ಕೊಪ್ಪದಲ್ಲಿ ರಸ್ತೆಯಲ್ಲಿ ಗುಂಡಿಯೋ, ಗುಂಡಿಯಲ್ಲೇ ರಸ್ತೆಯೋ?!

KannadaprabhaNewsNetwork |  
Published : Oct 17, 2026, 01:45 AM IST
ಸ್ವಲ್ಪ ಯಾಮಾರಿದರೂ ಆಸ್ಪತ್ರೆ ಗ್ಯಾರಂಟಿ, ವಾಹನ ರಿಪೇರಿಗೆ ಜೇಬು ಖಾಲಿ ಗ್ಯಾರಂಟಿ!’  | Kannada Prabha

ಸಾರಾಂಶ

ಕೊಪ್ಪಸ್ವಲ್ಪ ಯಾಮಾರಿದರೂ ಆಸ್ಪತ್ರೆ ಗ್ಯಾರಂಟಿ, ಹಾಗೇ ವಾಹನ ರಿಪೇರಿಗೆ ಜೇಬು ಖಾಲಿ ಗ್ಯಾರಂಟಿ!’ - ಇದು ಮಲೆನಾಡಿನ ಹೆಬ್ಬಾಗಿಲು ಕೊಪ್ಪ ಪಟ್ಟಣದ ರಸ್ತೆಯಲ್ಲಿ ಓಡಾಡುವ ಪ್ರತಿಯೊಬ್ಬ ನಾಗರಿಕನ ಇಂದಿನ ನಿತ್ಯ ಗೋಳು.

6 ಕಿ.ಮೀ. ಮರಣಗುಂಡಿಗಳ ಹೆದ್ದಾರಿ: 3 ವರ್ಷಗಳಿಂದ ನರಕಯಾತನೆ । ಆಡಳಿತ ಪಕ್ಷದ ನಿರ್ಲಕ್ಷ್ಯ, ವಿರೋಧ ಪಕ್ಷದ ಕಣ್ಣಾಮುಚ್ಚಾಲೆ: ಜನತೆ ಕಂಗಾಲು)

ಕನ್ನಡಪ್ರಭ ವಾರ್ತೆ ಕೊಪ್ಪ

ಸ್ವಲ್ಪ ಯಾಮಾರಿದರೂ ಆಸ್ಪತ್ರೆ ಗ್ಯಾರಂಟಿ, ಹಾಗೇ ವಾಹನ ರಿಪೇರಿಗೆ ಜೇಬು ಖಾಲಿ ಗ್ಯಾರಂಟಿ!’ - ಇದು ಮಲೆನಾಡಿನ ಹೆಬ್ಬಾಗಿಲು ಕೊಪ್ಪ ಪಟ್ಟಣದ ರಸ್ತೆಯಲ್ಲಿ ಓಡಾಡುವ ಪ್ರತಿಯೊಬ್ಬ ನಾಗರಿಕನ ಇಂದಿನ ನಿತ್ಯ ಗೋಳು.

​ಪಟ್ಟಣದ ಮೇಲಿನಪೇಟೆ ಟೋಲ್‌ಗೇಟ್‌ನಿಂದ ಕೊಪ್ಪ ಎಸ್ಟೇಟ್ ಮಾರ್ಗವಾಗಿ ಶಿವಮೊಗ್ಗ ರಸ್ತೆ ಟೋಲ್‌ಗೇಟ್‌ವರೆಗಿನ ಸುಮಾರು 6 ಕಿ.ಮೀ. ಮುಖ್ಯ ರಸ್ತೆ (ಪಟ್ಟಣದ ವ್ಯಾಪ್ತಿ ಒಳಗೊಂಡಂತೆ) ಸಂಪೂರ್ಣ ಕಿತ್ತುಹೋಗಿ ಬರೋಬ್ಬರಿ ಮೂರು ವರ್ಷಗಳು ಕಳೆದಿವೆ. ಆದರೆ, ರಸ್ತೆಯ ಒಂದು ಸಣ್ಣ ಗುಂಡಿ ಮುಚ್ಚುವ ಕನಿಷ್ಠ ಸೌಜನ್ಯವನ್ನೂ ಆಡಳಿತಾರೂಢ ಜನಪ್ರತಿ ನಿಧಿಗಳು ತೋರಿಲ್ಲ. ಇತ್ತ ಜನರ ಪರವಾಗಿ ಬೀದಿಗಿಳಿದು ಹೋರಾಡಬೇಕಾದ ವಿರೋಧ ಪಕ್ಷಗಳು ಸುಖನಿದ್ರೆಗೆ ಜಾರಿವೆ. ಪರಿಣಾಮವಾಗಿ, ನಿತ್ಯ ನೂರಾರು ಶಾಲಾ ಮಕ್ಕಳು, ವೃದ್ಧರು, ರೋಗಿಗಳು ಹಾಗೂ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡೇ ಈ ‘ಮರಣಗುಂಡಿಗಳ’ ಹಾದಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.

