ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ವಿಶ್ವಮಾತೃಭಾಷಾ ದಿನಾಚರಣೆ ಸಮಾರಂಭ ನಡೆಯಿತು. ಭೈರನಹಟ್ಟಿ-ಶಿರೋಳ ಮಠದ ಶಾಂತಲಿಂಗ ಶ್ರೀಗಳು ಉಪಸ್ಥಿತರಿದ್ದರು.
ನರಗುಂದ: ನಮ್ಮ ಮಾತೃಭಾಷೆಯಾದ ಕನ್ನಡವನ್ನು ನಾವು ಕಡೆಗಣಿಸದೆ, ಯುವ ಸಮುದಾಯ ಕನ್ನಡದ ಬಗ್ಗೆ ಹೆಚ್ಚು ಜಾಗೃತಿ ಮತ್ತು ಅಭಿಮಾನ ತೋರಬೇಕಾಗಿದೆ ಎಂದು ಭೈರನಹಟ್ಟಿ-ಶಿರೋಳ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವಮಾತೃಭಾಷಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಇತ್ತೀಚಿನ ವರದಿಗಳ ಪ್ರಕಾರ, ವಿಶ್ವದಾದ್ಯಂತ ಸುಮಾರು 7,000 ಭಾಷೆಗಳು ಬಳಕೆಯಲ್ಲಿದ್ದರೂ, ಔಪಚಾರಿಕ ಶಿಕ್ಷಣದಲ್ಲಿ ಕೇವಲ 351 ಭಾಷೆಗಳನ್ನಷ್ಟೇ ಬಳಸಲಾಗುತ್ತಿದೆ. ಜಾಗತೀಕರಣ, ನಗರೀಕರಣ ಮತ್ತು ಇಂಗ್ಲಿಷ್ ಭಾಷೆಯ ಪ್ರಾಬಲ್ಯದಿಂದ ಅನೇಕ ಸ್ಥಳೀಯ ಭಾಷೆಗಳು ಅಳಿವಿನಂಚಿಗೆ ತಲುಪಿದ್ದು ಕಳವಳದ ಸಂಗತಿ ಎಂದು ಹೇಳಿದರು.ಭಾಷೆ ಕೇವಲ ಸಂವಹನ ಸಾಧನವಲ್ಲ, ಅದು ಸಂಸ್ಕೃತಿ, ಪರಂಪರೆ, ಭಾವನೆ ಮತ್ತು ಅಸ್ತಿತ್ವದ ಪ್ರತೀಕವಾಗಿದೆ. ಆಂಗ್ಲ ಭಾಷೆಯ ಬೆನ್ನೇರಿರುವ ನಾವು ಕನ್ನಡವನ್ನು ಕಡೆಗಣಿಸುತ್ತಿದ್ದೇವೆ. ವರದಿಗಳ ಪ್ರಕಾರ ಸುಮಾರು 34 ಸಾವಿರ ಕನ್ನಡ ಶಾಲೆಗಳು ಮುಚ್ಚಲಾಗುತ್ತದೆ, ಇದು ದುರ್ದೈವದ ಸಂಗತಿ. ವಿಶ್ವ ಮಾತೃಭಾಷಾ ದಿನವು ಕೇವಲ ಆಚರಣೆಯ ದಿನವಲ್ಲ: ಅದು ಭಾಷಾ ಸಂರಕ್ಷಣೆಗೆ ಜಾಗೃತಿ ಮೂಡಿಸುವ ದಿನ. ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಬಳಸಿ, ಪ್ರಚಾರ ಮಾಡಿ, ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಉಪನ್ಯಾಸಕ ಪ್ರೊ. ಬಿ.ಎಂ. ಲಂಕೆನ್ನವರ ಮಾತನಾಡಿ, ಭಾಷಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಮಹತ್ವವನ್ನು ಜಗತ್ತಿಗೆ ನೆನಪಿಸುವ ವಿಶೇಷ ದಿನವಾಗಿದೆ. ಶಾಲೆಗಳಲ್ಲಿ ಮಾತೃಭಾಷಾ ಆಧಾರಿತ ಶಿಕ್ಷಣ ವ್ಯವಸ್ಥೆ, ಸ್ಥಳೀಯ ಸಾಹಿತ್ಯ ಮತ್ತು ಜನಪದ ಕಲೆಗಳ ಉತ್ತೇಜನ, ಡಿಜಿಟಲ್ ವೇದಿಕೆಗಳಲ್ಲಿ ಸ್ಥಳೀಯ ಭಾಷೆಗಳ ಬಳಕೆ, ಯುವಪೀಳಿಗೆಯಲ್ಲಿ ಭಾಷಾ ಗೌರವ ಮೂಡಿಸುವ ಅಭಿಯಾನಗಳು ನಡೆಸುವ ಮೂಲಕ ಕನ್ನಡ ಭಾಷೆಯನ್ನು ಬಲಪಡಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ನವಲಗುಂದದ ಗವಿಮಠದ ಶ್ರೀ ಬಸವಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿದ ವಿ.ಜಿ. ಬೋಗಾರ ಅವರನ್ನು ಶ್ರೀಮಠದಿಂದ ಗೌರವಿಸಲಾಯಿತು. ಶಿಕ್ಷಕ ಎಸ್.ಎಸ್. ಪಾಟೀಲ, ನಿವೃತ್ತ ಉಪನ್ಯಾಸಕ ಎಸ್.ಬಿ. ಭಜಂತ್ರಿ, ಪ್ರೊ. ರಮೇಶ ಐನಾಪುರ, ಪ್ರೊ. ಆರ್.ಬಿ. ಚಿನಿವಾಲರ ಇದ್ದರು. ಶಿಕ್ಷಕ ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.