ಭಾರತದ ನೌಕೆಗೆ ಈಗ ‘ಐಎನ್‌ಎಸ್ ಸಮರ್ಥಕ್’ ಬಲ

KannadaprabhaNewsNetwork |  
Published : Oct 17, 2026, 01:45 AM IST
‘ಐಎನ್‌ಎಸ್ ಸಮರ್ಥಕ್’ | Kannada Prabha

ಸಾರಾಂಶ

ಭಾರತೀಯ ನೌಕಾಪಡೆಯ ಸ್ವದೇಶಿ ನಿರ್ಮಿತ ಬಹುಉದ್ದೇಶದ ನೌಕೆ ಐಎನ್‌ಎಸ್ ಸಮರ್ಥಕ್ ಅನ್ನು ಭಾರತದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಶುಕ್ರವಾರ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಕಾರವಾರ

ಭಾರತೀಯ ನೌಕಾಪಡೆಯ ಸ್ವದೇಶಿ ನಿರ್ಮಿತ ಬಹುಉದ್ದೇಶದ ನೌಕೆ ಐಎನ್‌ಎಸ್ ಸಮರ್ಥಕ್ ಅನ್ನು ಭಾರತದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಶುಕ್ರವಾರ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಿದರು.

ಈ ಸೇರ್ಪಡೆಯು ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಸ್ವಾವಲಂಬನೆ ಹಾಗೂ ಅತ್ಯಾಧುನಿಕ ಸ್ವದೇಶಿ ನೌಕಾ ಸಾಮರ್ಥ್ಯಗಳ ಅಭಿವೃದ್ಧಿಯ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಶೇಕಡ 75ಕ್ಕೂ ಅಧಿಕ ಸ್ವದೇಶಿ ಘಟಕಗಳನ್ನು ಹೊಂದಿರುವ ಐಎನ್‌ಎಸ್ ಸಮರ್ಥಕ್ ಭಾರತದ ಕೈಗಾರಿಕಾ, ತಾಂತ್ರಿಕ ಮತ್ತು ಹಡಗು ನಿರ್ಮಾಣ ಸಾಮರ್ಥ್ಯದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ರಕ್ಷಣಾ ಕ್ಷೇತ್ರದ ಸ್ವಾವಲಂಬನೆಯು ಇನ್ನು ಕೇವಲ ಆಶಯವಾಗಿ ಉಳಿದಿಲ್ಲ. ಅದು ವಾಸ್ತವವಾಗಿ ಸಾಕಾರಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಇದು ಬಲ ನೀಡಿದೆ ಎಂದು ಉಪರಾಷ್ಟ್ರಪತಿ ಹೇಳಿದರು.

ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ 4 ಬಹು ಉದ್ದೇಶದ ನೌಕೆಗಳ ಪೈಕಿ ಐಎನ್‌ಎಸ್ ಸಮರ್ಥಕ್ ಮೊದಲನೆಯದಾಗಿದೆ. ಇದರ ಸೇರ್ಪಡೆಯು ದೇಶದ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಪ್ರಯತ್ನಕ್ಕೆ ಮಹತ್ವದ ಕೊಡುಗೆಯಾಗಿದೆ.

