ಇನ್ನೂ ಕಾರ್ಯಾರಂಭವಾಗಿಲ್ಲ ಬಡಜನರ ಊಟಕ್ಕೆ ಆಶ್ರಯವಾಗಬೇಕಿದ್ದ ಇಂದಿರಾ ಕ್ಯಾಂಟೀನ್

KannadaprabhaNewsNetwork | Updated : Mar 27 2025, 12:44 PM IST

ಸಾರಾಂಶ

ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಶಾಸಕರು ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಭೂಪೂಜೆ ಮಾಡಿ ಐದು ತಿಂಗಳೂ ಗತಿಸಿದರೂ ಕ್ಯಾಂಟೀನ್ ಕಾಮಗಾರಿ ಮಾತ್ರ ಇನ್ನೂ ಮುಗಿದಿಲ್ಲ.

ಡಾ.ಸಿ.ಎಂ.ಜೋಶಿ

 ಗುಳೇದಗುಡ್ಡ : ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಶಾಸಕರು ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಭೂಪೂಜೆ ಮಾಡಿ ಐದು ತಿಂಗಳೂ ಗತಿಸಿದರೂ ಕ್ಯಾಂಟೀನ್ ಕಾಮಗಾರಿ ಮಾತ್ರ ಇನ್ನೂ ಮುಗಿದಿಲ್ಲ.

ಕ್ಯಾಂಟೀನ್ ಕಾರ್ಯಾರಂಭದ ಬಗ್ಗೆ 8 ತಿಂಗಳುಗಳ ಹಿಂದೆಯೇ ಸ್ಥಳ ಪರಿಶೀಲನೆ ನಡೆದಿತ್ತು. ಸಾರ್ವಜನಿಕರ ಒತ್ತಡಕ್ಕೆ ಮಣಿದು ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಈ ಕಟ್ಟಡ ಕಲ್ಲಿನಿಂದ ಅಥವಾ ಇಟ್ಟಿಗೆಯಿಂದ ನಿರ್ಮಿಸಿದ್ದಲ್ಲ. ಬದಲಾಗಿ ಸಿಮೆಂಟಿನ ರೆಡಿಮೆಡ್ ವಾಲ್‌ಗಳನ್ನು ಬೇರೆಕಡೆಯಿಂದ ತಂದು ಜೋಡಿಸಿದ್ದು. ಒಂದೆರಡು ದಿನಗಳಲ್ಲಿ ಈ ಕಾಮಗಾರಿ ಮುಗಿದಿದೆ. ಆದರೆ ಒಳಗಿನ ಮತ್ತು ಹೊರಗಿನ ಗಿಲಾವ್‌ ಸೇರಿದಂತೆ ಇತರೆ ಕಾಮಗಾರಿ ಆಗದೇ ಅಪೂರ್ಣವಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು, ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಸಾರ್ವಜನಿಕರಿಗೆ ಇಂದಿರಾ ಕ್ಯಾಂಟೀನ್ ಉಪಯೋಗವಾಗಲಿದೆ ಎಂಬ ಭರವಸೆ ಬಹಳೇ ಇತ್ತು. ಆದರೆ ಕಾಮಗಾರಿ ಸಂಪೂರ್ಣವಾಗಿ ಕಾರ್ಯಾರಂಭವಾಗದ ಕಾರಣ ಸಾರ್ವಜನಿಕರು ನಿತ್ಯ ಅದರತ್ತ ನೋಡುವಂತಾಗಿದೆ.

ಈ ಕ್ಯಾಂಟೀನ್‌ ಶುರುವಾದ್ರೆ ಸಾವಿರಾರು ಬಡಜನರ ಹೊಟ್ಟೆ ತುಂಬುತ್ತೆ:

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ನಿರ್ಮಿಸುವ ಯೋಜನೆ ಹಾಕಿಕೊಂಡಿತ್ತು. ಅದರಂತೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಲಾಗುತ್ತಿದೆ. ಈ ಕ್ಯಾಂಟೀನ್ ಎದುರಿಗೆ ಸರ್ಕಾರಿ ಹೈಸ್ಕೂಲ್, ಪಪೂ ಕಾಲೇಜು ಮತ್ತು ಪ್ರಥಮ ದರ್ಜೆ ಕಾಲೇಜು ಇದೆ. ಸಾವಿರಾರು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ವಿದ್ಯಾರ್ಜನೆಗೆ ಬರುತ್ತಾರೆ. ಪಕ್ಕದಲ್ಲಿ ಬಸ್ ನಿಲ್ದಾಣವಿದೆ. ಸರ್ಕಾರಿ ಆಸ್ಪತ್ರೆಯೂ ಹತ್ತಿರದಲ್ಲಿ ಇರುವುದರಿಂದ ನಿತ್ಯ ಬಡವರಿಗೆ, ವಿದ್ಯಾರ್ಥಿಗಳಿಗೆ, ಕೂಲಿಕಾರರಿಗೆ, ಕಡಿಮೆ ಬೆಲೆಯಲ್ಲಿ ತಿಂಡಿ ಸಿಗುತ್ತದೆ ಎಂಬ ಭರವಸೆ ಹೊತ್ತ ಜನತೆಗೆ ಇನ್ನೂ ಆರಂಭವಾಗದ ಇದರ ಸ್ಥಿತಿ ಕಂಡು ಜನ ಮರುಗುವಂತಾಗಿದೆ.

