ಇಂದಿರಾ ಕ್ಯಾಂಟೀನ್‌ ಶೀಘ್ರ ಪ್ರಾರಂಭ

KannadaprabhaNewsNetwork |  
Published : Jun 27, 2025, 12:49 AM IST
23ಡಿಡಬ್ಲೂಡಿ4ಅಳ್ನಾವರದ ಬಸ್ ನಿಲ್ದಾಣದಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಇಂದಿರಾ ಕ್ಯಾಂಟಿನ. | Kannada Prabha

ಸಾರಾಂಶ

ರಾಜ್ಯ ಸರ್ಕಾರ ಜಿಲ್ಲಾ ಪಟ್ಟಣಗಳಿಗೆ ಸೀಮಿತಗೊಂಡಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ಹಂತ ಹಂತವಾಗಿ ಪ್ರತಿ ತಾಲೂಕಿಗೂ ವಿಸ್ತರಿಸಲಾಗುತ್ತಿದೆ. ಇದೀಗ ಅಳ್ನಾವರ ತಾಲೂಕಿನಲ್ಲೂ ಪ್ರಾರಂಭಿಸಿದ್ದು, ಇನ್ನೇನು ಉದ್ಘಾಟನೆಗಾಗಿ ಕ್ಷಣಗಣನೆ ಆರಂಭವಾಗಿದೆ.

ಶಶಿಕುಮಾರ ಪತಂಗೆ

ಅಳ್ನಾವರ: ಕೆಲವೇ ದಿನಗಳಲ್ಲಿ ಹಸಿದು ಬಂದ ಜನರಿಗೆ ಊಟ ಬಡಿಸಲು ಅಳ್ನಾವರದಲ್ಲಿ ಸಿದ್ಧವಾಗುತ್ತಿದೆ ಇಂದಿರಮ್ಮನ ಊಟದ ಮನೆ. ರಾಜ್ಯ ಸರ್ಕಾರ ಜಿಲ್ಲಾ ಪಟ್ಟಣಗಳಿಗೆ ಸೀಮಿತಗೊಂಡಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ಹಂತ ಹಂತವಾಗಿ ಪ್ರತಿ ತಾಲೂಕಿಗೂ ವಿಸ್ತರಿಸಲಾಗುತ್ತಿದೆ. ಇದೀಗ ಅಳ್ನಾವರ ತಾಲೂಕಿನಲ್ಲೂ ಪ್ರಾರಂಭಿಸಿದ್ದು, ಇನ್ನೇನು ಉದ್ಘಾಟನೆಗಾಗಿ ಕ್ಷಣಗಣನೆ ಆರಂಭವಾಗಿದೆ.

ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಿದೆ. ಜತೆಗೆ ಈ ಕಟ್ಟಡದಲ್ಲಿಯೇ ಗುಣಮಟ್ಟದ ಅಡುಗೆ ತಯಾರಿಕಾ ಯಂತ್ರಗಳು ಸಹ ಬಂದಿವೆ. ಅಳ್ನಾವರ ಸಣ್ಣ ತಾಲೂಕಾದರೂ ಕೂಡ ಅತಿ ಹೆಚ್ಚು ಕಟ್ಟಿಗೆ ಮತ್ತು ಇತರೆ ಕಾರ್ಮಿಕರಿಂದ ತುಂಬಿದ ಪಟ್ಟಣ. ಇಲ್ಲಿ ಪ್ರತಿದಿನ ನೂರಾರು ಕಾರ್ಮಿಕರು ಬೇರೆ ಊರುಗಳಿಂದ ಬರುತ್ತಾರೆ. ಜತೆಗೆ ತಾಲೂಕು ಕೇಂದ್ರವಾಗಿದ್ದು, ಪ್ರತಿನಿತ್ಯ ಸಾಕಷ್ಟು ಜನರು ತಮ್ಮ ಕೆಲಸ, ಕಾರ್ಯಗಳಿಗಾಗಿ ಇಲ್ಲಿಂದಲೇ ಸಂಚರಿಸುತ್ತಾರೆ. ಬಡವರಿಗೆ ಇನ್ನು ಮುಂದೆ ಕಡಿಮೆ ದರದಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಇಲ್ಲಿ ದೊರೆಯಲಿದೆ.

ಕಾರ್ಮಿಕ ಸಚಿವ ಸಂತೋಷ ಲಾಡ್‌, ಸ್ಥಳೀಯ ಶಾಸಕರಾಗಿದ್ದರಿಂದ ಇಲ್ಲಿನ ಕಾರ್ಮಿಕರಿಗೆ ಬಡವರಿಗೆ ಅನಕೂಲವಾಗುವ ದೃಷ್ಟಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಹಾಗೂ ಶೀಘ್ರವಾಗಿ ಇಂದಿರಾ ಕ್ಯಾಂಟೀನ್ ಕಾಮಗಾರಿ ಪೂರ್ಣಗೊಳ್ಳುವಂತೆ ಹಿಂದಿನ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದರು.