ಸಮುದ್ರ ಕಣ್ಗಾವಲು ಮತ್ತು ಗಸ್ತು ಕಾರ್ಯಾಚರಣೆಗಳನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿರುವ ಈ ನೌಕೆ, ಕಡಿಮೆ ತೀವ್ರತೆಯ ಸಮುದ್ರ ಕಾರ್ಯಾಚರಣೆಗಳು, ಗುರಿ ನಿಯೋಜನೆ ಹಾಗೂ ವಿವಿಧ ವ್ಯವಸ್ಥೆಗಳ ಪರೀಕ್ಷೆಗಳಲ್ಲಿ ಬಳಸಲು ಅನುಕೂಲಕರವಾಗಿದೆ. ಮಾನವರಹಿತ ಮತ್ತು ಸ್ವಾಯತ್ತ ವ್ಯವಸ್ಥೆಗಳಿಗೆ ತಾಯಿನೌಕೆಯಾಗಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಇದರೊಂದಿಗೆ ಮಾನವೀಯ ನೆರವು, ವಿಪತ್ತು ಪರಿಹಾರ, ರಕ್ಷಣಾ ಕಾರ್ಯಾಚರಣೆ, ಮುಳುಗಿದ ವಸ್ತುಗಳ ಪತ್ತೆ ಮತ್ತು ರಕ್ಷಣೆ ಹಾಗೂ ಆಸ್ಪತ್ರೆ ನೌಕೆಯಾಗಿ ಸೇವೆ ಸಲ್ಲಿಸುವ ಸಾಮರ್ಥ್ಯವೂ ಇದೆ. ಸವಾಲಿನ ಸಮುದ್ರ ಪರಿಸ್ಥಿತಿಗಳಲ್ಲಿಯೂ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸ್ವದೇಶಿ ಸಂವೇದಕಗಳು, ಶಸ್ತ್ರಾಸ್ತ್ರಗಳು ಮತ್ತು ಎಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ಇದರಲ್ಲಿ ಅಳವಡಿಸಲಾಗಿದೆ.

100 ಮೀಟರ್‌ಗಿಂತಲೂ ಹೆಚ್ಚು ಉದ್ದವಿರುವ ಐಎನ್‌ಎಸ್ ಸಮರ್ಥಕ್ ಸುಮಾರು 5,000 ಟನ್ ತೂಕ ಹೊಂದಿದ್ದು, 7,200 ನಾಟಿಕಲ್ ಮೈಲುಗಳಿಗಿಂತಲೂ ಅಧಿಕ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ಭಾರತೀಯ ನೌಕಾಪಡೆಯ ಕಾರ್ಯಾಚರಣಾ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ.

ಬಹುಉದ್ದೇಶದ ಹಾಗೂ ವೆಚ್ಚದ ದೃಷ್ಟಿಯಿಂದ ಪರಿಣಾಮಕಾರಿ ನೌಕೆಯಾಗಿರುವ ಸಮರ್ಥಕ್, ವಿಧ್ವಂಸಕ ನೌಕೆಗಳು, ಯುದ್ಧನೌಕೆಗಳು ಮತ್ತು ವಿಮಾನವಾಹಕ ನೌಕೆಗಳಂತಹ ಪ್ರಮುಖ ಸಮರ ನೌಕೆಗಳನ್ನು ಅವುಗಳ ಮುಖ್ಯ ಕಾರ್ಯಾಚರಣೆಗಳಿಗೆ ಬಳಸಲು ಹೆಚ್ಚಿನ ಅವಕಾಶ ಕಲ್ಪಿಸಲಿದೆ. ಗುರಿ ನಿಯೋಜನೆ, ಸಿಬ್ಬಂದಿ ತರಬೇತಿ, ಸಮುದ್ರ ಕಣ್ಗಾವಲು, ಸರಕು ಸಾಗಣೆ ಹಾಗೂ ಅಗತ್ಯ ನೆರವು ಒದಗಿಸುವ ಕಾರ್ಯಗಳಲ್ಲಿಯೂ ಇದು ಪ್ರಮುಖ ಪಾತ್ರ ವಹಿಸಲಿದೆ.ಕಾರ್ಯಕ್ರಮದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್, ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್- ಇನ್- ಚೀಫ್ ವೈಸ್ ಅಡ್ಮಿರಲ್ ಸಂಜಯ್ ವತ್ಸಾಯನ್, ಕಂಟ್ರೋಲರ್ ಆಫ್ ವಾರ್ಷಿಪ್ ಪ್ರೊಡಕ್ಷನ್ ಆ್ಯಂಡ್ ಅಕ್ವಿಸಿಷನ್ ವೈಸ್ ಅಡ್ಮಿರಲ್ ಸಂಜಯ್ ಸಾಧು, ಕರ್ನಾಟಕದ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್, ಎಲ್‌ ಆ್ಯಂಡ್‌ ಟಿ ಹಡಗು ನಿರ್ಮಾಣ ವಿಭಾಗದ ಮುಖ್ಯಸ್ಥ ನಿವೃತ್ತ ರಿಯರ್ ಅಡ್ಮಿರಲ್ ಜಿ.ಕೆ.ಹರೀಶ್, ಐಎನ್‌ಎಸ್ ಸಮರ್ಥಕ್‌ ಕಮಾಂಡಿಂಗ್ ಆಫೀಸರ್ ಕಮಾಂಡರ್ ಸುಶೀಲ್ ಕುಮಾರ್ ಸಿಂಗ್ ಉಪಸ್ಥಿತರಿದ್ದರು.

