- ಇನ್ನು ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಕಣಕ್ಕೆ: ಈ.ಆನಂದ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಈ.ಆನಂದ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ನಮ್ಮ ಪಕ್ಷದಿಂದ ಸೂಕ್ತ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿದ್ದೇವೆ. ಉಪ ಚುನಾವಣೆಗೆ ಪಕ್ಷದ ಸ್ಪರ್ಧೆಯು ಖಚಿತ ಎಂದರು.
ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್ ಪಕ್ಷವನ್ನು ಒಂದು ವರ್ಷದ ಹಿಂದೆ ಆರಂಭಿಸಿದ್ದೇವೆ. ಪಕ್ಷ ಸ್ಥಾಪಿಸುವ ಮುನ್ನ ಹಲವಾರು ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಪಕ್ಷ ಸಂಘಟನೆ, ಹೋರಾಟದ ವೇಳೆ ಸಿಗುತ್ತಿದ್ದ ಮಾನ್ಯತೆಯು ಚುನಾವಣೆಗೆ ಬಿ ಫಾರಂ ನೀಡುವಾಗ ಇರುತ್ತಿರಲಿಲ್ಲ. ಹಾಗಾಗಿ ರಾಜಕೀಯ ಅವಕಾಶ ವಂಚಿತರಾಗಿರುವವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ರಾಜ್ಯವ್ಯಾಪಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು. ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ, ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸೇರಿದಂತೆ ಎಲ್ಲ ಹಂತದ ಚುನಾವಣೆಗಳಲ್ಲೂ ನಮ್ಮ ಪಕ್ಷ ಸ್ಪರ್ಧಿಸಲಿದೆ. ವಿಧಾನಸಭೆ, ಲೋಕಸಭೆ ಚುನಾವಣೆ ಮಾತ್ರವಲ್ಲದೇ, ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಪಕ್ಷ ಸ್ಪರ್ಧಿಸುತ್ತದೆ ಎಂದು ಈ.ಆನಂದ್ ಸ್ಪಷ್ಟಪಡಿಸಿದರು.ಪಕ್ಷದ ರಾಜ್ಯಾಧ್ಯಕ್ಷ ಡಾ. ಎಸ್.ಎಸ್. ರೆಡ್ಡರಾ, ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆ ವಿ.ಉಮಾ, ಪ್ರಧಾನ ಕಾರ್ಯದರ್ಶಿ ವಿ.ವಿಜಯಾ, ಜಿಲ್ಲಾಧ್ಯಕ್ಷ ಈರಣ್ಣ, ಪ್ರಶಾಂತ, ಅನಿಲ್ ಇತರರು ಇದ್ದರು.
- - --27ಕೆಡಿವಿಜಿ5: ದಾವಣಗೆರೆಯಲ್ಲಿ ಶುಕ್ರವಾರ ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಈ.ಆನಂದ, ವಿ.ಉಮಾ, ವಿ.ವಿಜಯಾ ಸುದ್ದಿಗೋಷ್ಠಿಯಲ್ಲಿ ಪಕ್ಷದ ಬಾವುಟ ಪ್ರದರ್ಶಿಸಿದರು. -27ಕೆಡಿವಿಜಿ6: ರಾಷ್ಟ್ರೀಯ ಅಧ್ಯಕ್ಷ ಈ.ಆನಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.