ಶೌಚದ ಬಳಿ ಕ್ಯಾಂಟೀನ್‌ ಬೇಡ: ಇಲ್ಲಿಯ ಬಸ್ ನಿಲ್ದಾಣದಲ್ಲಿನ ಶೌಚಾಲಯ ಗೋಡೆಗೆ ಹೊಂದಿಕೊಂಡೇ ಇಂದಿರಾ ಕ್ಯಾಂಟೀನ್‌ ಕಟ್ಟಡ ನಿರ್ಮಾಣವಾಗುತ್ತಿದೆ. ಆದ್ದರಿಂದ ಇದು ಊಟ ಮಾಡಲು ಯೋಗ್ಯವಾದ ಜಾಗೆಯಲ್ಲ. ಬದಲಾಗಿ ಪಟ್ಟಣದ ಬೇರೆ ಕಡೆಗೆ ಕ್ಯಾಂಟೀನ್ ಸ್ಥಳಾಂತರಿಸಬೇಕು ಎಂದು ಪ.ಪಂ ಅಧಿಕಾರಿಗಳಿಗೆ ಇಲ್ಲಿನ ಸಾರ್ವಜನಿಕರು ಮನವಿ ಸಲ್ಲಿಸಿದ್ದರು. ಆದರೆ, ಅನೇಕ ಚರ್ಚೆಗಳ ನಂತರ ನಿಲ್ದಾಣದ ಸಾರ್ವಜನಿಕ ಶೌಚಾಲಯಗಳನ್ನು ಶಾಸಕರ ಅನುದಾನದಡಿ ನಿಲ್ದಾಣದ ಬೇರೆ ಜಾಗದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿಸುವುದಾಗಿ ಭರವಸೆ ನೀಡಿದ್ದರು. ಆದರೆ. ಕ್ಯಾಂಟೀನ್ ಪ್ರಾರಂಭದ ಹಂತ ಬಂದರೂ ಇನ್ನೂ ಶೌಚಾಲಯಗಳು ಮಾತ್ರ ಅಲ್ಲಿಯೇ ಉಳಿದುಕೊಂಡಿವೆ.

ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕಾಗಿ ಶಾಸಕರ ಅನುದಾನದಡಿ ಲ್ಯಾಂಡ್‌ ಆರ್ಮಿಗೆ ಟೆಂಡರ್‌ ಆಗಿದ್ದು ಕಾಮಗಾರಿ ಪ್ರಾರಂಭದ ಹಂತದಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಿಲ್ದಾಣದ ಸಾರ್ವಜನಿಕ ಶೌಚಾಲಯದ ಕಾಮಗಾರಿಗಳು ಪ್ರಾರಂಭಗೊಳ್ಳುವ ಆಶಯ ಅಳ್ನಾವರ ಜನ ಹೊಂದಿದ್ದಾರೆ.

ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವುದರಿಂದ ಸ್ಥಳೀಯ ಕಾರ್ಮಿಕರಿಗೆ, ಬಡವರಿಗೆ ಜತೆಗೆ ಬೇರೆ ಕಡೆಗಳಿಂದ ಬರುವ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಅಳ್ನಾವರ ತಾಲೂಕು ಕಾರ್ಮಿಕ ಸಚಿವರ ಕಾರ್ಯಕ್ಷಮತೆಯಿಂದ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಉದ್ಯಮಿ ಹಸನ್‌ಅಲಿ ಶೇಖ ಹೇಳಿದರು.ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುವುದಕ್ಕಿಂತ ಮೊದಲೆ ನಿಲ್ದಾಣದಲ್ಲಿನ ಶೌಚಾಯಗಳು ಸ್ಥಳಾಂತರವಾಗಬೇಕು. ಇಲ್ಲವಾದಲ್ಲಿ ಸಾರ್ವಜನಿಕರು ಸೇರಿ ಹೋರಾಟ ಮಾಡಬೇಕಾಗುತ್ತದೆ. ಆದಷ್ಟು ಬೇಗನೆ ಈ ಶೌಚಾಲಯಗಳನ್ನು ಸ್ಥಳಾಂತರಿಸುವ ಕಾರ್ಯವಾಗಲಿ ಎಂದು ಹೋರಾಟಗಾರ ಪುಂಡಲೀಕ ಪಾರಧಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