ಮಾನಸಿಕ ನೆಮ್ಮದಿ ನೀಡುವ ಭಾರತೀಯ ಧರ್ಮ

KannadaprabhaNewsNetwork |  
Published : Dec 22, 2024, 01:33 AM IST
ಫೋಟೋ: 21 ಜಿಎಲ್ಡಿ1- ಗುಳೇದಗುಡ್ಡದ ಗುರುಸಿದ್ದೇಶ್ವರ ಮಠದಲ್ಲಿ ನಡೆದಿರುವ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಶನಿವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ  ಸನ್ಮಾನ ಸ್ವೀಕರಿಸಿ  ಮಾತನಾಡಿದರು.  | Kannada Prabha

ಸಾರಾಂಶ

ಜಗತ್ತಿನಲ್ಲಿ ಇಂದು ಮಾನಸಿಕ ನೆಮ್ಮದಿ ದೂರಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಸಂಬಂಧಗಳು ದೂರಾಗುತ್ತಿವೆ. ಆದರೆ, ಮಾನಸಿಕ ನೆಮ್ಮದಿ ನೀಡುವ ಏಕೈಕ ಧರ್ಮವೆಂದರೇ ಅದು ಭಾರತೀಯ ಧರ್ಮ. ಹೀಗಾಗಿ ಭಾರತ ಜಗತ್ತಿನಲ್ಲಿಯೇ ಉತ್ತಮ ಸಂಸ್ಕಾರ ನೀಡುವ ಸಂಸ್ಕಾರಯುತ ದೇಶ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಜಗತ್ತಿನಲ್ಲಿ ಇಂದು ಮಾನಸಿಕ ನೆಮ್ಮದಿ ದೂರಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಸಂಬಂಧಗಳು ದೂರಾಗುತ್ತಿವೆ. ಆದರೆ, ಮಾನಸಿಕ ನೆಮ್ಮದಿ ನೀಡುವ ಏಕೈಕ ಧರ್ಮವೆಂದರೇ ಅದು ಭಾರತೀಯ ಧರ್ಮ. ಹೀಗಾಗಿ ಭಾರತ ಜಗತ್ತಿನಲ್ಲಿಯೇ ಉತ್ತಮ ಸಂಸ್ಕಾರ ನೀಡುವ ಸಂಸ್ಕಾರಯುತ ದೇಶ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಪಟ್ಟಣದಲ್ಲಿ ಜಗದ್ಗುರು ಗುರುಸಿದ್ದೇಶ್ವರ ಶ್ರೀಗಳ 39ನೇ ಪುಣ್ಯಾರಾಧನೇಯ ಶರಣ ಸಂಗಮ ಸಮಾರಂಭ, ಗುರುಬಸವ ದೇವರ ಪಟ್ಟಾಭಿಷೇಕ ಮಹೋತ್ಸವ ಹಾಗೂ ಗುರುಸಿದ್ದೇಶ್ವರ ವಿದ್ಯಾ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದ ವಿಶೇಷ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕುಟುಂಬ ಆಧರಿತ ಧರ್ಮವನ್ನು ನಾವು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ಈ ಕುಟುಂಬ ಆಧರಿತ ಧರ್ಮದಲ್ಲಿ ಶಾಂತಿ, ನೆಮ್ಮದಿ, ಸುಖ ಎಲ್ಲವೂ ಇದೆ. ಆದರೆ, ಇಂದಿನ ಕುಟುಂಬಗಳು ಚಿಕ್ಕದಾಗುತ್ತಿವೆ. ಧರ್ಮದ ವ್ಯಾಪ್ತಿ, ಸಂಸ್ಕಾರ ಕಡಿಮೆಯಾಗುತ್ತಿದೆ. ವಿವಾಹ ವಿಚ್ಛೇದನಗಳು ಹೆಚ್ಚಾಗುತ್ತಿವೆ. ಕುಟುಂಬ ಚಿಕ್ಕದಾಗುತ್ತಿರುವುದರಿಂದ ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸುವುದು ಸಾಧ್ಯವಾಗುತ್ತಿಲ್ಲ. ಈ ತೆರನಾದ ಅಶಾಂತಿಯುತ ಬದುಕಿಗೆ ಬುನಾದಿ ಹಾಕುವಲ್ಲಿ ಮಠ-ಮಾನ್ಯಗಳ ಪಾತ್ರ ಹಿರಿದಾಗಿದೆ. ಮಠಗಳು ಉತ್ತಮ ಸಂಸ್ಕಾರ ನೀಡುತ್ತಿವೆ. ಗುಳೇದಗುಡ್ಡದ ಮಠ ಧಾರ್ಮಿಕ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಎಲ್ಲರನ್ನು ಪ್ರೀತಿಸುವ ಧರ್ಮ ಹಿಂದೂ ಧರ್ಮ. ಸರ್ವ ಜನಾಂಗದ ಶಾಂತಿಯ ತೋಟ ಇಲ್ಲಿದೆ. ಬಸವ ಧರ್ಮವನ್ನು ನಾವೆಲ್ಲ ಪ್ರೀತಿಸಬೇಕಾಗಿದೆ ಎಂದರು.ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಭೀಮಸೇನ ಚಿಮ್ಮನಕಟ್ಟಿ, ಡಾ.ಅಶೋಕ ನರೋಡೆ, ಮಾಜಿ ಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಹುಬ್ಬಳ್ಳಿ ಮೂರುಸಾವಿರ ಮಠದ ಡಾ.ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು, ಕಾಶೀನಾಥ ಶ್ರೀಗಳು, ಕಾಡಸಿಸದ್ದೇಶ್ವರ ಶ್ರೀಗಳು, ಆಳಂದ ರೇವಣಸಿದ್ದ ಪಟ್ಟದೇವರು, ಘಟಪ್ರಭಾದ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿದರು. ಗುರುಸಿದ್ದೇಶ್ವರ ಮಠದ ಬಸವರಾಜ ಶ್ರೀಗಳು, ಗುರುಬಸವ ದೇವರು ವೇದಿಕೆ ಮೇಲಿದ್ದರು.ನಮ್ಮ ಪರಂಪರೆಯನ್ನು ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಮರೆಯದಂತಾಗಬೇಕು. ಉತ್ತಮ ಅಂಕ ಪಡೆದುಕೊಳ್ಳದ ಒಬ್ಬ ವಿದ್ಯಾರ್ಥಿಯೂ ಉತ್ತಮ ಪ್ರಜೆಯಾಗಲು ಸಾಧ್ಯವಿದೆ. ಆದರೆ, ಆತನಿಗೆ ಸಂಸ್ಕಾರ ಬಲ ಬೇಕು. ಧರ್ಮದ ತಳಹದಿಯ ಮೇಲೆ ನಾವೆಲ್ಲ ಬದುಕಬೇಕಾಗಿದೆ. ಉತ್ತಮ ಜೀವನ ಮಾರ್ಗವೇ ನಮ್ಮ ಧರ್ಮ. ಪಾಶ್ಚಾತ್ಯ ದೇಶಗಳಲ್ಲಿ ನಿದ್ರಾಹೀನತೆ ಹೆಚ್ಚಾಗಿದೆ. ದಿಕ್ಕು,ದೆಸೆ ಇಲ್ಲದ ಬದುಕು ಅಲ್ಲಿದೆ. ಆದರೆ, ಕುಟುಂಬ ಧರ್ಮ ಭಾರತೀಯರನ್ನು ಶಾಂತಿ ಮಾರ್ಗದಲ್ಲಿ ನಡೆಸಿದೆ.

-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ.

ಡಾ.ಅಂಬೇಡ್ಕರ್ ಅವರು ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದರು. ಆಸ್ತಿಯ ಹಕ್ಕನ್ನು ನೀಡಿದರು. ಅಂತಹ ಮಹಾನ್ ಮಾನವತಾವಾದಿ ಕೊನೆಗೊಮ್ಮೆ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು, ಅವರ ಆದರ್ಶವಾದನ್ನು ಪ್ರತಿಬಿಂಬಿಸುತ್ತದೆ. ಜೀತಪದ್ಧತಿಯನ್ನು ಪ್ರಚೋದಿಸುವ ಧರ್ಮ ಅದು ಧರ್ಮವೇ ಅಲ್ಲಾ. ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವುದೇ ನಿಜವಾದ ಧರ್ಮ. ಆ ವಿಚಾರಗಳು ಈ ಮಠದಲ್ಲಿವೆ.

-ಆರ್.ಬಿ.ತಿಮ್ಮಾಪೂರ, ಜಿಲ್ಲಾ ಉಸ್ತುವಾರಿ ಸಚಿವ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