ಶ್ರೀಮಂತರು, ಕಾರು, ಬಂಗಲೆ ಹೊಂದಿರುವವರಿಗೆ ದೊಡ್ಡ ದೊಡ್ಡ ಹೋಟೆಲ್‌ಗಳಿದ್ದರೆ, ಬಡವರಿಗೆ, ಕೂಲಿ ವರ್ಗದ ಶ್ರಮಜೀವಿಗಳಿಗೆ ಇಂದಿರಾ ಕ್ಯಾಂಟೀನ್‌ ಅತೀ ಅಗತ್ಯವಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಅಕ್ಟೋಬರ್ 2024ರಲ್ಲಿ ಭೂಮಿ ಪೂಜೆ ಮಾಡಿದ ಸಂದರ್ಭದಲ್ಲಿ ಹೇಳಿದ್ದರು. ಕೇವಲ ಒಂದೆರಡು ತಿಂಗಳಲ್ಲಿ ಕ್ಯಾಂಟೀನ್ ಕಾರ್ಯಾರಂಭವಾಗುತ್ತದೆ ಎಂಬ ಭರವಸೆ ಬಹಳೇ ಇತ್ತು. ಆದರೆ ಯೋಜನೆ ಕೈಗೆತ್ತಿಕೊಂಡು ಸುಮಾರು 8 ತಿಂಗಳು ಗತಿಸಿದರೂ ಕ್ಯಾಂಟೀನ್ ಕಾಮಗಾರಿಯೇ ಮುಕ್ತಾಯವಾಗಲಿಲ್ಲ.

ಬಡಜನತೆ, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ನಿತ್ಯ ಕ್ಯಾಂಟೀನ್ ಆರಂಭಾಗುವ ದಿನಗಳನ್ನೇ ಲೆಕ್ಕ ಹಾಕುತ್ತಿದ್ದಾರೆ. ಶಾಸಕರು, ಸ್ಥಳೀಯ ಮುಖಂಡರು, ಪುರಸಭೆ ಅಧಿಕಾರಿಗಳು ಆದಷ್ಟು ಬೇಗ ಕಾಮಗಾರಿ ಮುಕ್ತಾಯಗೊಳಿಸಿ, ಕ್ಯಾಂಟೀನ್ ಆರಂಭಿಸಬೇಕೆಂದು ಜನತೆ ಆಗ್ರಹಿಸಿದ್ದಾರೆ.

5 ತಿಂಗಳು ಕಳೆದರೂ ಇಂದಿರಾ ಕ್ಯಾಂಟೀನ್ ಆರಂಭವಾಗಲಿಲ್ಲ. ಶಾಸಕರು ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಕಾಮಗಾರಿ ಬೇಗ ಮುಕ್ತಾಯಗೊಳಿಸಿ. ಕ್ಯಾಂಟೀನ್‌ನಲ್ಲಿ ಬಡವರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಕಡಿಮೆ ಹಣದಲ್ಲಿ ತಿಂಡಿ ಸಿಗುವಂತಾಗಲಿ.

ಸಂತೋಷ ನಾಯನೇಗಲಿ, ಸದಸ್ಯರು ಪುರಸಭೆ ಗುಳೇದಗುಡ್ಡ

ಇಂದಿರಾ ಕ್ಯಾಂಟೀನ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ವಿದ್ಯುತ್ ಸಂಪರ್ಕ ಹಾಗೂ ನೀರು ಪೂರೈಕೆ ಇತ್ಯಾದಿ ವಸ್ತುಗಳನ್ನು ತರಿಸಿದ್ದೇವೆ. ಇನ್ನೂ ಕೆಲದಿನಗಳ ಬಳಿಕ ಸಾರ್ವಜನಿಕರ ಉಪಯೋಗಕ್ಕೆ ಸಿದ್ಧಪಡಿಸುತ್ತೇವೆ.

ಎ.ಎಚ್.ಮುಜಾವರ ಮುಖ್ಯಾಧಿಕಾರಿ ಪುರಸಭೆ ಗುಳೇದಗುಡ್ಡ

Share this article