ಬಳ್ಳಾರಿ: ಕಲ್ಯಾಣ ಕರ್ನಾಟಕದ ಸೇಡಂನಲ್ಲಿ ಜನವರಿ ಕೊನೆಯಲ್ಲಿ ಆರಂಭವಾಗುವ ಭಾರತೀಯ ಸಂಸ್ಕೃತಿ ಉತ್ಸವವು ಕೃಷಿ, ತಂತ್ರಜ್ಞಾನ, ಕಲೆ, ವೈದ್ಯಕೀಯ, ಸಾಂಸ್ಕೃತಿಕ ನೆಲೆಗಳನ್ನು ಆಧುನಿಕ ಜಗತ್ತಿಗೆ ಪರಿಚಯಿಸುವ ಅದ್ಭುತ ಕಾರ್ಯಕ್ರಮವಾಗಿದೆ. ಇದರಲ್ಲಿ ಹೆಚ್ಚು ಜನರು ಪಾಲ್ಗೊಳ್ಳುವಂತಾಗಬೇಕು ಎಂದು ಚೈತನ್ಯ ವಿದ್ಯಾಸಂಸ್ಥೆಯ ಮಾಲೀಕ ಡಾ.ರಾಧಾಕೃಷ್ಣ ತಿಳಿಸಿದರು.ನಗರದ ರಾಘವ ಕಲಾಮಂದಿರದಲ್ಲಿ ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿಯಿಂದ ಹಮ್ಮಿಕೊಂಡಿರುವ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಅವರ ಜಾದೂ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾಜಿ ಮೇಯರ್ ಪಾರ್ವತಿ ಇಂದುಶೇಖರ್ ಮಾತನಾಡಿ, ಭಾರತೀಯ ಪರಂಪರೆ ಹಾಗೂ ಸಂಸ್ಕೃತಿ ಅರಿಯುವುದು ಬಹಳ ಅಗತ್ಯವಿದೆ. ಪಾಶ್ಚಾತ್ಯ ದೇಶಗಳು ಇಂದು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿರುವುದು ಕಂಡು ಬರುತ್ತದೆ. ಆದರೆ, ನಮ್ಮಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ತೀವ್ರ ಬೇಸರ ಮೂಡಿಸುತ್ತಿದೆ ಎಂದರಲ್ಲದೆ, ಸೇಡಂನಲ್ಲಿ ಜ.28ರಿಂದ ಫೆ.6ರವರೆಗೆ ಜರುಗುವ ಉತ್ಸವದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಿ ಎಂದು ಕರೆ ನೀಡಿದರು.
ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್, ಭಾರತೀಯ ಸಂಸ್ಕೃತಿ ಉತ್ಸವ ಮಹತ್ವ ತಿಳಿಸಿದರಲ್ಲದೆ, ಉತ್ಸವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ಜೂದೂ ಕಾರ್ಯಕ್ರಮ ರಾಜ್ಯದ ನಾನಾ ಕಡೆ ಆಯೋಜಿಸಲಾಗಿದೆ. ಬಳ್ಳಾರಿ ಸೇರಿದಂತೆ ಎಲ್ಲ ಕಡೆ ಉತ್ತಮ ಸ್ಪಂದನೆ ಬಂದಿರುವುದು ಸಂತಸ ತಂದಿದೆ ಎಂದು ಹೇಳಿದರು.ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಇಸ್ವಿ ಪಂಪಾಪತಿ, ಪ್ರಾಂಶುಪಾಲ ಸಂಘದ ಅಧ್ಯಕ್ಷ ಶ್ರೀಶೈಲ ಉಪಸ್ಥಿತರಿದ್ದರು.
ಅಡವಿಸ್ವಾಮಿ ಹಾಗೂ ವೆಂಕಟೇಶ ಬಡಿಗೇರ ಕಾರ್ಯಕ್ರಮ ನಿರ್ವಹಿಸಿದರು.