ಹೊಸಪೇಟೆ: ಭಾರತದಲ್ಲಿ ಹುಟ್ಟಿರುವ ಯಾವ ಮಕ್ಕಳೂ ದಡ್ಡರಲ್ಲ, ಅವರಿಗೆ ನಮ್ಮಲ್ಲಿ ಹರಿಯುವ ರಕ್ತದ ಪರಿಚಯ ಮಾಡಿಸುವ ಕೆಲಸವನ್ನು ಪೋಷಕರು, ಶಿಕ್ಷಕರು ಮಾಡಬೇಕಿದೆ. ಅದರಲ್ಲಿ ಸಫಲತೆ ಸಾಧಿಸಿದರೆ ಯುವಜನತೆ ಬಹಳಷ್ಟು ಸಾಧನೆ ಮಾಡಲು ಸಾಧ್ಯವಿದೆ ಎಂದು ಗದಗ, ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಸಂಪೂರ್ಣ ನಾಶವಾಗಿತ್ತು, ಆದರೆ ಕೆಲವೇ ವರ್ಷಗಳಲ್ಲಿ ದೇಶ ಮತ್ತೆ ಎದ್ದುನಿಂತಿತು. ಇಂದು ಅದು ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ. ಜರ್ಮನರಿಗೆ ತಮ್ಮ ಶಕ್ತಿ ಸಾಮರ್ಥ್ಯದ ಅರಿವಿತ್ತು, ಹೀಗಾಗಿ ದೇಶವನ್ನು ಮತ್ತೆ ಮರುನಿರ್ಮಿಸಿದರು. ಇದೇ ರೀತಿ ನಮ್ಮಲ್ಲೂ ನಮ್ಮ ನಿಜವಾದ ಗುಣವನ್ನು ಅರಿತುಕೊಂಡು ಮುನ್ನಡೆಯಬೇಕಾಗಿದೆ ಎಂದರು.
ಇತಿಹಾಸಕಾರರಿಂದ ಅನ್ಯಾಯ:ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರೀಯತೆಯ ಪ್ರಬಲ ಕಿಚ್ಚು ನಮ್ಮೆಲ್ಲರಲ್ಲೂ ಇತ್ತು, ಆದರೆ ಸ್ವಾತಂತ್ರ್ಯ ಲಭಿಸಿದ ಬಳಿಕ ನಮ್ಮ ಇತಿಹಾಸಕಾರರು ನೈಜ ಇತಿಹಾಸವನ್ನು ಮರೆಮಾಚಿ ತಿರುಚಿದ ಇತಿಹಾಸವನ್ನೇ ಓದಿಕೊಳ್ಳುವಂತೆ ಮಾಡಿದರು. ದೇಶದಲ್ಲಿ 50ರಿಂದ 60 ವರ್ಷ ಕಾಲ ಇದೇ ನಡೆದುಹೋಯಿತು. ಶಿಕ್ಷಣದ ನೀತಿ ನಿರೂಪಣೆಯಲ್ಲಿ ತೊಡಗಿದ್ದ ಇಂತಹ ದೇಶದ್ರೋಹಿಗಳಿಂದಾಗಿಯೇ ನಮಗೆ ನಮ್ಮ ನೈಜ ಇತಿಹಾಸ ಗೊತ್ತಾಗದೆ ಹೋಯಿತು ಎಂದು ಸ್ವಾಮೀಜಿ ವಿಷಾದಿಸಿದರು.