​ರೈತರ ಸಂಕಷ್ಟದ ನಡುವೆ ವ್ಯಾಪಾರಕ್ಕೆ ರಸ್ತೆ ಕಂಟಕ!

​ಮಲೆನಾಡು ಭಾಗದಲ್ಲಿ ಈಗಾಗಲೇ ಮಳೆ ಕೊರತೆ ಒಂದೆಡೆಯಾದರೆ ಮತ್ತೊಂದೆಡೆ ಕಾಡಾನೆಗಳ ನಿರಂತರ ಉಪಟಳ ಹಾಗೂ ಕಸ್ತೂರಿ ರಂಗನ್ ವರದಿ ತೂಗುಗತ್ತಿ ರೈತರನ್ನು ತೀವ್ರ ಆತಂಕಕ್ಕೆ ತಳ್ಳಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಕೊಪ್ಪ ಪಟ್ಟಣಕ್ಕೆ ಬರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಕ್ಷೀಣಿಸುತ್ತಿದೆ. ಇದಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಈ ಕಿತ್ತುಹೋದ ರಸ್ತೆಗಳಿಂದ ಗ್ರಾಹಕರು ಪಟ್ಟಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಪಟ್ಟಣದ ವರ್ತಕರು ಹಾಕಿದ ಬಂಡವಾಳ ವಾಪಸ್ ಬಾರದೆ ವ್ಯಾಪಾರ-ವಹಿವಾಟು ಸಂಪೂರ್ಣ ಕುಸಿಯು ವಂತಾಗಿದೆ. ಹೀಗೆ ಮುಂದುವರಿದರೆ ಕೊಪ್ಪ ಪಟ್ಟಣ ಆರ್ಥಿಕವಾಗಿ ಸಂಪೂರ್ಣ ಅವನತಿ ಹೊಂದುವುದರಲ್ಲಿ ಸಂಶಯವಿಲ್ಲ ಎಂದು ಸ್ಥಳೀಯ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

​‘ಮಳೆಗಾಲದ ನೆಪ: ಅದೇ ರಾಗ, ಅದೇ ತಾಳ!

​ಮಾಧ್ಯಮಗಳು ಅಥವಾ ಸಾರ್ವಜನಿಕರು ಪ್ರಶ್ನಿಸಿದಾಗಲೆಲ್ಲ ಮಳೆಗಾಲ ಮುಗಿಯಲಿ, ಕೂಡಲೇ ಡಾಂಬರೀಕರಣ ಮಾಡುತ್ತೇವೆ ಎಂಬ ಸಿದ್ಧ ಉತ್ತರ ಜನಪ್ರತಿನಿಧಿಗಳು ಉರು ಹೊಡೆಯುತ್ತಿದ್ದಾರೆ. 2024ರಲ್ಲಿ ಹೇಳಿದ ಅದೇ ಭರವಸೆ ಜಪ 2026 ಬಂದರೂ ಮುಗಿದಿಲ್ಲ. ಸರಕಾರದ ಗ್ಯಾರಂಟಿ ಯೋಜನೆಗಳ ಪ್ರಚಾರದಲ್ಲಿ ಮುಳುಗಿದ ಕ್ಷೇತ್ರದ ಶಾಸಕರಿಗೆ ಸಾರ್ವಜನಿಕರ ಈ ಮೂಲಭೂತ ಸಂಕಷ್ಟ ಕಣ್ಣಿಗೆ ಕಾಣಿಸುತ್ತಿಲ್ಲವೇ? ಚುನಾವಣೆ ವೇಳೆ ಕೈಮುಗಿದು ಮತ ಕೇಳಲು ಬರುವ ಜನಪ್ರತಿನಿಧಿಗಳಿಗೆ, ಜನರಿಗೆ ಕನಿಷ್ಠ ಸಂಚಾರಯೋಗ್ಯ ರಸ್ತೆ ಒದಗಿಸುವ ಜವಾಬ್ದಾರಿ ನೆನಪಾಗುವುದಿಲ್ಲವೇ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

​ಕ್ಷೇತ್ರದಲ್ಲಿ ವಿರೋಧ ಪಕ್ಷ ಜೀವಂತವಾಗಿದೆಯೇ?

