ಕನ್ನಡಪ್ರಭ ವಾರ್ತೆ ಮೈಸೂರುನಮಗೆ ತಿಳಿಯದ ಇತಿಹಾಸವನ್ನು ತಿಳಿಯಬೇಕಾದರೆ ದಾಖಲೆಗಳು ಬಹುಮುಖ್ಯ ಹಾಗೂ ಪ್ರಮುಖ ಆಧಾರ. ಈ ಆಧಾರಗಳ ಮೂಲಕ ಸತ್ಯ ಸಂಗತಿಗಳನ್ನು ವಿದ್ಯಾರ್ಥಿಗಳು ತಿಳಿಯುವ ಪ್ರಯತ್ನ ಮಾಡಬೇಕು ಎಂದು ವಿಭಾಗೀಯ ಪತ್ರಗಾರ ಕಚೇರಿ ಉಪ ನಿರ್ದೇಶಕ ಎಚ್.ಎಲ್. ಮಂಜುನಾಥ್ ಅಭಿಪ್ರಾಯಪಟ್ಟರು.ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದಿಂದ ‘ಚಾರಿತ್ರಿಕ ದಾಖಲೆಗಳ ಮಹತ್ವ ಮತ್ತು ಉಪಯೋಗ ವಿಷಯ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.ಕಾರ್ಲ್ ಮಾರ್ಕ್ಸ್ ಹೇಳಿರುವಂತೆ ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟವೇ ಇತಿಹಾಸ. ಇಂದು ವಿಜಯನಗರ ಸಾಮ್ರಾಜ್ಯದ ವೈಭವ ತಿಳಿಯಲು ಹಾಗೂ ಇನ್ನೂ ಅನೇಕ ರಾಜವಂಶಗಳ ಇತಿಹಾಸವನ್ನು ತಾಳೆಗರಿಗಳು, ಶಾಸನಗಳು, ನಾಣ್ಯಗಳು, ಸ್ಮಾರಕಗಳು, ಸಾಹಿತ್ಯ ಕೃತಿಗಳು ದಾಖಲೆಗಳ ರೂಪದಲ್ಲಿ ದೊರೆತಿರುವುದು ಸಹಕಾರಿಯಾಗಿದೆ ಎಂದರು.ಸಿಂಧೂ ನಾಗರೀಕತೆಯನ್ನು ಅರಿಯುವಲ್ಲಿ ದಾಖಲೆಗಳ ಪಾತ್ರ ಮಹತ್ವದ್ದಾಗಿದೆ. ಗ್ರೀಕ್ ಮತ್ತು ಪರ್ಷಿಯನ್ನರ ಯುದ್ಧಗಳ ತಂತ್ರಗಾರಿಕೆ ಹಾಗೂ ವೈಜ್ಞಾನಿಕ ವಿಷಯ ಕುರಿತು ಬರಹಗಾರರು ದಾಖಲೆಗಳಲ್ಲಿ ಸಂಗ್ರಹಿಸಿದ್ದಾರೆ. ಮೈಸೂರು ರಾಜರ ವಂಶಾವಳಿ ಮತ್ತು ಅವರ ಆಡಳಿತದ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತಾ, ಆರಂಭದಲ್ಲಿ ಗಂಧದ ಅರಮನೆ ಮೈಸೂರಿನಲ್ಲಿ ಇತ್ತು. ನಂತರ ಅದು 1896ರಲ್ಲಿ ಬೆಂಕಿಗೆ ಆಹುತಿಯಾಗಿ ನಾಶವಾಯಿತು, ಇಂದಿನ ಹೊಸ ಅರಮನೆ 1912ರಲ್ಲಿ ನಿರ್ಮಣವಾಯಿತು. ಅಂಬಾರಿ ಹೊತ್ತಿದ್ದ ಪ್ರೀತಿಯ ಆನೆ ಜಯಮಾರ್ತಾಂಡ ಹೆಸರನ್ನು ಅರಮನೆಯ ಮುಖ್ಯದ್ವಾರಕ್ಕೆ ಇಡಲಾಗಿದೆ. ಅರಸರು ಮೊದಲ ಬಾರಿಗೆ ಶಿವನಸಮುದ್ರದಲ್ಲಿ ವಿದ್ಯುಚ್ಛಕ್ತಿ ಕೇಂದ್ರ ಸ್ಥಾಪಿಸಿ ವಿದ್ಯುತ್ ಅನ್ನು ಕೋಲಾರ ಚಿನ್ನದಗಣಿಗೆ ನೀಡಿ, ನಂತರ ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಒದಗಿಸಿದ್ದಾಗಿ ಹೇಳಿದರು.ಕಾಲರಾಗೆ ಔಷಧಿಯನ್ನು ಲಂಡನ್ ನಿಂದ ತರಿಸಿ ಉಚಿತವಾಗಿ ಹಂಚಿದರು. ಮೈಸೂರು ಮೃಗಾಲಯವನ್ನು, ಗಜಶಾಲೆ ನಿರ್ಮಿಸಿದ್ದರು. ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಹುಲಿ ಸಂರಕ್ಷಣಾ ಕಾಯಿದೆ ಜಾರಿಗೊಳಿಸಿದ್ದರು. ಈ ಎಲ್ಲಾ ಮಾಹಿತಿ ನಮಗೆ ದೊರೆತಿರುವ ದಾಖಲೆಗಳಿಂದ ತಿಳಿಯುತ್ತದೆ ಎಂದರು.ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಪತ್ರಗಾರ ಮತ್ತು ಗೆಜೆಟಿಯರ್ ಇಲಾಖೆ, ವಿಭಾಗೀಯ ಪತ್ರಗಾರ ಕಚೇರಿಗೆ ಭೇಟಿ ನೀಡಿದರೆ ಇನ್ನೂ ಅನೇಕ ದಾಖಲಾತಿಗಳನ್ನು ವೀಕ್ಷಿಸಬಹುದು ಎಂದು ಅವರು ತಿಳಿಸಿದರು.ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ ಮಾತನಾಡಿ, ಇತಿಹಾಸವನ್ನು ಅರಿಯದವನು ಇತಿಹಾಸ ಸೃಷ್ಟಿಸಲಾರ. ಇಂದು ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಿರುವ ವಿಶೇಷ ಉಪನ್ಯಾಸವು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗುತ್ತದೆ. ವಿದ್ಯಾರ್ಥಿಗಳು ಇಂತಹ ಉಪನ್ಯಾಸಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿಯನ್ನು ಪುಸ್ತಕಗಳಲ್ಲಿ ದಾಖಲಿಸಿಕೊಂಡರೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುತ್ತವೆ ಎಂದರು.ಕೆ.ಎಸ್. ಸವಿತಾ ಸ್ವಾಗತಿಸಿದರು. ಎಂ.ಜೆ. ಯಮುನಾ ನಿರೂಪಿಸಿ, ವಂದಿಸಿದರು.
ಆಧಾರಗಳ ಮೂಲಕ ಸತ್ಯಸಂಗತಿ ತಿಳಿಯಬೇಕು
- ಚಾರಿತ್ರಿಕ ದಾಖಲೆಗಳ ಮಹತ್ವ ಮತ್ತು ಉಪಯೋಗ ಕುರಿತು
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.