ಲಕ್ಷ್ಮೇಶ್ವರ: ಬಡವರಿಗೆ ಹಸಿವು ನೀಗಿಸುವ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್‌ನ ಯೋಜನೆ ಪಟ್ಟಣದಲ್ಲಿ ಹಳ್ಳ ಹಿಡಿದಿದೆ. ಆಹಾರವೂ ಸ್ವಾದರಹಿತವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಆರೋಪಿಸಿದರು.
30- 40 ಜನರಿಗೆ ಆಗುವಷ್ಟು ಉಪಾಹಾರ ಮಾತ್ರ ತಯಾರಿಸುತ್ತಾರೆ. ಆನಂತರ ಬಂದವರಿಗೆ ಸಿಗುವುದಿಲ್ಲ. ಅಲ್ಲದೆ ಅಲ್ಲಿ ತಯಾರಿಸುವ ಆಹಾರ ಕಳಪೆಯಾಗಿದೆ. ಸರ್ಕಾರ ಇಂದಿರಾ ಕ್ಯಾಂಟೀನ್‌ಗೆ ಪ್ರತಿ ತಿಂಗಳು ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿದೆ. ಗ್ರಾಹಕರಿಂದ ಕೇವಲ ₹5- 10 ಪಡೆದು ತಿಂಡಿ ಮತ್ತು ಊಟ ನೀಡುವ ಗುತ್ತಿಗೆದಾರರು ಸರ್ಕಾರದಿಂದ ಹೆಚ್ಚಿನ ವೆಚ್ಚವನ್ನು ಅನುದಾನ ರೂಪದಲ್ಲಿ ಪಡೆದುಕೊಳ್ಳುತ್ತಾರೆ. ಆದ್ದರಿಂದ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರು ಮುಂದಿನ 2- 3 ದಿನಗಳಲ್ಲಿ ಗುಣಮಟ್ಟದ ಅಡುಗೆ ತಯಾರಿಸಿ, ಬಡಜನರಿಗೆ ಕೊಡಬೇಕು. ಇಲ್ಲವಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು.
ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹಾಗೂ ದುರಸ್ತಿ ಕಾಮಗಾರಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವುದು ಗಮನಕ್ಕೆ ಬಂದಿದೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸೇರಿಕೊಂಡು ಅನೇಕ ಕಾನೂನುಬಾಹಿರ ಕಾಮಗಾರಿ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿ, ಬಿಲ್ ಪಡೆದಿರುವ ಕುರಿತು ದೂರುಗಳು ಬಂದಿವೆ. ಹೈಮಾಸ್ಟ್ ದೀಪ ಅಳವಡಿಸುವ ಕಾಮಗಾರಿಯಲ್ಲಿ ಲೋಪ ನಡೆದಿರುವ ದೂರುಗಳು ಬಂದಿವೆ. ಇವುಗಳ ಕುರಿತು ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ಪಟ್ಟಣದ ಪುರಸಭೆಗೆ ನೀರು ಪೂರೈಕೆಯಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಿ ಮುಂದಿನ ದಿನಗಳಲ್ಲಿ 10- 12 ದಿನಗಳಿಗೊಮ್ಮೆ ನೀರು ಕೊಡುವ ಕಾರ್ಯ ಮಾಡುತ್ತೇವೆ. ₹37 ಲಕ್ಷಗಳ ವೆಚ್ಚದಲ್ಲಿ ಪೈಪ್ ದುರಸ್ತಿ ಕಾಮಗಾರಿ ಹಾಗೂ ಹೊಸ ಬಡಾವಣೆಯಲ್ಲಿನ 500 ಹೊಸ ಮನೆಗಳಿಗೆ ನಲ್ಲಿ ಜೋಡಿಸುವ ಕಾರ್ಯ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಗಂಗಾಧರ ಮೆಣಸಿನಕಾಯಿ, ಹಾಲಪ್ಪ ಸೂರಣಗಿ, ಕಿರಣ ಲಮಾಣಿ, ದುರ್ಗಪ್ಪ ಹರಿಜನ ಇದ್ದರು.