ಐಎನ್‌ಎಸ್ ಸಮರ್ಥಕ್‌ನ ಲಾಂಛನದಲ್ಲಿ ಆಕ್ರಮಣಕಾರಿ ಭಂಗಿಯಲ್ಲಿರುವ ಭಾರತೀಯ ಆನೆಯ ಚಿತ್ರವಿದ್ದು, ಅದು ಶಕ್ತಿ, ಬುದ್ಧಿವಂತಿಕೆ ಮತ್ತು ಧೈರ್ಯವನ್ನು ಪ್ರತಿನಿಧಿಸುತ್ತದೆ. ಈ ನೌಕೆಯ ಸಿಬ್ಬಂದಿಯನ್ನು ‘ಪ್ರಚಂಡ ಪುಂಡರೀಕರು’ ಎಂದು ಕರೆಯಲಾಗುತ್ತದೆ. ಪುರಾಣಗಳಲ್ಲಿ ಉಲ್ಲೇಖವಾಗಿರುವ ಅಷ್ಟದಿಗ್ಗಜಗಳಲ್ಲಿ ಪುಂಡರೀಕನೂ ಒಬ್ಬನಾಗಿದ್ದು, ದಕ್ಷಿಣ-ಪೂರ್ವ ದಿಕ್ಕಿನ ರಕ್ಷಕನೆಂದು ಪರಿಗಣಿಸಲಾಗಿದೆ.

ಯಾವುದೇ ಕಾರ್ಯವನ್ನು ಯಾವುದೇ ಸಮಯದಲ್ಲಿ ನಿರ್ವಹಿಸಲು ಸಿದ್ಧವಾಗಿರುವುದು ಹಾಗೂ ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಸ್ಪಂದಿಸುವ ಸಾಮರ್ಥ್ಯ ಹೊಂದಿರುವುದು ಐಎನ್‌ಎಸ್ ಸಮರ್ಥಕ್‌ನ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಭಾರತದ ಶ್ರೀಮಂತ ಸಮುದ್ರ ಪರಂಪರೆಯನ್ನು ಸ್ಮರಿಸಿದ ಅವರು, ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಚೋಳರ ನೌಕಾ ಪರಂಪರೆಯು ಹಿಂದೂ ಮಹಾಸಾಗರ ಹಾಗೂ ಆಗ್ನೇಯ ಏಷ್ಯಾದಲ್ಲಿ ಭಾರತದ ಸಮುದ್ರ ಪ್ರಭಾವವನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದರು.

