಮಗೆ ಅರಿವಿಲ್ಲ. ನಮ್ಮ ಆಲೋಚನೆ, ನಮ್ಮ ಮನಸು, ನಮ್ಮ ಕೈ-ಕಾಲುಗಳಿಗೆ ಹಾಕಿರುವಂತಹ ಕೋಳದ ಬೀಗದ ಕೈ ನಮ್ಮಲ್ಲಿದ್ದರೂ ಇದರ ಅರಿವು ನಮಗಿಲ್ಲದೆ ತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ನಮ್ಮ ಹಟ್ಟಿ ಕೃತಿಯ ನಿರೂಪಕ ಹಾಗೂ ಕಥೆಗಾರ ಡಾ. ಜಿ.ವಿ. ಆನಂದಮೂರ್ತಿ ತಿಳಿಸಿದರು.

ತುಮಕೂರಿನ ಕನ್ನಡ ಭವನದಲ್ಲಿ ಪ್ರತಿಪದ ಪ್ರಕಾಶನದ ವತಿಯಿಂದ ಹಮ್ಮಿಕೊಂಡಿದ್ದ ಕೆ.ದೊರೈರಾಜ್ ಅವರ ನಮ್ಮ ಹಟ್ಟಿ ಕೃತಿಯನ್ನು ಬಿಡುಗಡೆಗೊಳಿಸಿದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಡುಗಡೆಗೆ ಅನಂತ ದಾರಿಗಳಿವೆ. ಗುಪ್ತರ ದಾರಿ ಒಂದು, ವಚನಕಾರರ ದಾರಿ ಒಂದು. ನಾರಾಯಣಗುರುಗಳ ದಾರಿ ಒಂದು. ಪೆರಿಯಾರ್ ಅವರ ದಾರಿಯೂ ಒಂದಿದೆ. ಕುವೆಂಪು ಅವರದ್ದು ಒಂದು ದಾರಿಯಿದೆ. ಅಂಬೇಡ್ಕರ್ ಅವರ ದಾರಿಯೂ ಒಂದಿದೆ. ಗಾಂಧೀಜಿಯವರದ್ದು ಒಂದು ಬಿಡುಗಡೆಯ ದಾರಿ ಇದೆ. ಇವೆಲ್ಲವೂ ಕೂಡ ವೈದಿಕ ಸಂಸ್ಕೃತಿಯಿಂದ ಬಿಡುಗಡೆಗೊಳ್ಳುವ ಅನಂತ ಮಾರ್ಗಗಳು. ಆದರ ಉದ್ದೇಶ ಒಂದೇ ಆಗಿದೆ. ಅದೆಂದರೆ ವೈದಿಕ ಸಂಸ್ಕೃತಿಯ ಕಬಂಧ ಬಾಹುಗಳಿಂದ ಬಿಡುಗಡೆಗೊಳ್ಳುವಂತಹದ್ದಾಗಿದೆ. ಹಾಗೆ ಬಿಡುಗಡೆಗೊಳ್ಳಲು ಬೇಕಾದ ಹತಾರಗಳು ಹೊರ ಜಗತ್ತಿನಲ್ಲಿ ಇಲ್ಲ. ನಮ್ಮೊಳಗೆ ಇದಾವೆ ಎಂದರು.

ವೈದಿಕ ಸಂಸ್ಕೃತಿಯ ಆಚರಣೆಗಳನ್ನು ನಾವು ಸಂಪೂರ್ಣವಾಗಿ ತೊರೆಯುವುದಿಲ್ಲವೋ ಅಲ್ಲಿಯವರೆಗೆ ನಮ್ಮ ವಿಮೋಚನೆ ಇಲ್ಲ. ತಳ ಸಮುದಾಯಗಳು, ಶೂದ್ರರು ಮತ್ತು ದಲಿತರು ಎಲ್ಲರೂ ಒಗ್ಗೂಡಿ ಹೋಗಬೇಕು. ವೈದಿಕ ಸಂಸ್ಕೃತಿಯಿಂದ ಬಿಡುಗಡೆಗೊಂಡು ಮುನ್ನಡೆಯಬೇಕು. ಮಾದಿಗರ ಹಟ್ಟಿ ಕೂಡ ಅಂತಹದ್ದೇ ಒಂದು ಪ್ರಯತ್ನವನ್ನು ಮಾಡುತ್ತದೆ. ಯಾವುದೇ ಹೊರಗಿನ ಸಲಕರಣೆಯನ್ನು ತೆಗೆದುಕೊಳ್ಳದೆ, ತಮ್ಮ ಹಟ್ಟಿಯೊಳಗಿನ ಸಾಂಸ್ಕೃತಿಕ ಆಚರಣೆಗಳ ಮೂಲಕವೇ ಅದು ತನ್ನ ಬಿಡುಗಡೆಗೆ ಪ್ರಯತ್ನಿಸುತ್ತದೆ ಎಂದು ಹೇಳಿದರು.

ನಮ್ಮ ಹಟ್ಟಿ ಹೊರ ಜಗತ್ತಿಗೆ ಕಾಣದ ದೊಡ್ಡ ಲೋಕವನ್ನು ಹೊಂದಿದೆ. ಸ್ವಾಭಿಮಾನದ ಜಗತ್ತು. ಹಟ್ಟಿಯಲ್ಲಿ ಎಲ್ಲವೂ ಇದೆ. ದುಡಿಮೆಗಾರರು, ಕುಶಲ ಕರ್ಮಿಗಳು ಇದ್ದಾರೆ. ಬೇರೆ ಬೇರೆಯವರೂ ಇದ್ದಾರೆ. ಆದರೆ ಹಟ್ಟಿ ಒಳಗೆ ಇರುವಂತ ಜಗತ್ತು ಇದೆಯಲ್ಲ ಅದು ಕ್ರಿಯಾಶೀಲವಾಗಿದೆ. ಆರೋಗ್ಯಕರವಾಗಿದೆ. ಹಟ್ಟಿ ತನ್ನೊಳಗಿನ ವೈವಿಧ್ಯಮಯವಾದ ಬದುಕನ್ನು ಈ ಕೃತಿಯ ಮೂಲಕ ಅದು ನಮ್ಮ ಮುಂದೆ ತೆರೆದಿಟ್ಟಿದೆ. ಇದು ದೊಡ್ಡ ಪ್ರಯತ್ನ. ನಿಗೂಢವಾಗಿದ್ದ ಲೋಕ ಅನಾವರಣಗೊಂಡಿದೆ ಎಂದು ತಿಳಿಸಿದರು.

ಡಾ.ಎಸ್. ನಟರಾಜ ಬೂದಾಳ್, ಚಿಂತಕ ಕೆ.ದೊರೈರಾಜ್, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎಸ್.ಮೂರ್ತಿ, ಲೇಖಕಿ ಬಾ.ಹ.ರಮಾಕುಮಾರಿ, ಹೋರಾಟಗಾರ ಸಯ್ಯದ್ ಮುಜೀಬ್, ರೇಷ್ಮೆ ಇಲಾಖೆಯ ನಿವೃತ್ತ ಉಪ ನಿರ್ದೇಶಕ ವೈ.ಕೆ.ಬಾಲಕೃಷ್ಣಪ್ಪ, ಭಾಗವಹಿಸಿದ್ದರು.

ದಲಿತ ಮುಖಂಡ ನರಸಿಂಹಯ್ಯ ಪ್ರಾಸ್ತಾವಿಕ ಮಾತನಾಡಿದರು. ಎಂ.ಸಿ.ನರಸಿಂಹಮೂರ್ತಿ ಸ್ವಾಗತಿಸಿ, ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''