​ಜನರ ಈ ಗಂಭೀರ ಸಮಸ್ಯೆ ಮುಂದಿಟ್ಟುಕೊಂಡು ಆಡಳಿತ ಯಂತ್ರವನ್ನು ಎಚ್ಚರಿಸಬೇಕಾದ ಪ್ರಮುಖ ವಿರೋಧ ಪಕ್ಷ ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿದೆಯೇ ಎಂಬುದು ಸಾರ್ವಜನಿಕರ ಯಕ್ಷಪ್ರಶ್ನೆ. ಕೇವಲ ಪತ್ರಿಕಾ ಹೇಳಿಕೆಗೋ ಅಥವಾ 4 ಜನರನ್ನು ಸೇರಿಸಿ ನೆಪಮಾತ್ರಕ್ಕೆ ಫೋಟೋ ಪ್ರತಿಭಟನೆ ಮಾಡುವುದಕ್ಕೂ ವಿರೋಧ ಪಕ್ಷ ಸೀಮಿತವಾಗಿದೆಯೇ? ಜನಸಾಮಾನ್ಯರ ಪರವಾಗಿ ಬೃಹತ್ ಜನಜಾಗೃತಿ ಹಾಗೂ ಉಗ್ರ ಹೋರಾಟ ರೂಪಿಸದ ವಿರೋಧ ಪಕ್ಷದ ಜಡತ್ವ ಸಾರ್ವಜನಿಕರ ಆಕ್ರೋಶ ಇಮ್ಮಡಿಗೊಳಿಸಿದೆ.

‘ರಸ್ತೆ ಭಾಗ್ಯ’ ಕೊಡಿ, ಇಲ್ಲವೇ ತಕ್ಕ ಪಾಠ ಕಲಿಯಿರಿ!

​ಆಡಳಿತ ಪಕ್ಷದ ನಿರ್ಲಕ್ಷ್ಯ ಮತ್ತು ವಿರೋಧ ಪಕ್ಷದ ನಿಷ್ಕ್ರಿಯತೆಯಿಂದ ಬೇಸತ್ತ ಕೊಪ್ಪದ ಜನತೆ ತಾಳ್ಮೆ ಕಟ್ಟೆ ಒಡೆದಿದೆ. ಇನ್ನಾದರೂ ಕಣ್ಣುಮುಚ್ಚಿ ಕುಳಿದ ಅಧಿಕಾರಿಗಳು ಹಾಗೂ ಶಾಸಕರು ಕೂಡಲೇ ಎಚ್ಚೆತ್ತು ರಸ್ತೆ ದುರಸ್ತಿ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲು ಮತದಾರರು ಸಜ್ಜಾಗಿದ್ದಾರೆ.

--ಬಾಕ್ಸ್--

ಜನಪ್ರತಿನಿಧಿಗಳಿಗೆ ಪ್ರಶ್ನೆ

​ಚುನಾವಣೆ ಮುಗಿದ ಮೇಲೆ ಮತದಾರ ನೆನಪಾಗುವುದಿಲ್ಲವೇ?

​ಸರಕಾರದ ನಾನಾ ‘ಭಾಗ್ಯ’ಗಳ ನಡುವೆ ಸಾರ್ವಜನಿಕರಿಗೆ ‘ಸುರಕ್ಷಿತ ರಸ್ತೆ ಭಾಗ್ಯ’ ಯಾವಾಗ ?

​‘ಮಳೆ ಮುಗಿದ ಮೇಲೆ ಎಂಬ ಸಿದ್ಧ ಉತ್ತರಕ್ಕೆ ಕಾಲಮಿತಿ ಇಲ್ಲವೇ ?

-- ಕೋಟ್‌--

ದಿನನಿತ್ಯ ಈ ರಸ್ತೆಯಲ್ಲಿ ಆಟೋ, ಬೈಕ್ ಓಡಿಸುವುದು ಯಮಲೋಕದ ದರ್ಶನ ಮಾಡಿದಂತೆ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಪಡಬೇಕಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ನಿದ್ದೆಯಿಂದ ಎದ್ದು ಕೆಲಸ ಮಾಡಲಿ.

– ಕೊಪ್ಪದ ಸಾರ್ವಜನಿಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಬದ್ಧತೆ ಮುಖ್ಯ: ಬಿ.ಕೆ. ಶಿವಕುಮಾರ್
ಧಾರವಾಡದಲ್ಲೂ ದಸರಾ ಗೊಂಬೆ ಸಂಪ್ರದಾಯ ಶುರು