ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾ ಕ್ರೀಡಾಂಗಣದ ಆವರಣದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ತೆರಳಿ, ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಂಘಟನೆ ಮುಖಂಡರು, ಹರಿಹರ ತಾಲೂಕು ಕ್ರೀಡಾಂಗಣಕ್ಕೆ ಹೊಂದಿರುವಂತೆ ನಿರ್ಮಿಸಿರುವ 42 ವಾಣಿಜ್ಯ ಮಳಿಗೆಗಳಿಗೆ 2019ರ ಸಾಲಿನ ಅವಧಿ ಮುಕ್ತಾಯವಾಗಿದೆ. ಈವರೆಗೆ ಮರು ಹರಾಜು ಮಾಡಿಲ್ಲ. ಮಳಿಗೆಗಳ ಕಡಿಮೆ ಬಾಡಿಗೆಗೆ ಪಡೆದು, ಹೆಚ್ಚಿನ ಬಾಡಿಗೆಗೆ ಉಪ ಗುತ್ತಿಗೆ ನೀಡಿರುವ ಮೂಲ ಮಳಿಗೆಗಾರರು ಸರ್ಕಾರಕ್ಕೂ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿದ್ಯಾವಂತ ನಿರುದ್ಯೋಗಿಗಳು, ಬಡ, ಮಧ್ಯಮ ವರ್ಗದವರು ಸ್ವಾವಲಂಬಿಯಾಗಲು ಅನುಕೂಲವಾಗುವಂತೆ ಸ್ವಯಂ ಉದ್ಯೋಗ ಕೈಗೊಳ್ಳಲು ಮಳಿಗೆಗಳ ಸ್ಥಾಪಿಸಲಾಗಿದೆ. ಆದರೆ, ಕ್ರೀಡಾ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಅಸಡ್ಡೆಯಿಂದಾಗಿ ಸ್ವಾವಲಂಬಿ ಬದುಕಿಗೆ ಅವಕಾಶವಿಲ್ಲದಂತಾಗಿದೆ. ಈ ಮಳಿಗೆಗಳು ಸಾರ್ವಜನಿಕರಿಗೆ ಅತ್ಯವಶ್ಯಕವಾದ್ದರಿಂದ ಮರು ಹರಾಜು ಮೂಲಕ ಸರ್ಕಾರದ ಆದಾಯದ ಜೊತೆಗೆ ನಿರುದ್ಯೋಗಿಗಳಿಗೂ ಉದ್ಯೋಗ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.ಈಗಾಗಲೇ ಮರು ಹರಾಜು ಪ್ರಕ್ರಿಯೆ ಕೈಗೊಂಡು, ಅರ್ಜಿ ನೀಡಲಾಗಿದೆ. ಆದರೆ ಹಾಲಿ ಇರುವ ಮಳಿಗೆ ಬಾಡಿಗೆದಾರರು ನ್ಯಾಯಾಲಯದ ದಾವೆ ಹಾಕಿದ್ದರಿಂದ ಹರಾಜು ಪ್ರಕ್ರಿಯೆ ನಿಲ್ಲಿಸಲಾಗಿತ್ತು. ನ್ಯಾಯಾಲಯದ ಆದೇಶವಾಗಿ 8-10 ತಿಂಗಳು ಕಳೆದರೂ ಹರಾಜು ಪ್ರಕ್ರಿಯೆ ಮುಂದುವರಿಸಲು ಕ್ರೀಡಾ ಇಲಾಖೆ ಅಧಿಕಾರಿಗಳು ಆಸಕ್ತಿ ತೋರದೇ, ನಿರ್ಲಕ್ಷ್ಯ ತೋರುತ್ತಿರುವುದು ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ. ಇಂತಹ ಅಸಡ್ಡೆ ಮುಂದುವರಿದರೆ ತೀವ್ರ ಹೋರಾಟ ನಿಶ್ಚಿತ ಎಂದು ಎಚ್ಚರಿಸಿದರು.
ಸಂಘಟನೆ ಮುಖಂಡರಾದ ಎಸ್.ಗೋವಿಂದ, ಎಂ.ಆರ್.ಆನಂದ, ಸಿ.ಎಚ್.ಸುನಿಲಕುಮಾರ, ಭರತ್ ಭಾನುವಳ್ಳಿ, ಶಬರೀಶ, ವಿಜಯ ಪೈಲ್ವಾನ್, ಚಂದ್ರಪ್ಪ, ಅಪ್ಪುರಾಜ, ಪ್ರಭು, ಚಂದ್ರಪ್ಪ ಕುಣಿಬೆಳಕೆರೆ, ಸಿದ್ದು ಕುಣಿಬೆಳಕೆರೆ, ಅಶೋಕ, ನಾಗರಾಜ ಕೆ.ಜೆ.ಕಾಲನಿ ಇತರರಿದ್ದರು.
ಹರಿಹರ ತಾಲೂಕು ಕ್ರೀಡಾಂಗಣದ ಮಳಿಗೆಗಳ ಬಾಡಿಗೆ ನೀಡುವುದರಲ್ಲಿ ಬಂಡವಾಳಶಾಹಿಗಳು, ರಾಜಕಾರಣಿ ಬೆಂಬಲಿಗರು ಕೈಜೋಡಿಸಿ ಭ್ರಷ್ಟಚಾರ ನಡೆಸುತ್ತಿದ್ದಾರೆ. ಸರ್ಕಾರದಿಂದ 1500 ರು.ಗೆ ಬಾಡಿಗೆ ಪಡೆದು, ಇತರರಿಗೆ 18 ಸಾವಿರದವರೆಗೆ ಬಾಡಿಗೆಗೆ ಮಳಿಗೆಗಳ ನೀಡಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಅಸಡ್ಡೆ ತೋರುತ್ತಿದ್ದಾರೆ.
ಜಯ ಕರ್ನಾಟಕ ಸಂಘಟನೆ