ದೇಶದ ಸಾರ್ವಭೌಮತ್ವ ಮತ್ತು ಸಮುದ್ರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಭಾರತೀಯ ನೌಕಾಪಡೆಯ ಸೇವೆಯನ್ನು ಶ್ಲಾಘಿಸಿದ ಅವರು, ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆ, ಭಾರತೀಯ ನಾಗರಿಕರ ಸ್ಥಳಾಂತರ, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಗಳಲ್ಲಿ ನೌಕಾಪಡೆಯ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಐಎನ್‌ಎಸ್ ಸಮರ್ಥಕ್ ಮುಂದಿನ ಪೀಳಿಗೆಯ ಶಸ್ತ್ರಾಸ್ತ್ರಗಳು, ಸಂವೇದಕಗಳು ಹಾಗೂ ಹೊಸ ತಂತ್ರಜ್ಞಾನಗಳ ಪರೀಕ್ಷೆ ಮತ್ತು ಮೌಲ್ಯಮಾಪನಕ್ಕೆ ಬಹುಮುಖ ವೇದಿಕೆಯಾಗಲಿದೆ. ಸಮುದ್ರ ಕಣ್ಗಾವಲು, ವಿಚಕ್ಷಣ, ಗಸ್ತು, ಮಾನವರಹಿತ ವ್ಯವಸ್ಥೆಗಳ ಕಾರ್ಯಾಚರಣೆ ಹಾಗೂ ವಿಪತ್ತು ಪರಿಹಾರ ಕಾರ್ಯಗಳಿಗೂ ಈ ನೌಕೆಯ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು ಎಂದರು.

ಭಾರತೀಯ ನೌಕಾಪಡೆ, ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆಗಳು, ಖಾಸಗಿ ಹಡಗು ನಿರ್ಮಾಣ ಉದ್ಯಮಗಳು, ಡಿಆರ್‌ಡಿಒ, ಶೈಕ್ಷಣಿಕ ಸಂಸ್ಥೆಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ನವೋದ್ಯಮಗಳ ನಡುವಿನ ಸಹಕಾರವು ದೇಶದ ರಕ್ಷಣಾ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ನೌಕೆಯ ನಿರ್ಮಾಣಕ್ಕೆ ಕೊಡುಗೆ ನೀಡಿದ ಎಲ್‌ ಆ್ಯಂಡ್‌ ಟಿ ಸಂಸ್ಥೆ ಹಾಗೂ ಎಂಜಿನಿಯರ್‌ಗಳು, ತಂತ್ರಜ್ಞರು ಮತ್ತು ಇತರ ಸಿಬ್ಬಂದಿಯ ಕಾರ್ಯವನ್ನು ಅವರು ಶ್ಲಾಘಿಸಿದರು.ಸಮುದ್ರ ಭದ್ರತೆಯಲ್ಲಿ ಕಾರವಾರದ ಮಹತ್ವ:

ಕಾರವಾರದ ಆಳವಾದ ನೈಸರ್ಗಿಕ ಬಂದರು ಮತ್ತು ಅರಬ್ಬಿ ಸಮುದ್ರಕ್ಕೆ ಇರುವ ಸಮೀಪತೆಯು ಭಾರತದ ಸಮುದ್ರ ಭದ್ರತೆಯಲ್ಲಿ ಈ ಪ್ರದೇಶಕ್ಕೆ ವಿಶೇಷ ಮಹತ್ವ ನೀಡಿದೆ. ಪ್ರಾಜೆಕ್ಟ್ ಸೀಬರ್ಡ್ ಅಡಿಯಲ್ಲಿ ಆಧುನಿಕ ನೌಕಾ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ನೆಲೆಗೊಳಿಸಲು ಸಾಧ್ಯವಾಗಲಿದೆ. ಈ ಯೋಜನೆಯು ಸ್ಥಳೀಯ ಆರ್ಥಿಕ ಬೆಳವಣಿಗೆಗೂ ಅವಕಾಶ ಕಲ್ಪಿಸಲಿದೆ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಬದ್ಧತೆ ಮುಖ್ಯ: ಬಿ.ಕೆ. ಶಿವಕುಮಾರ್
ಧಾರವಾಡದಲ್ಲೂ ದಸರಾ ಗೊಂಬೆ ಸಂಪ್ರದಾಯ ಶುರು