ಸಂಸ್ಕೃತಿ, ಜೀವನ ಪದ್ಧತಿ, ಆಚಾರ, ವಿಚಾರಗಳಲ್ಲಿ ವಿದೇಶಿ ಅನುಕರಣೆ ಬೇಡ, ಆದರೆ ಸಾಮಾನ್ಯ ಜ್ಞಾನ, ಸಂಚಾರ ನಿಯಮ ಪಾಲನೆ ಸಹಿತ ಇನ್ನೂ ಹಲವು ವಿಚಾರಗಳಲ್ಲಿ ನಾವು ಅವರ ಅನುಕರಣೆ ಮಾಡಬೇಕಾಗಿದೆ ಎಂದರು.ವಿಶ್ವವಿಖ್ಯಾತ ವಿದ್ಯಾವಂತ ಆಗುವ ಛಲ ತೊಡಿ:
ಇನ್ನಷ್ಟು ತಿಳಿದುಕೊಳ್ಳಬೇಕು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಬೇಕು. ನಾನು ವಿಶ್ವವಿಖ್ಯಾತ ವಿದ್ಯಾವಂತ ಆಗಬೇಕು ಎಂಬ ಛಲ ತೊಟ್ಟು ಅದನ್ನು ಸಾಧಿಸುವ ಪ್ರಯತ್ನ ಮಾಡಿ, ಸ್ವಾಮಿ ವಿವೇಕಾನಂದರು ಇಂತಹ ವಿಶ್ವವಿಖ್ಯಾತ ವಿದ್ಯಾವಂತರಾಗಿದ್ದರು. ವಿಶ್ವಕೋಶದ ಮೇಲೆ ಕಣ್ಣಾಡಿಸಿ, ನಿಖರವಾಗಿ ಯಾವ ಪುಟದಲ್ಲಿ ಯಾವ ಮಾಹಿತಿ ಇದೆ ಎಂದು ಹೇಳುವಂತಹ ನೆನಪಿನ ಶಕ್ತಿ ಅವರಲ್ಲಿತ್ತು. ಗುರುಭಕ್ತಿ, ಬ್ರಹ್ಮಚರ್ಯ ಮತ್ತು ಜ್ಞಾನದಾಹಗಳೇ ಇದಕ್ಕೆ ಕಾರಣವಾಗಿತ್ತು. ಗುರುಭಕ್ತಿ ಇದ್ದರೆ ಗುರುಗಳು ಮಾಡುವ ಯಾವ ಪಾಠವೂ ಕಷ್ಟಕರ ಎನಿಸದು ಎಂದು ಸ್ವಾಮೀಜಿ ಸಲಹೆ ನೀಡಿದರು.ಉಪವಿಭಾಗಾಧಿಕಾರಿ ಪಿ.ವಿವೇಕಾನಂದ ಮಾತನಾಡಿ, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಓದುವ ಹವ್ಯಾಸ ಇಟ್ಟುಕೊಂಡರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಗೋಕಾಕದ ಶಾರದಾ ಶಕ್ತಿಪೀಠದ ಅಧ್ಯಕ್ಷರಾದ ಮಾತಾಜಿ ಶಿವಮಯಿ, ಕಿರ್ಲೋಸ್ಕರ್ ಫೆರಸ್ ಸಂಸ್ಥೆಯ ಎಂ.ಡಿ ರವಿ ಗುಮಾಸ್ತೆ, ಬಿಕೆಜಿ ಸಮೂಹದ ಸಂಸ್ಥಾಪಕ ಬಿ.ನಾಗನಗೌಡ, ಹೋಟೆಲ್ ಉದ್ಯಮಿ ಪಿ.ಡಿ.ಗೌತಮ್, ಸಂಚಾರ ಇನ್‌ಸ್ಪೆಕ್ಟರ್ ಹುಲುಗಪ್ಪ ಇತರರು ಇದ್ದರು. ಶಾರದಾಶ್ರಮದ ಮುಖ್ಯಸ್ಥರಾದ ಮಾತಾಜಿ ಪ್ರಬೋದಮಯಿ ಕಾರ್ಯಕ್ರಮ ಸಂಘಟಿಸಿದರು. ಸಂಜೆ ಮಾತೆ ಶಾರದಾದೇವಿಯವರ 174ನೇ ಜಯಂತ್ಯುತ್ಸವ ನಡೆಯಿತು.ಹೊಸಪೇಟೆ ಹಂಸಾಂಬಾ ಶಾರದಾಶ್ರಮದಲ್ಲಿ ಶನಿವಾರ ಸ್ವಾಮಿ ವಿವೇಕಾನಂದರ 164ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಗದಗ, ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು.